Advertisement

ಬೋಟ್‌ ಕಾಣೆಯಾಗಿ 38 ದಿನ ಮಿಲಿಟರಿ ಕಾರ್ಯಾಚರಣೆಗೆ ಆಗ್ರಹ

12:50 AM Jan 22, 2019 | Team Udayavani |

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ಅವಘಡವಾಗಿರುವ ಬಗ್ಗೆ ಯಾವುದೇ ಸುಳಿವಿಲ್ಲ. ಅಹರಣವಾಗಿರುವ ಶಂಕೆಯೇ ಅಧಿಕವಾಗಿದ್ದು, ಕೇಂದ್ರ ಸರಕಾರವು ಮಹಾರಾಷ್ಟ್ರದ ಬಂದರು ಭಾಗದ ನದಿತೀರದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಬೇಕು ಎಂದು ಮೀನುಗಾರರ ಕುಟುಂಬಗಳು ಆಗ್ರಹಿಸಿವೆ.

Advertisement

ಸುವರ್ಣ ತ್ರಿಭುಜ ಬೋಟ್‌, 7 ಮಂದಿ ಮೀನುಗಾರರು ನಾಪತ್ತೆಯಾಗಿ 38 ದಿನ ಕಳೆದಿವೆ. ನೌಕಾಪಡೆ ಹಡಗಿನ ಮೂಲಕ ಸಾಕಷ್ಟು ಕಾರ್ಯಾಚರಣೆ ನಡೆಸಿದರೂ ಮಹತ್ವದ ಸುಳಿವು ಲಭಿಸಿಲ್ಲ. ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದಲ್ಲಿರುವ ನಮ್ಮ ಜನಪ್ರತಿನಿಧಿಗಳು ಕೇಂದ್ರಕ್ಕೆ ಒತ್ತಡ ಹೇರಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಸಹಕಾರ
ನದಿಗಳಲ್ಲಿ ಶೋಧ ಕಾರ್ಯ ವ್ಯವಸ್ಥಿತ ಮತ್ತು ಯೋಜನಾಬದ್ಧವಾಗಿ ನಡೆದಿಲ್ಲ. ಮಹಾರಾಷ್ಟ್ರ ಭಾಗದಲ್ಲಿ ಅಲ್ಲಿನ ಯಾವುದೇ ಇಲಾಖೆಗಳು ಕಾರ್ಯಾಚರಣೆಗೆ ಸೂಕ್ತ ಸಹಕಾರ ನೀಡಿಲ್ಲ. ಪೊಲೀಸರು ಬಂದರು ಸಮೀಪದ 500 ಮೀಟರ್‌ ದೂರಕ್ಕಷ್ಟೇ ತೆರಳಿ ವಾಪಸು ಬಂದಿದ್ದಾರೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೀನುಗಾರರು ಆರೋಪಿಸಿದ್ದಾರೆ.

ಬೋಟ್‌ ಢಿಕ್ಕಿ ಸಾಧ್ಯತೆ ಕಡಿಮೆ
ಭಾರತೀಯ ನೌಕಾಪಡೆಯ ಸೂಚನೆಯಂತೆ ರಾತ್ರಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ಗಳಿಗೆ ಸಿಗ್ನಲ್‌ ಲೈಟ್‌ನ ನಿಯಮ ಇದೆ. ಬೋಟ್‌ ಟ್ರಾಲಿಂಗ್‌ನಲ್ಲಿರುವ ಬೋಟಿನ ಮುಂಭಾಗ ಮತ್ತು ಹಿಂಭಾಗದ ದೀಪ, ನಿಂತಿರುವ ಸಮಯದಲ್ಲಿ ಹಿಂಭಾಗ, ಮುಂಭಾಗ ಅಲ್ಲದೆ ಎಡ ಮತ್ತು ಬಲಬದಿಯಲ್ಲಿ ಲೈಟ್‌ ಉರಿಸಿರಬೇಕು.
ಬೋಟ್‌ಗಳ ದೀಪದ ಸೂಚನೆಯ ಆಧಾರದಲ್ಲಿ ಹಡಗುಗಳ ಸಂಚಾರ ನಡೆಯುತ್ತವೆ. ಹಾಗಾಗಿ ಹಡಗು ಢಿಕ್ಕಿಯಾಗಿರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಆಳಸಮುದ್ರದ ಮೀನುಗಾರಿಕೆಯಲ್ಲಿ ನಿರತರಾದವರು.

ಊಟ ತಿಂಡಿ ಕೊಟ್ಟಿದ್ದಾರೋ?
ಅಪಹರಣಕಾರರು ನಮ್ಮವರಿಗೆ ಸರಿಯಾಗಿ ಊಟ ತಿಂಡಿ ಕೊಟ್ಟಿದ್ದಾರೋ? ಎಷ್ಟು ಚಿತ್ರ ಹಿಂಸೆ ನೀಡುತ್ತಿದ್ದಾರೆಯೋ? ಅವರು ಮನುಷ್ಯರಾ? ನನ್ನ ಕೈಗೆ ಸಿಗಬೇಕು. ತುಂಡು ತುಂಡು ಮಾಡಿ ಕತ್ತರಿಸಿ ಬಿಡುತ್ತಿದ್ದೆ 
ಎಂದು ನಾಪತ್ತೆಯಾದ ಮೀನುಗಾರ ದಾಮೋದರ ಅವರ ಅಕ್ಕ ರಮಣಿ ಆಕ್ರೋಶವನ್ನು ವ್ಯಕ್ತಪಡಿಸಿದರು. 
ಸಮುದ್ರದಲ್ಲಿ  ಹುಡುಕಾಟ ನಡೆಸಿದ್ದಾರೆ. ಭೂಭಾಗದಲ್ಲಿ ಪರಿಣಾಮಕಾರಿ ಹುಟುಕಾಟ ನಡೆದಿಲ್ಲ. ಸರಕಾರ ಭೂಸೇನೆಯನ್ನು ಕಳುಹಿಸಿ ಹುಡುಕಾಟ ನಡೆಸಿದರೆ ಉತ್ತಮ.
– ಉದಯ ಬಂಗೇರ 
(ದಾಮೋದರ ಅವರ ಭಾವ)

Advertisement
Advertisement

Udayavani is now on Telegram. Click here to join our channel and stay updated with the latest news.

Next