Advertisement

ಸಂಭವಾಮಿ ಯುಗೇ ಯುಗೇ : ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಗೆಲುವು

05:03 AM May 24, 2019 | sudhir |

ಹೊಸದಿಲ್ಲಿ: “ಮತ್ತೆ ಗೆದ್ದ ಭಾರತ’ ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ ತತ್‌ಕ್ಷಣ ಪ್ರಧಾನಿ ನರೇಂದ್ರ ಮೋದಿ ಮಾಡಿದ ಏಕಸಾಲಿನ ಟ್ವೀಟ್‌.

Advertisement

ಗುರುವಾರ 542 ಕ್ಷೇತ್ರಗಳ ಫ‌ಲಿತಾಂಶ ಹೊರಬಿದ್ದಿದ್ದು, ಮತ್ತೆ ಜನ ಎನ್‌ಡಿಎ ಸರಕಾರಕ್ಕೆ ಆಶೀರ್ವದಿಸಿದ್ದಾರೆ. ಕಾಂಗ್ರೆಸ್‌ ಕಳೆದ ಸಾಲಿಗಿಂತ ಕೇವಲ 8 ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡಿದ್ದು, ವಿಪಕ್ಷ ನಾಯಕನ ಸ್ಥಾನ ಪಡೆಯುವ ಅರ್ಹತೆಯೂ ಇಲ್ಲ. 542 ಕ್ಷೇತ್ರಗಳ ಪೈಕಿ ಶೇ.10ರಷ್ಟು ಸ್ಥಾನ ಪಡೆದ ಎರಡನೇ ದೊಡ್ಡ ಪಕ್ಷಕ್ಕೆ ವಿಪಕ್ಷ ಸ್ಥಾನ ಸಿಗುವುದರಿಂದ 55 ಸ್ಥಾನ ಗಳಿಸಿದ್ದರೆ ಆ ಸ್ಥಾನ ಸಿಗುತ್ತಿತ್ತು. ಇನ್ನು ಬಿಜೆಪಿ ಸ್ವತಂತ್ರವಾಗಿಯೇ 303 ಸ್ಥಾನಗಳಲ್ಲಿ ಗೆದ್ದಿದ್ದು, ಮೈತ್ರಿ ಪಕ್ಷಗಳ ಜತೆಗೆ ಬಲವನ್ನು 350ಕ್ಕೆ ಏರಿಕೆ ಮಾಡಿಕೊಂಡಿದೆ.

ಈ ಬಾರಿಯ ವಿಶೇಷವೆಂದರೆ ಬಿಜೆಪಿ ಕರ್ನಾಟಕವೂ ಸಹಿತ ಐದಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಹುತೇಕ ಸ್ವೀಪ್‌ ಮಾಡಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ 1 ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಜಯಿಸಿದ್ದಾರೆ.

ರಾಹುಲ್‌ಗೆ ಕಹಿ
ಈ ಚುನಾವಣೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪಾಲಿಗೆ ತೀವ್ರ ಕಹಿ ತಂದಿದೆ. ನೆಹರೂ-ಇಂದಿರಾ ಮನೆತನದ ಭದ್ರಕೋಟೆ ಎನ್ನಿಸಿಕೊಂಡಿದ್ದ ಅಮೇಠಿಯಲ್ಲೇ ರಾಹುಲ್‌ ಅವರು ಸ್ಮತಿ ವಿರುದ್ಧ ಸೋತು, ಮುಜುಗರ ಅನುಭವಿಸಿದ್ದಾರೆ. ಆದರೆ ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿದ್ದರಿಂದ ಇಲ್ಲಿ ಗೆದ್ದು ಮಾನ ಉಳಿಸಿಕೊಂಡಿದ್ದಾರೆ.

ದಕ್ಷಿಣ ಭಾರತ ಹೊರತುಪಡಿಸಿದಂತೆ ಉಳಿದೆಲ್ಲ ಕಡೆಗಳಲ್ಲೂ ಕಮಲ ಜೋರಾಗಿಯೇ ಅರಳಿದೆ. ಈಶಾನ್ಯ ಭಾರತ, ಉತ್ತರ ಭಾರತ, ಪೂರ್ವ ಭಾರತ ಮತ್ತು ಪಶ್ಚಿಮ ಭಾರತಗಳಲ್ಲೂ ಬಿಜೆಪಿ ಪ್ರಾಬಲ್ಯ ತೋರಿದೆ. “ಹಿಂದಿ ಬೆಲ್ಟ್ ’ ಅಂತೂ ಸಂಪೂರ್ಣವಾಗಿ ಬಿಜೆಪಿ ಮಯವಾಗಿದೆ. ಆದರೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ವಿಫ‌ಲವಾಗಿದೆ.

