Advertisement

ಮರಾಠರ ಅಸ್ಮಿತೆಗೆ ಬಿದ್ದ ಪೆಟ್ಟು ವಾಂಖೆಡೆ ಸ್ಟೇಡಿಯಂ ನಿರ್ಮಾಣಕ್ಕೆ ಕಾರಣವಾಯ್ತು!

05:25 PM Sep 22, 2022 | Team Udayavani |

ವಾಂಖೆಡೆ ಕ್ರಿಕೆಟ್ ಸ್ಟೇಡಿಯಂ.. ಹಲವು ದಶಕಗಳಿಂದ ಭಾರತೀಯ ಕ್ರಿಕೆಟ್ ನ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಮೈದಾನವಿದು. 2011ರ ವಿಶ್ವಕಪ್ ಫೈನಲ್, ಸಚಿನ್ ತೆಂಡೂಲ್ಕರ್ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯ.. ಹೀಗೆ ಬಹಳಷ್ಟು ಅಭೂತಪೂರ್ವ ಘಳಿಗೆಗಳಿಗೆ ವಾಂಖೆಡೆ ಸಾಕ್ಷಿಯಾಗಿದೆ. ಈ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಹಿಂದೆ ಒಂದು ರೋಚಕ ಕಥೆಯಿದೆ. ಈ ಲೇಖನದ ಮುಖ್ಯ ವಸ್ತು ಅದುವೆ. ಆದರೆ ಅದಕ್ಕೂ ಮೊದಲು ವಾಂಖೆಡೆ ಸ್ಟೇಡಿಯಂಗೆ ಕೆಲವೇ ದೂರವಿರುವ ಬ್ರೆಬೋರ್ನ್ ಸ್ಟೇಡಿಯಂನ ಹಿನ್ನೆಲೆ ತಿಳಿದುಕೊಳ್ಳಲೇ ಬೇಕು.

Advertisement

ಅದು ಸ್ವಾತಂತ್ರ್ಯ ಪೂರ್ವ ಕಾಲ. ಇಂಗ್ಲೀಷರು ತಮ್ಮ ವಸಾಹತು ದೇಶಗಳಲ್ಲಿ ಕ್ರಿಕೆಟ್ ಆಟದ ಪ್ರಚಾರ ಮಾಡಿದ್ದರು. 1933ರಲ್ಲಿ ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಿತು. ಅದೇ ವರ್ಷ ದಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಸ್ಥಾಪನೆಯಾಗಿತ್ತು. ಸಿಸಿಐ ತಮ್ಮದೇ ಆದ ಒಂದು ಸ್ಟೇಡಿಯಂ ನಿರ್ಮಾಣಕ್ಕೆ ಒಲವು ತೋರಿದ್ದ ಸಮಯವದು. ಆದರೆ ಮುಂಬೈನಲ್ಲಿ ಮೈದಾನಕ್ಕೆ ಬೇಕಾದ ಜಾಗದ ಸಮಸ್ಯೆ ಎದುರಾಗಿತ್ತು. ಪರಿಸ್ಥಿತಿ ಹೇಗಿತ್ತೆಂದರೆ ಜಾಗ ಖರೀದಿ ಮಾಡಲೂ ಸಿಸಿಐ ಬಳಿ ಹಣ ಇರಲಿಲ್ಲ. ಆಗ ಸಿಸಿಐ ಕಾರ್ಯದರ್ಶಿಯಾಗಿದ್ದ ಆ್ಯಂಟನಿ ಡಿಮೆಲ್ಲೋ ಗೆ ಕ್ರೂಸೋ ಎಂಬ ಒಬ್ಬ ಗೆಳೆಯರಿದ್ದರು. ಈ ಕ್ರೂಸೋ ಖ್ಯಾತ ಚಿತ್ರ ಕಲಾವಿದ. ಗೆಳೆಯ ಡಿಮೆಲ್ಲೋ ಬಳಿ ಕ್ರಿಕೆಟ್ ಮೈದಾನದ ವಿಚಾರವನ್ನು ಅವರೂ ತಿಳಿದಿದ್ದರು.

