Advertisement

ಅಪಪ್ರಚಾರ ಮಾಡುವುದೇ ಬಿಜೆಪಿ ಕಾಯಕ

11:36 AM May 04, 2018 | |

ಹರಪನಹಳ್ಳಿ: ತಾಲೂಕಿಗೆ 371ಜೆ ಕಲಂ ಸೌಲಭ್ಯ ಸಿಗುವುದಿಲ್ಲವೆಂದು ಅಪಪ್ರಚಾರ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಬಿಜೆಪಿಗರಿಗೆ ಮಾನ, ಮಾರ್ಯದೆ ಇಲ್ಲ. ಸತ್ಯವನ್ನು ಸುಳ್ಳು ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಎಂ.ಪಿ.ರವೀಂದ್ರ ಪರ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಮಾತನಾಡುತ್ತಾರೆ. ಏನೂ ಕೆಲಸ ಮಾಡಲ್ಲ, ಬರೀ ಅಪಪ್ರಚಾರ ಮಾಡುತ್ತಾರೆ. ಕಾಂಗ್ರೆಸ್‌ ಪಕ್ಷವಲ್ಲದೆ ಮತ್ತೇನು ಕರುಣಾಕರರೆಡ್ಡಿ ಸೌಲಭ್ಯ ಕಲ್ಪಿಸಿದ್ದಾರಾ? ಇದರ ಬಗ್ಗೆ ಕರುಣಾಕರರೆಡ್ಡಿ ಎಂದಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಹೈಕ ಸೌಲಭ್ಯ ಕಲ್ಪಿಸಿರುವ ಕುರಿತು ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ಸಿಎಂ ಓದಿದರು.

ಕೇಂದ್ರದಲ್ಲಿ ಮನಮೋಹನ ಸಿಂಗ್‌ ಸರ್ಕಾರವಿದ್ದಾಗ ಹೈದ್ರಾಬಾದ್‌ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸವಲತ್ತು ಕೊಡುವ ಉದ್ದೇಶದಿಂದ ಸಂವಿಧಾನ ತಿದ್ದುಪಡಿ ಮಾಡಿ 371ಜೆ ಕಲಂ ಸೌಲಭ್ಯ ಕಲ್ಪಿಸಿದೆ. ನಮ್ಮ ಸರ್ಕಾರ ಅದಕ್ಕೆ ನಿಯಮಾವಳಿ ರೂಪಿಸಿ ಪ್ರತಿ ವರ್ಷ ಒಂದೂವರೆ ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ. ಅಭಿವೃದ್ಧಿ, ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸಿಗುತ್ತಿದೆ. 

ಆ ಭಾಗದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಹರಪನಹಳ್ಳಿಯನ್ನು ಮತ್ತೆ ಬಳ್ಳಾರಿ ಸೇರಿಸಿದರೆ ಮಾತ್ರ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಮನಗಂಡು ಬಳ್ಳಾರಿಗೆ ಸೇರಿಸಲಾಗಿದೆ. ಇನ್ಮುಂದೆ ಹೈಕ ಭಾಗದ 371ಜೆ ಕಲಂನ ಎಲ್ಲಾ ಸೌಲಭ್ಯಗಳು ಹರಪನಹಳ್ಳಿ ತಾಲೂಕಿಗೆ ಸಿಗುತ್ತವೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಹೈಕ ಭಾಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆಗಿನ ಉಪ ಪ್ರಧಾನಿ, ಗೃಹ ಸಚಿವ ಆದ್ವಾನಿಯವರು ಹೈಕ ಭಾಗಕ್ಕೆ 371ಜೆ ಸೌಲಭ್ಯ ಕಲ್ಪಿಸಿದರೆ ಎಲ್ಲರೂ ಕೇಳುತ್ತಾರೆ. ಹಾಗಾಗಿ ಕೊಡಲು ಬರಲ್ಲವೆಂಬ ಉತ್ತರ ಬರೆದಿದ್ದರು.
 
ಆದರೆ ರಾಹುಲ್‌ ಗಾಂಧಿಯವರು ಗುಲ್ಬರ್ಗಕ್ಕೆ ಪ್ರಚಾರಕ್ಕೆ ಬಂದಾಗ ಈ ಭಾಗದ ಜನರು ಸೌಲಭ್ಯಕ್ಕಾಗಿ ಒತ್ತಾಯಿಸಿದ್ದರು.