Advertisement

ಕಾಂಗ್ರೆಸ್‌ ಮಾನ ಉಳಿಸಿದ ಕೇರಳ, ಪಂಜಾಬ್‌
ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಉತ್ತಮ ಫ‌ಲಿತಾಂಶ ಬಂದಿರುವುದು ಕೇರಳ ಮತ್ತು ಪಂಜಾಬ್‌ನಲ್ಲಿ ಮಾತ್ರ. ಕೇರಳದಲ್ಲಿ ಎಲ್‌ಡಿಎಫ್ ಅನ್ನು ಯುಡಿಎಫ್ ಸಂಪೂರ್ಣವಾಗಿ ಸೋಲಿಸಿದೆ. ಇನ್ನು ಪಂಜಾಬ್‌ನಲ್ಲೂ ಕ್ಯಾಪ್ಟನ್‌ ನಾಯಕತ್ವಕ್ಕೆ ಮಣೆ ಸಿಕ್ಕಿದೆ.

“ಸ್ವಾಭಿಮಾನ’ದ ನಾಯಕಿ
ಇಡೀ ಕರ್ನಾಟಕ ಸರಕಾರವನ್ನೇ ಎದುರು ಹಾಕಿಕೊಂಡು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಅವರು ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ “ಮಂಡ್ಯದ ಸ್ವಾಭಿಮಾನ’ ಎತ್ತಿ ಹಿಡಿದ್ದಾರೆ. ಆರಂಭದಿಂದಲೂ ನೇರ ಹಣಾಹಣಿಗೆ ಕಾರಣವಾಗಿದ್ದ ಈ ಕ್ಷೇತ್ರದಲ್ಲಿ ಸಂಜೆ ವೇಳೆಗೆ ಜಯ ಸುಮಲತಾ ಅವರ ಕಡೆಗೆ ಒಲಿಯಿತು. ಅಂದ ಹಾಗೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೇ ಸುಮಲತಾ
ಅವರಿಗೆ ಬೆಂಬಲ ನೀಡಿತ್ತು.

ಅಪ್ಪ- ಮಕ್ಕಳ ನಲಿವು, ತಾತ-ಮೊಮ್ಮಗನ ನೋವು
ತುಮಕೂರಿನಲ್ಲಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಬಿಜೆಪಿಯ ಜಿ.ಎಸ್‌. ಬಸವರಾಜು ವಿರುದ್ಧ ಸೋಲುಂಡಿದ್ದಾರೆ. ಹಾಗೆಯೇ ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ ಸೋತಿದ್ದು, ಕುಮಾರಸ್ವಾಮಿ ಅವರು ತಮ್ಮ ತಂದೆ ಮತ್ತು ಪುತ್ರನ ಸೋಲಿನ ನೋವು ಉಣ್ಣುವಂತಾಗಿದೆ. ಅತ್ತ, ಕಲಬುರಗಿ ಮತ್ತು ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಡಾ| ಉಮೇಶ್‌ ಜಾಧವ್‌ ಹಾಗೂ ಡಾ| ಅವಿನಾಶ್‌ ಜಾಧವ್‌ ಅವರು ಗೆದ್ದು ನಲಿವನ್ನು ಹೆಚ್ಚಿಸಿಕೊಂಡಿದ್ದಾರೆ. ಕಲಬುರಗಿಯಲ್ಲಿ “ಸೋಲಿಲ್ಲದ ಸರದಾರ’ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್‌ ಜಾಧವ್‌ ಗೆದ್ದಿದ್ದಾರೆ.

