Advertisement

10 ನಿಮಿಷಕ್ಕೊಮ್ಮೆ ಬಾಂಬ್‌ ಸದ್ದು ಕೇಳುತ್ತಿತ್ತು ; ತಾಯ್ನಾಡಿಗೆ ಮರಳಿದ ಬ್ರಾಹ್ಮಿ ಪಾಟೀಲ

06:25 PM Mar 07, 2022 | Team Udayavani |

ಬೆಳಗಾವಿ: ಯುದ್ಧ ಪೀಡಿತ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವಿದ್ಯಾರ್ಥಿನಿ ಬ್ರಾಹ್ಮಿ ಪಾಟೀಲ ಅವರನ್ನು ಇಲ್ಲಿಯ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ರವಿವಾರ ಸ್ವಾಗತಿಸಲಾಯಿತು.

Advertisement

ಬೆಂಗಳೂರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಿಕ್ಕೋಡಿ ಪಟ್ಟಣದ ಬ್ರಾಹ್ಮಿ ಪಾಟೀಲ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್‌ ಕತ್ತಿ ಹಾಗೂ ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ ಬರಮಾಡಿಕೊಂಡರು. ಬ್ರಾಹ್ಮಿ ಪಾಟೀಲ ಅವರನ್ನು ಕರ್ನಾಟಕದ ನೋಡಲ್‌ ಅಧಿಕಾರಿಗಳು ವಿಮಾನ ಮೂಲಕ ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ವಾಪಸ್‌ ಕರೆತಂದಿದ್ದಾರೆ. ವಿಮಾಣ ನಿಲ್ದಾಣದಲ್ಲಿ ಮಗಳನ್ನು ಕಂಡ ಪೋಷಕರು ಸಂತಸಪಟ್ಟರು.ತಾಯಿ-ಮಗಳು ತಬ್ಬಿಕೊಂಡರು.

ಉಕ್ರೇನ್‌ ದೇಶದ ಚರ್ನಿವೇಸ್ಟ್‌ನ ಬೊಕೊ ಯುನಿಯನ್‌ ಸ್ಟೆಟ್‌ ಮೆಡಿಕಲ್‌ ವಿವಿಯಲ್ಲಿ ಎಂಬಿಬಿಎಸ್‌ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬ್ರಾಹ್ಮಿ ಪಾಟೀಲ ಯುದ್ಧದಿಂದಾಗಿ ಆತಂಕಕ್ಕೀಡಾಗಿದ್ದರು. ಯುದ್ದ ಘೋಷಣೆಯಾದ ದಿನ ಕೀವ್‌ ವಿಮಾನ ನಿಲ್ದಾಣದಲ್ಲಿ ಬ್ರಾಹ್ಮಿ ಸಿಲುಕಿಕೊಂಡಿದ್ದರು.

ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟವಿತ್ತು. ಕೀವ್‌ ವಿಮಾನ ನಿಲ್ದಾಣದಲ್ಲಿ ಇದ್ದಾಗ ಹತ್ತು ನಿಮಿಷಕ್ಕೊಮ್ಮೆ ಬಾಂಬ್‌ ಸದ್ದು ಕೇಳಿಸುತ್ತಿತ್ತು. ಜೀವಂತವಾಗಿ ಬದುಕಿ ಬರುತ್ತೇವೋ ಇಲ್ಲವೋ ಎಂಬ ಭಯ ಇತ್ತು. ಇನ್ನೂ ಅನೇಕ ಭಾರತೀಯರು ಉಕ್ರೇನ್‌ನಲ್ಲಿ ಇದ್ದಾರೆ. ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಿ ಎಂದು ಬ್ರಾಹ್ಮಿ ಭಾವುಕರಾದರು.

ಕೀವ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದೆವು. ಫೆ. 24ರಂದು ನಾವು ವಾಪಸಾಗಲು ಟಿಕೆಟ್‌ ಬುಕ್‌ ಆಗಿತ್ತು. ಆದರೆ ಬಾಂಬ್‌ ದಾಳಿ ಆರಂಭವಾದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಪಡಿಸಲಾಗಿತ್ತು. ಬಂಕರ್‌ಗಳಲ್ಲಿ ಕೆಲವು ದಿನಗಳ ಕಾಲ ಇದ್ದು ಅಲ್ಲಿಯೇ ಊಟ, ಉಪಹಾರ. ಕೀವ್‌ನಿಂದ ರೈಲಿನ ಮೂಲಕ ಗಡಿ ತಲುಪಿದೆವು ಎಂದು ಬ್ರಾಹ್ಮಿ ತಿಳಿಸಿದರು.

