Advertisement
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಏಳು ದಿನ ಆಯೋಜನೆಯಾಗಿದ್ದ ಪುಸ್ತಕೋತ್ಸವಕ್ಕೆ ಭಾನುವಾರ ತೆರೆಬಿದ್ದಿದೆ. ಕನ್ನಡ ಸೇರಿದಂತೆ ಇತರೆ ಭಾಷೆ ಕೃತಿಗಳ ಉತ್ತಮ ಮಾರಾಟದ ಜತೆಗೆ ಮಕ್ಕಳ ಪುಸ್ತಕಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ.
Related Articles
Advertisement
ಕುವೆಂಪು, ಭೈರಪ್ಪ ಕೃತಿಗಳಿಗೆ ಬೇಡಿಕೆ: ರಾಷ್ಟ್ರಕವಿ ಕುವೆಂಪು, ವರ ಕವಿ ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸೇರಿದಂತೆ ಜನಪ್ರಿಯ ಸಾಹಿತಿಗಳು, ಕಾದಂಬರಿಕಾರರ ಕೃತಿಗಳನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.
ಕುವೆಂಪು ಅವರ ಜನಪ್ರಿಯ ಕಾದಂಬರಿ “ಮಲೆಗಳಲ್ಲಿ ಮದುಮಗಳು’, ಡಿವಿಜಿ ಅವರ “ಮಂಕುತಿಮ್ಮನ ಕಗ್ಗ’, ಎಸ್.ಎಲ್. ಭೈರಪ್ಪ ಅವರ “ಪರ್ವ’, “ಉತ್ತರಕಾಂಡ’, “ದಾಟು’, “ಗೃಹಭಂಗ’, “ಆವರಣ’ ಸೇರಿದಂತೆ ಹಲವು ಕಾದಂಬರಿಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಕನ್ನಡ ಸಾಹಿತ್ಯ ಕೃತಿಗಳ ಮೇಲೆ ಶೇ.10ರಿಂದ ಶೇ. 50ರ ರಿಯಾಯ್ತಿ ನೀಡಲಾಗಿತ್ತು. ಹೀಗಾಗಿ ಸುಮಾರು 50 ಲಕ್ಷ ರೂ. ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ. ಅಲ್ಲದೆ ಹಲವು ಕಾಲೇಜುಗಳು ಕೂಡ ಗ್ರಂಥಾಲಯ ಸಂಗ್ರಹಕ್ಕಾಗಿ ವಿವಿಧ ರೀತಿಯ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕೃತಿಗಳನ್ನು ಖರೀದಿಸಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಪಂಪ ಭಾರತಕ್ಕೆ ಬೇಡಿಕೆ: ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕೋತ್ಸವದಲ್ಲಿ ತೆರೆದಿದ್ದ ಮಳಿಗೆಗೂ ಸಾಕಷ್ಟು ಸಂಖ್ಯೆಯಲ್ಲಿ ಓದುಗರು ಭೇಟಿ ನೀಡಿದ್ದಾರೆ. “ಪಂಪಭಾರತ’,”ಆದಿಪುರಾಣ’, ಕವಿ ಸಿದ್ದಲಿಂಗಯ್ಯ ಅವರ ‘ಸಮಗ್ರ ಸಂಪುಟ’ ಸೇರಿದಂತೆ ಸುಮಾರು 30 ಸಾವಿರ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ “ಉದಯವಾಣಿ’ಗೆ ಹೇಳಿದ್ದಾರೆ.
ಕನ್ನಡಿಗರಲ್ಲಿ ಪುಸ್ತಕ ಕೊಂಡು ಓದುವ ಪ್ರವೃತ್ತಿ ಇನ್ನೂ ಇದೇ. ಮೈಸೂರು ದಸರಾ ಉತ್ಸವದಲ್ಲೂ ಕನ್ನಡ ಪುಸ್ತಕ ಮಳಿಗೆಗಳಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಪುಸ್ತಕೋತ್ಸವದಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆದಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪುಸ್ತಕೋತ್ಸವನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡಿದೆ.-ಎ.ಎನ್.ರಾಮಚಂದ್ರ, ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ * ದೇವೇಶ ಸೂರಗುಪ್ಪ