ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79) ಅವರು ಯಕೃತ್ ಸಮಸ್ಯೆಯಿಂದ ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ 3.30 ಕ್ಕೆ ಹಳೆಕೋಟೆ ನಿವಾಸಕ್ಕೆ ಆಗಮಿಸಿತು.
ಪಾರ್ಥೀವ ಶರೀರ ಸ್ವಗೃಹಕ್ಕೆ ಆಗಮಿಸುತ್ತಿದ್ದಂತೆ ಬೆಳ್ತಂಗಡಿ ಶೋಕಸಾಗರದಲ್ಲಿ ಮುಳುಗಿತ್ತು. ಬಳಿಕ ಕುಟುಂಬ ವರ್ಗಕ್ಕೆ ಮನೆಯಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಥಿವ ಶರೀರದ ಅಂತಿಮ ವಿಧಿ ನೆರವೇರಿಸಿ ಬಳಿಕ ಕೊಂಚ ಸಮಯ ಅವರ ಆಪ್ತ ಅಭಿಮಾನಿ ವರ್ಗಕ್ಕೆ ಅಂತಿಮನ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಶಾಸಕ ಹರೀಶ್ ಪೂಂಜ ಬಂಗೇರರ ಅಂತಿಮ ದರ್ಶನ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಂತಿಮ ನಮನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸ್ಥಳದಲ್ಲಿದ್ದು ಸಹಕರಿಸಿದರು.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಳೆಕೋಟೆ ಮನೆಯಿಂದ ಬೆಳ್ತಂಗಡಿ ತಾಲೂಕು ಕ್ರೀಡಾಂಗಣಕ್ಕೆ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸಾರ್ವಜನಿಕ ದರ್ಶನಕ್ಕಾಗಿ ಕೊಂಡೊಯ್ಯಲಾಯಿತು.
ತಾಲೂಕು ಕ್ರೀಡಾಂಗಣದಲ್ಲಿ ಬಂಗೇರರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದು, ಕಳೆದ ರಾತ್ರಿಯಿಂದಲೇ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ.
ಸಿಎಂ, ಡಿಸಿಎಂ ಭಾಗಿ
ಮಧ್ಯಾಹ್ನ ವೇಳೆಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕುವೆಟ್ಟು ಗ್ರಾಮದ ಕೇದೆ ಹೊಸಮನೆಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುನಾರ್, ಸಚಿವರು, ಶಾಸಕರು, ಅವರ ಆಪ್ತ ವಲಯ ಪಾಲ್ಗೊಳ್ಳಲಿದೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಕಂಡ ಬಂಗಾರ:
ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ರಾಜ್ಯ ಕಂಡ ಅಪ್ರತಿಮ ನಾಯಕ. ಅಭಿಮಾನಿ ವರ್ಗದಿಂದ ಬೆಳ್ತಂಗಡಿಯ ಬಂಗಾರ ಎಂದೇ ಕರೆಸಿಕೊಂಡಿದ್ದ ಅವರು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ನಡೆಯ ಮೂಲಕ ಬಡವರ್ಗದ ಧ್ವನಿಯಾಗಿದ್ದರು.
ಬಂಗೇರರನ್ನು ಕಳೆದುಕೊಂಡ ಅವರ ಆಪ್ತರಲ್ಲಿ ಓರ್ವರಾಗಿದ್ದ ವೇಗಸ್ ಎಂಬವರು ಇತ್ತೀಚೆಗೆ ಅಪಘಾತಕ್ಕೊಳಗಾಗಿದ್ದರು. ಅವರು ಆಂಬ್ಯುಲೆನ್ಸ್ ನಲ್ಲೇ ಬಂದು ಅಂತಿಮ ದರ್ಶನ ಪಡೆದರು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಅಂತಿಮ ದರ್ಶನ ಪಡೆದರು.