Advertisement

ಗ್ರಾಮ ವಿಕಾಸಕ್ಕೆ ಆದ್ಯತೆ ನೀಡಿದ ಬಿಜೆಪಿ

07:51 PM Nov 22, 2021 | Team Udayavani |

ಚಿಕ್ಕೋಡಿ: ಹಣಬಲ ತೋಳ್ಬಲದಿಂದ ಗೆಲ್ಲುತ್ತಾ ಬಂದಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಪರಿಷತ್‌ನಲ್ಲಿ ಬಹುಮತ ಪಡೆಯಲು ಈ ಚುನಾವಣೆ ಅವಕಾಶವಾಗಿದೆ. ಜನಸ್ವರಾಜ್‌ ಸಮಾವೇಶಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ ಜನಸ್ವರಾಜ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ದೇಶದಲ್ಲಿ ಕಾಂಗ್ರೆಸ್‌ ಪಕ್ಷ ನಿರ್ನಾಮ ಆಗುತ್ತಿದೆ. ಜನ ಪಕ್ಷವನ್ನು ತಿರಸ್ಕಾರ ಮಾಡುತ್ತಿದ್ದಾರೆ. ಬಿಜೆಪಿ ಎಲ್ಲ ಸಮುದಾಯಕ್ಕೆ ಅನುದಾನ ನೀಡಿದೆ. ಯಾವುದೇ ತಾರತಮ್ಯ ಮಾಡಿಲ್ಲ. ಹೀಗಾಗಿ ಇಡೀ ದೇಶದಲ್ಲಿ ಬಿಜೆಪಿ ಬೇರು ಮಟ್ಟದಿಂದ ಬೆಳವಣಿಗೆ ಕಾಣುತ್ತಿದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರಕಾರ ದೊಡ್ಡ ಪ್ರಮಾಣದ ಮಹತ್ವವನ್ನು ಗ್ರಾಮ ವಿಕಾಸಕ್ಕೆ ನೀಡಿವೆ. ನನ್ನ ಸರ್ಕಾರದಲ್ಲಿ ಗ್ರಾಪಂ ಸದಸ್ಯರ ಗೌರವಧನವನ್ನು 250 ರೂ.ದಿಂದ 1,000 ರೂ ಗೆ ಹೆಚ್ಚಿಸಿದ್ದೇವೆ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮದಲ್ಲಿ ಶೌಚಾಲಯವಿಲ್ಲದ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿ ಕೊಡುವ ಕೆಲಸ ಮಾಡಿದೆ ಮತ್ತು ಮಾಡುತ್ತಿದೆ. ಈಗಾಗಲೇ ದೇಶದಲ್ಲಿ 7 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ.

ವಿಶೇಷವಾಗಿ ಗ್ರಾಮಗಳಲ್ಲಿನ ಬಡವರೆಲ್ಲರಿಗೂ ಉಚಿತವಾಗಿ 8 ಕೋಟಿಗೂ ಹೆಚ್ಚು ಸಿಲಿಂಡರ್‌ ನೀಡಿದ್ದೇವೆ. ಬಡವರಿಗೆ ಮನೆ, ಗ್ರಾಮ ಸಡಕ ಯೋಜನೆ – ಎಸ್‌ಸಿ-ಎಸ್‌ಟಿ ಕಾಲೋನಿಗಳಿಗೆ ಸಿಮೆಂಟ್‌ ಕಾಂಕ್ರೀಟ್‌ ರಸ್ತೆಗಳು, ಹಳ್ಳಿಗಳಿಗೆ ರಸ್ತೆಗಳು, ಸುವರ್ಣ ಗ್ರಾಮ ಯೋಜನೆ, ಜಲ ಜೀವನ್‌ ಮಿಷನ್‌ ಮೂಲಕ ಗ್ರಾಮಗಳಿಗೆ ಕುಡಿಯುವ ನಲ್ಲಿ ನೀರು ನೀಡುತ್ತಿದ್ದೇವೆ. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ನೀಡಿದ್ದೇವೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಕುಸಿತ ಕಂಡಿದೆ. 417 ಸ್ಥಾನದಲ್ಲಿ ಇದ್ದ ಪಕ್ಷ ಇಂದು 45 ಕ್ಕೆ ಬಂದಿದೆ. ಅಲ್ಪಸಂಖ್ಯಾತ ಸಮುದಾಯವನ್ನು ವೋಟಿಗಾಗಿ ಕಾಂಗ್ರೆಸ್‌ ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಬ್ದುಲ್‌ ಕಲಾಂ ಅವರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದೆ. ದಲಿತ ನಾಯಕರಿಗೆ ಉನ್ನತ ಹುದ್ದೆ ನಿಇಡಿದೆ ಎಂದರು. ಶಾಸಕ ದುರ್ಯೋಧನ ಐಹೊಳೆ ಮಾತನಾಡಿ. ರಾಜ್ಯ ಬಿಜೆಪಿ ಸರಕಾರ 2008 ರಿಂದ ದಲಿತ ಕಾಲೋನಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಸಮುದಾಯ ಭವನ, ಚರಂಡಿ, ಸಿಸಿ ರಸ್ತೆ ಮಾಡಲಾಗಿದೆ ಎಂದರು.