ಒಮ್ಮೆ ಕ್ರೂಸೋ ಆಗಿನ ಮುಂಬೈ ಗವರ್ನರ್ ರ ಚಿತ್ರ ಬಿಡಿಸುತ್ತಿದ್ದರು, ಈ ವೇಳೆ ಕ್ರೂಸೊ, ಬ್ರಿಟಿಷರೇ ಹುಟ್ಟುಹಾಕಿದ ಕ್ರೀಡೆಗಾಗಿ ಪುಕ್ಕಟೆಯಾಗಿ ಜಾಗ ನೀಡಬಹುದಲ್ಲ ಎಂದು ಕೇಳಿ ಬಿಟ್ಟಿದ್ದರು. ಆದರೆ ದುಬಾರಿ ಜಾಗವನ್ನು ಕೊಡಲು ಗವರ್ನರ್ ಮುಂದಾಗಿರಲಿಲ್ಲ. ಆಗ ಗವರ್ನರ್ ಎದುರು ಹೊಸ ದಾಳ ಉರುಳಿಸಿದ್ದರು. ‘ನಿಮಗೆ ಸರ್ಕಾರಕ್ಕೆ ಹಣ ಬೇಕಾ ಅಥವಾ ನಿಮ್ಮ ಹೆಸರು ಶಾಶ್ವತವಾಗಬೇಕೆ? ಒಂದು ವೇಳೆ ಜಾಗ ನೀಡಿದರೆ ಸ್ಟೇಡಿಯಂ ಗೆ ನಿಮ್ಮದೇ ಹೆಸರು ಇಡುತ್ತೇವೆ’ ಎಂದು ಬಿಟ್ಟರು ಕ್ರೂಸೋ. ಹೆಸರಿನ ಆಮಿಷಕ್ಕೆ ಬಿದ್ದ ಗವರ್ನರ್, ಸಿಸಿಐ ಗೆ 90000 ಚದರ ಅಡಿಯ ಜಾಗವನ್ನು ನೀಡಿದರು. ಒಂದು ಚದರ ಅಡಿಗೆ 13.50 ರೂ ಅಂತೆ ಜಾಗ ನೀಡಿದ್ದರು. ಇದರಂತೆ ಸಿಸಿಐ ಭವ್ಯ ಸ್ಟೇಡಿಯಂ ನಿರ್ಮಾಣ ಮಾಡಿತ್ತು. 1936 ಮೇ 22ರಂದು ಬಾಂಬೆ ಗವರ್ನರ್ ಲಾರ್ಡ್ ಬ್ರೆಬೋರ್ನ್ ಈ ಸ್ಟೇಡಿಯಂ ನ ಉದ್ಘಾಟನೆ ಮಾಡಿದರು. ಮಾತು ಕೊಟ್ಟಂತೆ ಸ್ಟೇಡಿಯಂ ಗೆ ಬ್ರೆಬೊರ್ನ್ ಅವರ ಹೆಸರೇ ಇಡಲಾಯಿತು.

ಈಗ ವಾಂಖೆಡೆ ಸ್ಟೇಡಿಯಂ ಕಥೆಗೆ ಬರೋಣ. 1970ರಲ್ಲಿ ಬಾಂಬೆ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಆ ಸಮಯದಲ್ಲಿ ಬಾಂಬೆಯಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುತ್ತಿತ್ತು. ಆದರೆ ಅವರಿಗೆ ಕ್ರಿಕೆಟ್ ಮೈದಾನವಿರಲಿಲ್ಲ. ಹೀಗಾಗಿ ಅವರು ಸಿಸಿಎಯ ನಿಯಂತ್ರಣದ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಸುತ್ತಿತ್ತು. ಹೀಗಾಗಿ ಟಿಕೆಟ್ ಮತ್ತು ಪ್ರಾಫಿಟ್ ಶೇರಿಂಗ್ ವಿಚಾರದಲ್ಲಿ ಎರಡು ಬೋರ್ಡ್ ಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬಿಸಿಎ ಗೆ ತಮ್ಮ ಪಾಲಿನ ಟಿಕೆಟ್ ಗಳು ಸಿಗುತ್ತಿರಲಿಲ್ಲ. ಸಿಸಿಎ ಈಗಾಗಲೇ ನಷ್ಟದಲ್ಲಿ ನಡೆಯುತ್ತಿದ್ದು, ಆದಾಯದ ಹೆಚ್ಚಿನ ಪಾಲನ್ನು ಬಿಸಿಎ ಗೆ ನೀಡಲು ಸಾಧ್ಯವೇ ಇಲ್ಲವೆಂದು ಹೇಳಿತ್ತು.