Advertisement

ಖಾರ್ಕಿವ್‌, ಕೀವ್‌ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕು. ನಮ್ಮ ವಿಶ್ವವಿದ್ಯಾಲಯದಲ್ಲಿದ್ದ ಕರ್ನಾಟಕದವರು ಸೇರಿದಂತೆ ದೇಶದ ಬಹುತೇಕರು ವಾಪಸ್‌ ಆಗಿದ್ದಾರೆ. ರೊಮೇನಿಯಾ ಸರ್ಕಾರದವರೂ ಸಹಾಯ ಮಾಡಿದರು. ಕೆಲವರು ಪೋಲೆಂಡ್‌ ದೇಶಕ್ಕೆ ಹೋಗಿದ್ದಾರೆ. ಕೆಲವರು ಇನ್ನು ಕೆಲವು ದಿನಗಳಲ್ಲಿ ಬರುವವರಿದ್ದಾರೆ ಎಂದು ಹೇಳಿದರು.

ಉಕ್ರೇನ್‌ದಿಂದ ವಾಪಾಸ್‌ ಆದ ವಿದ್ಯಾರ್ಥಿನಿಗೆ ಸ್ವಾಗತಿಸಿಕೊಂಡ ಬಳಿಕ ಮಾತನಾಡಿದ ಸಚಿವ ಉಮೇಶ ಕತ್ತಿ, ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿನಿ ಉಕ್ರೇನ್‌ಗೆ ಹೋಗಿದ್ದಳು. ಉಕ್ರೇನ್‌  ರಷ್ಯಾ ನಡುವಿನ ಯುದ್ಧ ಮಧ್ಯೆ ಅವಳು ಮರಳಿ ಭಾರತಕ್ಕೆ ಬಂದಿರುವುದು ಸಂತೋಷವಾಗಿದೆ. ಉಕ್ರೇನ್‌ನಿಂದ ಸುಮಾರು ಹದಿನೈದು ಸಾವಿರ ಜನ ವಾಪಸ್‌ ಬಂದಿದ್ದಾರೆ. ಇನ್ನೂ ಅನೇಕರು ವಾಪಾಸ್‌ ಬರುವವರಿದ್ದಾರೆ. ಆ ಎಲ್ಲರನ್ನೂ ವಾಪಾಸ್‌ ಕರೆದುಕೊಂಡು ಬರಲು ಪ್ರಧಾನಿ ಮೋದಿಯವರು ನಾಲ್ವರು ಸಚಿವರನ್ನು ನಿಯೋಜಿಸಿದ್ದಾರೆ. 2-3 ದಿನಗಳಲ್ಲಿ ದಿನಗಳಲ್ಲಿ ಎಲ್ಲರೂ ವಾಪಸ್‌ ಬರಲಿದ್ದಾರೆ ಎಂದರು.

ಆಪರೇಷನ್‌ ಗಂಗಾ ಬಗ್ಗೆ ಕಾಂಗ್ರೆಸ್‌ ನಾಯಕರು ಲೇವಡಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಉಕ್ರೇನ್‌ನಿಂದ ಬರುವವರನ್ನು ಸ್ವಾಗತಿಸಿಕೊಳ್ಳೋಣ. ನಂತರ ಕಾಂಗ್ರೆಸ್‌ನವರು ಏನು ಮಾತನಾಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ದೇಶದ ಮಕ್ಕಳನ್ನು ತಂದು ಅವರವರ ಊರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದೆ ಎಂದು ಹೇಳಿದರು.

ಹಾವೇರಿಯ ವಿದ್ಯಾರ್ಥಿ ನವೀನ್‌ ಮೃತದೇಹ ಭಾರತಕ್ಕೆ ಕರೆ ತರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಕತ್ತಿ, ಮೃತದೇಹ ಎಲ್ಲಿಯೂ ಹೋಗಿಲ್ಲ. ಅದನ್ನು ಉಕ್ರೇನ್‌ನಿಂದ ತಂದೇ ತರುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಹೇಳಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ 20 ಜನ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಈಗಾಗಲೇ 9 ಜನ ವಿದ್ಯಾರ್ಥಿಗಳು ವಾಪಸ್‌ ಬಂದಿದ್ದಾರೆ. ಇನ್ನೂ ಓರ್ವ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇದ್ದಾರೆ. ಇನ್ನೂ 7 ಜನ ದೆಹಲಿ ತಲುಪಿದ್ದು, ಬೆಳಗಾವಿಗೆ ವಾಪಸ್‌ ಬರಲಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಮುಖ್ಯಮಂತ್ರಿಗಳ ಸೂಚನೆ ಇದೆ. ಇನ್ನೂ ಮೂರು ಜನರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next