Advertisement

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಆಸೆ ಆಮಿಷಗಳಿಗೆ ಬಲಿಯಾಗದೇ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಕಟಿಬದ್ಧರಾಗಬೇಕು ಎಂದರು. ಸಚಿವ ಶ್ರೀರಾಮುಲು ಮಾತ ನಾಡಿ, ಪಾರ್ಟಟೈಮ್‌ ನಾಯಕರಾದ ರಾಹುಲ್‌ ಗಾಂಧಿ ಬಿಟ್ಟು ಫುಲ್‌ಟೈಮ್‌ ನಾಯಕರಾದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನು ಬೆಂಬಲಿಸಬೇಕು ಎಂದರು.

ವೇದಿಕೆ ಮೇಲೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಪಿ.ರಾಜೀವ, ಮಹೇಶ ಕುಮಠಳ್ಳಿ, ಸಂಸದ ಈರಣ್ಣಾ ಕಡಾಡಿ, ಶಶಿಕಾಂತ ನಾಯಿಕ, ದೀಪಕ ಪಾಟೀಲ, ದುಂಡಪ್ಪ ಬೆಂಡವಾಡೆ, ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ರಮೇಶ ಕಾಳನ್ನವರ, ಸದಾಶಿವ ಹುಂಜ್ಯಾಗೋಳ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಮೃಣಾಲಿನಿ ದೇಶಪಾಂಡೆ ಮುಂತಾದವರು ಇದ್ದರು.

ಕಳೆದ ಎರಡು ಅವಧಿಯಲ್ಲಿ ಮಹಾಂತೇಶ ಕವಟಗಿಮಠ ಜಿಲ್ಲೆಯ ಅನೇಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದಾರೆ.ಪ್ರವಾಹ ಪೀಡಿತ ಸಂತ್ರಸ್ತರಿಗೆ ಐದು ಲಕ್ಷ ರೂ. ಪರಿಹಾರ ನೀಡಿರುವ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ. ಪ್ರವಾಹ ಪೀಡಿತ ಪ್ರದೇಶದ ಎಲ್ಲರಿಗೂ 10 ಸಾವಿರ ರೂ ಪರಿಹಾರ ನೀಡಲಾಗಿದೆ. ಮಹಾಂತೇಶ ಕವಟಗಿಮಠ ಗೆಲ್ಲಿಸುವ ಮೂಲಕ ಬಿಜೆಪಿ ಬಲಪಡಿಸಬೇಕು.
ಅಣ್ಣಾಸಾಹೇಬ ಜೊಲ್ಲೆ,
ಸಂಸದರು, ಚಿಕ್ಕೋಡಿ

ಕಳೆದ ಎರಡು ಅವ ಧಿಯಲ್ಲಿ ಉತ್ತಮ ಕೆಲಸ ಮಾಡಿರುವ ತೃಪ್ತಿ ಇದೆ. ಮತೊಮ್ಮೆ ಪಕ್ಷ ಟಿಕೆಟ್‌ ನೀಡಿದ್ದು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆ ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ.
ಮಹಾಂತೇಶ ಕವಟಗಿಮಠ,
ಪರಿಷತ್‌ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next