ಆಗ ಬಿಸಿಎ ಅಧ್ಯಕ್ಷರಾಗಿದ್ದವರು ರಾಜಕಾರಣಿ ಶೇಷರಾವ್ ವಾಂಖೆಡೆ. ಆ ಸಮಯಲ್ಲಿ ಬಿಸಿಎ ಚಾರಿಟಿ ಪಂದ್ಯಗಳನ್ನು ನಡೆಸುತ್ತಿತ್ತು. ಒಮ್ಮೆ ಕೆಲವು ಶಾಸಕರು ಬಂದು ಒಂದು ಚಾರಿಟಿ ಪಂದ್ಯ ನಡೆಸೋಣ ಎಂದು ಶೇಷರಾವ್ ವಾಂಖೆಡೆ ಬಳಿ ಕೇಳಿದ್ದರು. ಅದಕ್ಕೆ ವಾಂಖೆಡೆಯವರೂ ಒಪ್ಪಿದ್ದರು. ಇದೇ ಪ್ರಸ್ತಾಪವನ್ನು ಆಗಿನ ಸಿಸಿಐ ಅಧ್ಯಕ್ಷ ವಿಜಯ್ ಮರ್ಚಂಟ್ ಬಳಿ ಇಟ್ಟರು. ಆದರೆ ಒಂದು ಪಂದ್ಯಕ್ಕೆ ಬ್ರೆಬೋರ್ನ್ ಸ್ಟೇಡಿಯಂ ನೀಡಲು ವಿಜಯ್ ಮರ್ಚಂಟ್ ಒಪ್ಪಲಿಲ್ಲ. ಚರ್ಚೆ ಜೋರಾಯಿತು, ಸಿಡಿದ ವಾಂಖೆಡೆಯವರು ನೀವು ಹೀಗೆ ಮಾಡುತ್ತಾ ಹೋದರೆ ನಾವು ನಮ್ಮದೇ ಸ್ಟೇಡಿಯಂ ಕಟ್ಟಬೇಕಾಗುತ್ತೆ ಎಂದು ಜೋರಾಗಿಯೇ ಹೇಳಿದರು. ಆಗ ವಿಜಯ್ ಮರ್ಚೆಂಟ್ ಹೇಳಿದ ಒಂದು ಮಾತಿನಿಂದ ಇತಿಹಾಸವೇ ಸೃಷ್ಟಿಯಾಯ್ತು. ಮಾತಿನ ಭರದಲ್ಲಿ ವಿಜಯ್ ಮರ್ಚೆಂಟ್ ಅವರು ‘ನೀವು ಮರಾಠಿಗಳಿಂದ ಇದೆಲ್ಲಾ ಸಾಧ್ಯವಿಲ್ಲ’ ಎಂದು ಬಿಟ್ಟರು.

Advertisement

ಇದರಿಂದ ಕೆರಳಿದ ಶೇಷರಾವ್ ವಾಂಖೆಡೆ ಹೊಸ ಮೈದಾನ ಮಾಡಿಯೇ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದರು. ಆಗ ಮಹಾರಾಷ್ಟ್ರ ಸಿಎಂ ಆಗಿದ್ದವವರು ವಸಂತ್ ರಾವ್ ನಾಯಕ್, ಅವರನ್ನು ಭೇಟಿಯಾದ ಶೇಷರಾವ್, ಹೊಸ ಸ್ಟೇಡಿಯಂ ನಿರ್ಮಾಣದ ಪ್ರಸ್ತಾಪ ಇಟ್ಟಿದ್ದರು. ಸಿಎಂ ಸಾಹೇಬ್ರಿಗೇನು ಮನಸ್ಸಿತ್ತು, ಆದರೆ ರಾಜ್ಯ ಸರ್ಕಾರದ ಬಳಿ ಅಷ್ಟೊಂದು ಹಣ ಇರಲಿಲ್ಲ. ಆಗ ಎದುರು ಕುಳಿತಿದ್ದ ವಾಂಖೆಡೆ ಕೇಳಿದ್ದು ಒಂದೇ, ಹಣದ ಬಗ್ಗೆ ನೀವು ಯೋಚನೆ ಬಿಡಿ, ಸ್ಟೇಡಿಯಂ ಕಟ್ಟಲು ಪರ್ಮಿಷನ್ ಕೊಡಿ ಸಾಕು ಎಂದುಬಿಟ್ಟರು.

