ಗೆಲುವಿನ ಉನ್ಮಾದದಲ್ಲಿ ಮೈಮರೆತು ಕಾರ್ಯಕರ್ತರು ಮಾಡುವ ಎಡವಟ್ಟುಗಳಿಂದ ಮುಜುಗರ ಅನುಭವಿಸುವುದು ಬಿಜೆಪಿಗೆ ಹೊಸದೇನೂ ಅಲ್ಲ.
ಈಗ ಇಡೀ ದೇಶದ ಕುತೂಹಲದ ಕೇಂದ್ರ ತ್ರಿಪುರ. ಮಾ.3 ರಿಂದೀಚೆಗೆ ಈ ಪುಟ್ಟ ರಾಜ್ಯದ ಕುರಿತು ಭಾರೀ ಎನ್ನುವಷ್ಟು ಚರ್ಚೆಯಾಗುತ್ತಿದೆ. ಈಶಾನ್ಯ ಭಾಗದ ರಾಜ್ಯವೊಂದು ದೇಶದ ರಾಜಕೀಯದಲ್ಲಿ ಇಷ್ಟೊಂದು ಮಹತ್ವ ಪಡೆದುಕೊಂಡದ್ದು ಬಹುಶಃ ಇದೇ ಮೊದಲಿರಬೇಕು. ಇದಕ್ಕೆ ಮೊದಲ ಕಾರಣ ತ್ರಿಪುರದಲ್ಲಿ ಸಿಪಿಎಂನ ಎರಡೂವರೆ ದಶಕಗಳ ಆಳ್ವಿಕೆಯನ್ನು
ಕೆಡವಿ ಬಿಜೆಪಿ ಮೂರನೇ ಎರಡರಷ್ಟು ನಿಚ್ಚಳ ಬಹುಮತ ಸಾಧಿಸಿರುವುದು. ಕೆಂಪುಕೋಟೆಯೊಳಗೆ ಕೇಸರಿ ಪಕ್ಷದ ಪರಾಕ್ರಮ ಚರ್ಚೆಗೀಡಾಗಿರುವುದು ಸಹಜ ಪ್ರಕ್ರಿಯೆ. ಆದರೆ ಇದಾದ ಬೆನ್ನಿಗೆ ತ್ರಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ತನ್ನ ಕಚೇರಿಗಳ ಮೇಲೆ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಸಿಪಿಎಂ ಆರೋಪಿಸುತ್ತಿದೆ. ಹೀಗೆ ಚಿಕ್ಕಮಟ್ಟದ ರಾಜಕೀಯ ಘರ್ಷಣೆಯ ರೂಪದಲ್ಲಿ ಪ್ರಾರಂಭವಾಗಿರುವ ಹಿಂಸಾಚಾರ ಲೆನಿನ್ ವಿಗ್ರಹ ಕೆಡವುದರೊಂದಿಗೆ ಪೂರ್ಣರೂಪ ಪಡೆದುಕೊಂಡಿದೆ ಮಾತ್ರವಲ್ಲದೆ ಇಡೀ ದೇಶಕ್ಕೆ ವ್ಯಾಪಿಸಿದೆ.
ಬೆಲೋನಿಯಾ ಜಿಲ್ಲಾ ಕೇಂದ್ರದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಸ್ಥಾಪಿಸಿದ್ದ ಪ್ರತಿಮೆಯನ್ನು ಮಂಗಳವಾರ ಗುಂಪೊಂದು ಬುಲ್‌ಡೋಜರ್ ತಂದು ಕೆಡವಿ ಹಾಕಿದೆ. ಲೆನಿನ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದ್ದು ಯಾರು ಮತ್ತು ಏಕೆ ಎಂಬುದರ ಕುರಿತಾಗಿ ಗೊಂದಲವಿದೆ. ಒಂದು ಮೂಲ ಸರಕಾರವೇ ಇದನ್ನು ಸ್ಥಾಪಿಸಿದೆ ಎಂದು ಹೇಳುತ್ತಿದ್ದರೆ ಇನ್ನೊಂದು ಮೂಲದ ಪ್ರಕಾರ ಯಾರೋ ಖಾಸಗಿಯವರು ಸರಕಾರದ ಅನುಮತಿ ಪಡೆದುಕೊಳ್ಳದೆ ಸ್ಥಾಪಿಸಿದ್ದಾರೆ ಎನ್ನುತ್ತಿದೆ. ಏನೇ ಆದರೂ ರಶ್ಯಾದ ಕ್ರಾಂತಿಕಾರಿಯ ವಿಗ್ರಹವನ್ನು ತ್ರಿಪುರದಲ್ಲಿ ಏಕೆ ಸ್ಥಾಪಿಸಬೇಕು ಎನ್ನುವುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಆತ ಸಿಪಿಎಂ ಪ್ರತಿಪಾದಿಸುವ ಕಮ್ಯುನಿಸ್ಟ್ ಸಿದ್ಧಾಂತದ ಮೂಲಪುರುಷ ಎಂಬ ಕಾರಣವನ್ನು ನೀಡುವುದಾದರೆ ಈ ರೀತಿ ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಗೆ ಪ್ರೇರಣೆಯಾದವರು ಅನೇಕ ಮಂದಿಯಿದ್ದಾರೆ.