ಬಿಜೆಪಿ ಗೆಲುವಿಗೆ 5 ಕಾರಣ 
– ಮೋದಿ ಅವರ ವರ್ಚಸ್ಸು, 2014ರಲ್ಲಿ ಇದ್ದ ಅಲೆಗಿಂತಲೂ ಹೆಚ್ಚಾಗಿದ್ದ “ಅಂಡರ್‌ ಕರೆಂಟ್‌ ಅಲೆ’
– ಮೋದಿ ಅವರು ವರ್ಷದಿಂದಲೂ ಬೂತ್‌ ಮಟ್ಟದ ಕಾರ್ಯಕರ್ತರ ಜತೆ ನಡೆಸಿದ ಸಂವಾದ
– ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಅತ್ಯಂತ ವ್ಯವಸ್ಥಿತ ತಂತ್ರಗಾರಿಕೆ, ಬಿಡುವಿಲ್ಲದ ಪ್ರಯಾಣ
– ಅಭ್ಯರ್ಥಿಗಳ ಆಯ್ಕೆಯಲ್ಲಿ ತೋರಿದ ಜಾಣ್ಮೆ, ಆಡಳಿತ ವಿರೋಧಿ ಅಲೆ ಗುರುತಿಸಿ ಟಿಕೆಟ್‌ ನಿರಾಕರಣೆ
– ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವುಗಳ ಜತೆ ಜಾಣ್ಮೆಯಿಂದ ವರ್ತಿಸಿದ ಪರಿ

ಕಾಂಗ್ರೆಸ್‌ ಸೋಲಿಗೆ 5 ಕಾರಣ 
– ಸೀಟು ಹಂಚಿಕೆಯಲ್ಲಿ ಪಟ್ಟು ಹಿಡಿದು ಮೈತ್ರಿ ಪಕ್ಷಗಳಿಂದ ವಿರೋಧ ಕಟ್ಟಿ ಕೊಂಡಿದ್ದು
– ವ್ಯವಸ್ಥಿತವಾಗಿ ಪ್ರಚಾರ ನಡೆಸುವ ಕಲೆಯನ್ನು ಅಳವಡಿಸಿಕೊಳ್ಳದೇ ಹೋಗಿದ್ದುದು
– “ನ್ಯಾಯ್‌’ ಮೂಲಕ 72 ಸಾವಿರ ರೂ. ಕೊಡುತ್ತೇನೆ ಎಂದರೂ ಸರಿಯಾಗಿ ಪ್ರಚಾರ ಮಾಡದಿದ್ದುದು
– ಚೌಕಿದಾರ್‌ ಚೋರ್‌ ಹೈ ನುಡಿ ಲಾಭಕ್ಕಿಂತ ಹೆಚ್ಚು ನಷ್ಟಕ್ಕೆ ಕಾರಣವಾಗಿದ್ದುದು

ಸಾಮಾನ್ಯ ಜನರಿಗೆ ಅರ್ಥವಾಗದ ರಫೇಲ್‌, ಜಿಎಸ್‌ಟಿಯ ಬಗ್ಗೆ ಪದೇ ಪದೆ ಹೇಳಿದ್ದು

ಮಹಾಘಟಬಂಧನ್‌ ವೈಫ‌ಲ್ಯವೇಕೆ?
– ಪ್ರಧಾನಿಯಾಗುವ ಬಗ್ಗೆ ಮೊದಲೇ ಸೀಟು ಹಂಚಿಕೆಯಲ್ಲಿ ಜಿಗುಟು ಸ್ವಭಾವ ರೂಢಿಸಿಕೊಂಡದ್ದು
– ಒಂದು ರಾಜ್ಯದಲ್ಲಿ ಸ್ನೇಹ, ಮಗದೊಂದು ರಾಜ್ಯದಲ್ಲಿ ಹೋರಾಟದ ಪ್ರವೃತ್ತಿಗೆ ಹೋಗಿದ್ದುದು
– ಮಹಾಘಟಬಂಧನ್‌ನ ನಾಯಕರ ನಡುವೆಯೇ ಸೈದ್ಧಾಂತಿಕ, ವೈಚಾರಿಕ ಸಂಘರ್ಷವೇರ್ಪಟ್ಟಿದ್ದು
– ಕಾಂಗ್ರೆಸ್‌ ಅನ್ನು ಸೇರಿಸಿಕೊಳ್ಳಬೇಕೇ, ಕಾಂಗ್ರೆಸೇತರ ಘಟಬಂಧನ್‌ ಮಾಡಬೇಕೇ ಎಂಬ ಬಗ್ಗೆ ಗೊಂದಲ
– ಮೈತ್ರಿ ಮಾಡಿಕೊಂಡಿದ್ದರೂ ಸ್ವಹಿತಾಸಕ್ತಿಗಾಗಿ ಮೈತ್ರಿ ಕೂಟದ ಅಭ್ಯರ್ಥಿಗಳ ವಿರುದ್ಧವೇ ಕೆಲಸ ಮಾಡಿದ್ದು

Advertisement

Udayavani is now on Telegram. Click here to join our channel and stay updated with the latest news.

Next