ಮುಖ್ಯಮಂತ್ರಿಗಳ ಪರ್ಮಿಷನ್ ಸಿಕ್ಕಿತ್ತು, ಆದ್ರೆ ಜಾಗ ಬೇಕಲ್ವ. ಚರ್ಚ್ ಗೇಟ್ ಮತ್ತು ಮರೀನ್ ಡ್ರೈವ್ ನಡುವೆ ಒಂದು ಜಾಗವಿತ್ತು. ಅಲ್ಲಿ ಬಿಸಿಎ ತಮ್ಮದೊಂದು ಕ್ಲಬ್ ಹೌಸ್ ಮಾಡಲು ಹೊರಟಿತ್ತು. ಕ್ಲಬ್ ಹೌಸ್ ನಿರ್ಮಾಣದ ಆರ್ಕಿಟೆಕ್ಟ್ ಬಳಿ ಹೋದ ವಾಂಖೆಡೆ, ಕ್ಲಬ್ ಹೌಸ್ ಅಲ್ಲ, ಇನ್ನೊಂದು ವರ್ಷದಲ್ಲಿ ದೊಡ್ಡ ಸ್ಟೇಡಿಯಂ ಮಾಡಿಕೊಡು ಎಂದುಬಿಟ್ಟರು. ಸಾಮಾನ್ಯವಾಗಿ ಒಂದು ಸ್ಟೇಡಿಯಂ ನಿರ್ಮಾಣಕ್ಕೆ, ಗ್ರೌಂಡ್, ಪೆವಿಲಿಯನ್, ಪಾರ್ಕಿಂಗ್ ಎಲ್ಲಾ ಸೇರಿ 20 ಎಕರೆಯಷ್ಟು ಜಾಗ ಬೇಕಾಗುತ್ತೆ. ಆದರೆ ಅಲ್ಲಿದ್ದಿದ್ದು ಕೇವಲ 13 ಎಕರೆ ಅಷ್ಟೇ. ಗರ್ವಾರೆ ಕ್ಲಬ್ ಹೌಸ್ ಗೆ ಜಾಗ ಬಿಟ್ಟು ಉಳಿದಿದ್ದು ಕೇವಲ ಏಳೂವರೆ ಎಕರೆ ಅಷ್ಟೇ.

ಒಂದು ಬದಿಯಲ್ಲಿ ರೈಲ್ವೆ ಟ್ರಾಕ್, ಒಂದು ಕಡೆ ದೊಡ್ಡ ದೊಡ್ಡ ಕಟ್ಟೆಗಳು, ಮತ್ತೊಂದೆಡೆ ಅರಬ್ಬಿ ಸಮುದ್ರ. ಇದರ ನಡುವೆ ಕೇವಲ ಏಳೂವರೆ ಎಕರೆ ಜಾಗದಲ್ಲಿ ಒಂದು ಸ್ಟೇಡಿಯಂ ಮಾಡಬೇಕಿತ್ತು ಆರ್ಕಿಟೆಕ್ಟ್ ಶಶಿ ಪ್ರಭು ಅವರಿಗೆ. 11 ತಿಂಗಳು 23 ದಿನಗಳ ಕಾಲ ನಡೆದ ಕೆಲಸದ ಬಳಿಕ ಸ್ಟೇಡಿಯಂ ನಿರ್ಮಾಣವಾಗಿತ್ತು. ಖರ್ಚಾಗಿದ್ದು 1 ಕೋಟಿ 87 ಲಕ್ಷ ರೂ. ಸ್ಟೇಡಿಯಂ ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಶೇಷರಾವ್ ವಾಂಖೆಡೆ ಅವರ ಹೆಸರನ್ನೇ ಇಡಲಾಯಿತು. ಅಂದಿನಿಂದ ಇದು ವಾಂಖೆಡೆ ಸ್ಟೇಡಿಯಂ ಎಂದು ಕರೆಯಲ್ಪಟ್ಟಿತು. 1975ರಲ್ಲಿ ಮೊದಲ ಟೆಸ್ಟ್ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆಯಲ್ಲಿ ಆಡಲಾಯಿತು. ಅಲ್ಲಿಂದ ವಾಂಖೆಡೆ ಸ್ಟೇಡಿಯಂ ಭಾರತದ ಪ್ರಮುಖ ಕ್ರೀಡಾ ತಾಣವಾಯ್ತು. ವಿಚಿತ್ರ ಎಂದರೆ ವಾಂಖೆಡೆ ಸ್ಟೇಡಿಯಂ ನಿರ್ಮಾಣವಾದ ಬಳಿಕ ಬ್ರೆಬೋರ್ನ್ ನಲ್ಲಿ ನಡೆದಿದ್ದು ಕೇವಲ ಒಂದು ಟೆಸ್ಟ್ ಪಂದ್ಯ. ಅದೂ 2009ರಲ್ಲಿ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next