Advertisement

ಅದಕ್ಕೆ ಒಪ್ಪಿಕೊಂಡು ಮನಮೋಹನ ಸಿಂಗ್‌ ರವರ ಮನವೊಲಿಸಿ ಸಂವಿಧಾನ ತಿದ್ದುಪಡಿ ಮಾಡಿದರು. ಸೌಲಭ್ಯ ಸಿಗಲು ಮನಮೋಹನ ಸಿಂಗ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಕಾರಣರೇ ಹೊರತು ಬಿಜೆಪಿ ಅಲ್ಲ. ಹಾಗಾಗಿ ವಿರೋಧ ಪಕ್ಷದವರ ಸುಳ್ಳುಗಳಿಗೆ ಮಾರು ಹೋಗಬೇಡಿ ಎಂದು ಹೇಳಿದರು. 

ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ತಾಲೂಕಿಗೆ 371ಜೆ ಕಲಂ ಸೌಲಭ್ಯ ದೊರಕಿಸಿಕೊಡುವಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ನಾವು ಮರೆಯುವಂತಿಲ್ಲ. ಅವರ ಋಣ ತೀರಿಸಬೇಕೆಂದರೆ ನನಗೆ ಮತ ನೀಡುವ ಮೂಲಕ ಸಿದ್ದರಾಮಯ್ಯನವರ ಕೈ ಬಲಡಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿಯವರು ಸಂವಿಧಾನ ಬದಲಾವಣೆಯ ದುಸ್ಸಾಹಸಕ್ಕೆ ಮುಂದಾದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. 

ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೇಶದಲ್ಲೇ ಮಾದರಿ ಸರ್ಕಾರ ಎನಿಸಿಕೊಂಡಿದೆ. ಶಾಸಕ ರವೀಂದ್ರ ಪ್ರಯತ್ನದಿಂದ ತಾಲೂಕಿಗೆ 371ಜೆ ಸೌಲಭ್ಯ ದಕ್ಕಿದೆ. ಸಾಮಾಜಿಕ ಕಳಕಳಿಯ ಹೊಂದಿರುವ ನಮ್ಮ ಸರ್ಕಾರ ಅಧಿಕಾರಕ್ಕೆ ತರಲು ನೀವು ಆಶೀರ್ವದಿಸಬೇಕು ಎಂದರು.

ರೇಷ್ಮೆ ನಿಗದ ಮಾಜಿ ಅಧ್ಯಕ್ಷ ಡಿ.ಬಸವರಾಜ್‌ ಮಾತನಾಡಿದರು. ಸಚಿವ ಎಚ್‌.ಆಂಜನೇಯ, ಎಐಸಿಸಿ ಕಾರ್ಯದರ್ಶಿ ಶೈಲಂ, ವಿಪ ಸದಸ್ಯ ಮೋಹನ ಕೊಂಡಜ್ಜಿ, ಶಾಸಕ ಎಚ್‌.ಪಿ. ರಾಜೇಶ್‌, ಎಂ.ಪಿ. ರುದ್ರಾಂಭಪ್ರಕಾಶ್‌, ಮುಖಂಡರಾದ ಎಂ.ವಿ.ಅಂಜಿನಪ್ಪ, ಟಿ.ಎಚ್‌. ಎಂ.ವಿರುಪಾಕ್ಷಯ್ಯ, ಎಂ.ರಾಜಶೇಖರ್‌, ಎಚ್‌.ಬಿ. ಪರಶುರಾಮಪ್ಪ, ಎಸ್‌. ಮಂಜುನಾಥ್‌, ಬಿ.ಕೆ.ಪ್ರಕಾಶ್‌, ಎಸ್‌. ಚಿದಾನಂದಪ್ಪ, ಎಂ.ಟಿ.ಸುಭಾಶಚಂದ್ರ, ಪಿ.ಎಲ್‌.ಪೋಮ್ಯನಾಯ್ಕ, ಅಬ್ದುಲ್‌ ರಹಿಮಾನಸಾಬ್‌, ಆಲದಹಳ್ಳಿ ಷಣ್ಮುಖಪ್ಪ, ಡಿ.ಜಂಬಣ್ಣ, ಟಿ.ಎಂ.ಶಿವಶಂಕರ್‌, ಜಾವೀದ್‌, ಎಚ್‌.ಮಂಜಪ್ಪ, ಮಜ್ಜಿಗೆರೆ ಬಸವರಾಜ್‌, ಅಂಬ್ಲಿ ಮಂಜುನಾಥ್‌ ಮತ್ತಿತರರಿದ್ದರು.