ಅವರೆಲ್ಲ ವಿಗ್ರಹಗಳನ್ನು ಸ್ಥಾಪಿಸಲಾದೀತೆ? ಅದಾಗ್ಯೂ ಲೆನಿನ್ ವಿಗ್ರಹವನ್ನು ಕೆಡವಿ ಹಾಕಿದ್ದನ್ನು ಮಾತ್ರ ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಒಂದು ವೇಳೆ ವಿಗ್ರಹವನ್ನು ಅಲ್ಲಿಂದ ತೆರವುಗೊಳಿಸಲೇಬೇಕಿದ್ದರೆ ಕಾನೂನು ರೀತಿ ಹೋರಾಟ ಮಾಡಬೇಕಿತ್ತೇ ಹೊರತು ಏಕಾಏಕಿ ಬುಲ್‌ಡೋಜರ್ ತಂದು ಕೆಡವಿ ಹಾಕುವುದಲ್ಲ. ಇದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ತ್ರಿಪುರದ ರಾಜ್ಯಪಾಲ ತಥಾಗತ ರಾಯ್, ಬಿಜೆಪಿ ನಾಯಕ ರಾಮ್ ಮಾಧವ್ ಸೇರಿದಂತೆ ಹಲವು ನಾಯಕರು ವಿಗ್ರಹ ಭಂಜನ ಕ್ರಮವನ್ನು ಸಮರ್ಥಿಸಿಕೊಂಡಿರುವುದು. ಕನಿಷ್ಠ ಪ್ರಧಾನಿ ಮೋದಿ ಈ ಸಲ ಹೆಚ್ಚು ವಿಳಂಬಿಸದೆ ಘಟನೆಯನ್ನು ಖಂಡಿಸಿದ್ದಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎನ್ನುವುದು ಸಮಾಧಾನ ಕೊಡುವ ಅಂಶ.
ಗೆಲುವಿನ ಉನ್ಮಾದದಲ್ಲಿ ಮೈಮರೆತು ಕಾರ್ಯಕರ್ತರು ಮಾಡುವ ಎಡವಟ್ಟುಗಳಿಂದ ಮುಜುಗರ ಅನುಭವಿಸುವುದು ಬಿಜೆಪಿಗೆ ಹೊಸದೇನೂ ಅಲ್ಲ. 2014ರಿಂದೀಚೆಗೆ ಇಂತಹ ಹಲವು ಘಟನೆಗಳು ಸಂಭವಿಸಿವೆ. ದಾದ್ರಿಯಲ್ಲಿ ಅಖಾÉಕ್ ಹತ್ಯೆ, ಗೋ ಸಂರಕ್ಷಕರ ಪುಂಡಾಟ ಇತ್ಯಾದಿ ಘಟನೆಗಳು ಬಹುಕಾಲ ಬಿಜೆಪಿಯನ್ನು ಕಾಡಿದ್ದವು. ಈ ಸಾಲಿಗೆ ಈಗ ಸ್ಟಾಲಿನ್ ವಿಗ್ರಹ ಭಂಜನೆಯೂ ಸೇರಿದೆ. ಉತ್ತರದ ತುದಿಯಲ್ಲಿ ಸಂಭವಿಸಿದ ಈ ಘಟನೆಗೆ ದಕ್ಷಿಣದ ತುದಿಯಲ್ಲಿರುವ ರಾಜ್ಯದಲ್ಲೂ ಪ್ರತಿಕ್ರಿಯೆ ವ್ಯಕ್ತವಾಗಿದೆಯೆಂದರೆ ಬಿಜೆಪಿಯ ತಪ್ಪು ನಡೆಗೆ ಹೇಗೆ ಎದುರಾಳಿಗಳು ಕಾತರದಿಂದ ಕಾದು ಕುಳಿತುಕೊಂಡಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಲೆನಿನ್ ಪ್ರತಿಮೆ ಕೆಡಹುವ ಮೂಲಕ ಬಿಜೆಪಿ ಕಾರ್ಯಕರ್ತರು ವಿರೋಧಿಗಳಿಗೆ ತಮ್ಮ ಮೇಲೆ ಟೀಕಾಸ್ತ್ರಗಳನ್ನು ಎಸೆಯಲು ತಾವೇ ವಿಷಯವೊಂದನ್ನು ಕೊಟ್ಟಂತಾಗಿದೆ.
ಈ ಘಟನೆಯಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ತ್ರಿಪುರದಲ್ಲಿ ಮುಂದಿನ 5 ವರ್ಷದ ಆಳ್ವಿಕೆ ನಿರೀಕ್ಷಿಸಿದಷ್ಟು ಸರಾಗವಾಗಿರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಹೆಚ್ಚಿನ ರಾಜ್ಯಗಳಲ್ಲಿ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುವುದನ್ನು ನೋಡುವಾಗ ಇದರ ಹಿಂದೆ ಬೇರೆ ಯಾರದ್ದಾದರೂ ಹುನ್ನಾರ ಇದೆಯೇ ಎಂಬ ಅನುಮಾನವೂ ಉಂಟಾಗುತ್ತದೆ. ಹರ್ಯಾಣ, ಜಾರ್ಖಂಡ್, ಛತ್ತೀಸ್‌ಗಢ, ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಗೆದ್ದ ಬಹುತೇಕ ರಾಜ್ಯಗಳಲ್ಲಿ ಆರಂಭದ ದಿನಗಳಲ್ಲಿ ಗಂಭೀರವಾದ ಕಾನೂನು ಮತ್ತು ವ್ಯವಸ್ಥೆ ಪಾಲನೆ ಸಮಸ್ಯೆ ತಲೆದೋರಿತ್ತು. ಬಿಜೆಪಿ ಸರಕಾರ ಬಂದರೆ ಹಿಂಸಾಚಾರ ನಡೆಯುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಇದಾಗಿರಲೂ ಬಹುದು. ಹೀಗಾಗಿ ಮುಖ್ಯಮಂತ್ರಿಯಾಗಲಿರುವ ಬಿಪ್ಲವ್ ಕುಮಾರ್ ಎದುರು ದೊಡ್ಡ ಸವಾಲು ಇದೆ.