ಅಭಿಮಾನಿ ಕೊಟ್ಟ ಕುರಿ ಎತ್ತಿ ಹಿಡಿದು ಪ್ರದರ್ಶಿಸಿದ ಸಿಎಂ
ಹರಪನಹಳ್ಳಿ: ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಎಂ.ಪಿ.ರವೀಂದ್ರ ಪರ ಮತಯಾಚನೆ ಸಮಾರಂಭದಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂದೆ ಹೇಗೆ ಬಗ್ಗಿಕೊಂಡು ನಿಲ್ಲುತ್ತಾರೆ ಎನ್ನುವ ಭಂಗಿ ಪ್ರದರ್ಶಿಸಿ ಅಣಕ ಮಾಡಿದರು.

ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿದ್ದಾಗ
ಬಿಜೆಪಿ ಗಿರಾಕಿಗಳು(ಸಂಸದರು) ಬಾಯಿ ಬಿಡಲಿಲ್ಲ. ಮೋದಿ ಮುಂದೆ ಬಗ್ಗಿಕೊಂಡು ನಿಂತಿದ್ದರು. ಅದರಂತೆ ಯಡಿಯೂರಪ್ಪ ಕೂಡ ಅಧಿ ಕಾರಕ್ಕಾಗಿ ಅಮಿತ ಶಾ ಮುಂದೆ ಬಗ್ಗಿಕೊಂಡು ನಿಲ್ಲುತ್ತಾರೆ. ಇವರಿಗೆ ಸ್ವಾಭಿಮಾನ ಇಲ್ಲ. ಕನ್ನಡಿಗರ ಸ್ವಾಭಿಮಾನ ಇನ್ನೊಬ್ಬರಿಗೆ ಅಡವಿಡುವವರಿಗೆ ಬುದ್ಧಿ ಕಲಿಸಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ನಾನು ರೈತರ ಮಗ, ರೈತರ ಬಂಧು ಎನ್ನುತ್ತಾರೆ. ಮತ್ತೆ ನಾವು ಯಾರಪ್ಪಾ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪಗೆ ಎರಡು
ನಾಲಿಗೆ ಇವೆ. 2009ರಲ್ಲಿ ಸಾಲ ಮನ್ನಾ ಮಾಡಲು ದುಡ್ಡು ಎಲ್ಲಿಂದ ತರಲಿ? ನೋಟು ಪ್ರಿಟಿಂಗ್‌ ಮಾಡುವ ಮಷಿನ್‌ ಇಟ್ಟುಕೊಂಡಿಲ್ಲ ಎಂದಿದ್ದರು.

ಮತ್ತೇಕೆ ಹಸಿರು ಶಾಲು ಹಾಕಿಕೊಂಡು ರೈತರಿಗೆ ಅವಮಾನ ಮಾಡುತ್ತೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಬಿಜೆಪಿ ಕಟ್ಟಿ ಬೆಳಸಿದವರು. ಅವರಿಗೆ ಪಕ್ಷದಲ್ಲಿ ಮೂರು ಕಾಸಿನ ಮಾರ್ಯದೆ ಇಲ್ಲ. ಹಿರಿಯರಿಗೆ ಗೌರವ ಕೊಡಬೇಕೆಂದು ಗಿಣಿಪಾಠ ಹೇಳಲು ಮೋದಿ ಬರುತ್ತಾರೆ. ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿಯಾಗಿದೆ. ಇವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಟುಕಿದರು.

ಸಮಾರಂಭದ ನಂತರ ಇಬ್ಬರು ಅಭಿಮಾನಿಗಳು ತಂದಿದ್ದ ಕುರಿಯನ್ನು ಸಿದ್ದರಾಮಯ್ಯ ಅವರ ಹೆಗಲ ಮೇಲೆ ಕೂರಿಸಲು ಯತ್ನಿಸಿದಾಗ ಅದನ್ನು ಎರಡು ಕೈಗಳಿಂದ ಹಿಡಿದು ಮೇಲಕ್ಕೆ ಎತ್ತಿ ಪ್ರದರ್ಶಿಸಿದರು. ಲಂಬಾಣಿ ಸಮುದಾಯದ ಮಹಿಳಾ ಅಭಿಮಾನಿಯೊಬ್ಬರು ನೀಡಿದ ಲಂಬಾಣಿ ಶಾಲು ಹೊದ್ದುಕೊಂಡು ಸಭಿಕರತ್ತ ಸಿದ್ದರಾಮಯ್ಯ ಕೈ ಬೀಸಿದರು. 

Advertisement

Udayavani is now on Telegram. Click here to join our channel and stay updated with the latest news.

Next