Advertisement

ರಾಜಧಾನಿಯಲ್ಲಿ ಬಿಜೆಪಿಗೆ ಬಹುಪರಾಕ್‌

01:43 AM May 24, 2019 | Lakshmi GovindaRaj |

ಬೆಂಗಳೂರು: ಮೂರು ಕ್ಷೇತ್ರದಲ್ಲಿ ಸತತ ಜಯ ಸಾಧಿಸುವ ಮೂಲಕ ರಾಜ್ಯದ ರಾಜಧಾನಿಯಲ್ಲಿ ಬಿಜೆಪಿ ತನ್ನ ಶಕ್ತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನ ಮೂರು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಗಳು ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದ್ದಾರೆ. ಬೆಂಗಳೂರು ಉತ್ತರ ಮತ್ತು ಕೇಂದ್ರ ದಲ್ಲಿ ಗೆಲುವಿನ ಅಂತರದಲ್ಲಿ ಸ್ವಲ್ಪ ಕಡಿಮೆಯಾಗಿದೆ.

Advertisement

ಆದರೆ, ಬೆಂಗಳೂರು ದಕ್ಷಿಣದಲ್ಲಿ ಗೆಲವಿನ ಅಂತರ ಹೆಚ್ಚಾಗಿದೆ. ಬೆಂಗಳೂರು ಉತ್ತರ ಕೇಂದ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅವರು 8,24,500 ಮತಗಳನ್ನು ಪಡೆಯುವ ಮೂಲಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ (6,76,982)ಅವರ ವಿರುದ್ಧ 1,47,518 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

2014ರಲ್ಲಿ ಡಿ.ವಿ.ಸದಾನಂದ ಗೌಡ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ವಿರುದ್ಧ 2.29 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈ ಭಾರಿ ಸದಾನಂದ ಗೌಡರ ಜಯದ ಅಂತರ ಕಡಿಮೆಯಾಗಿದೆಯಾದರೂ, ಬಿಜೆಪಿ ಶಕ್ತಿ ಕುಂದಿಲ್ಲ. ಕಾರಣ, ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆಗಳಲ್ಲಿ ಜೆಡಿಎಸ್‌ನ ಎರಡು, ಕಾಂಗ್ರೆಸ್‌ನ ಐದು ಹಾಗೂ ಬಿಜೆಪಿ ಕೇವಲ ಒರ್ವ ಶಾಸಕನಿದ್ದರೂ, ಬಿಜೆಪಿ ಮತಗಳಿಕೆಯಲ್ಲಿ ಯಾವುದೇ ರೀತಿಯಲ್ಲೂ ವ್ಯತ್ಯಾಸವಾಗಿಲ್ಲ.

ಅಲ್ಲದೆ, ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾದರರ ಆದ್ಯತೆ ಬದಲಾಗುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಹಾಲಿ ಸಂಸದ ಪಿ.ಸಿ.ಮೋಹನ್‌ ಅವರಿಗೆ ಮೈತ್ರಿ ಪಕ್ಷದ ಅಭ್ಯರ್ಥಿ ರಿಜ್ವಾನ ಹರ್ಷದ್‌ ತೀವ್ರ ಪೈಪೋಟಿ ನೀಡಿದ್ದರೂ, ರಾಜಾಜಿನಗರ ಮತ್ತು ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಲೀಡ್‌ ಬಂದಿದ್ದರಿಂದ ಪಿ.ಸಿ.ಮೋಹನ್‌ ಸುಲಭ ಜಯ ಸಾಧಿಸಿದ್ದಾರೆ.

ಮೊದಲ ಎಂಟು ಸುತ್ತಿನ ಮತ ಎಣಿಕೆಯಲ್ಲಿ ರಿಜ್ವಾನ್‌ ಹರ್ಷದ್‌ ಅವರೇ ಮುಂದಿದ್ದರು. 30 ಸಾವಿರ ಮತಗಳ ಅಂತರವನ್ನು ಆರಂಭದಲ್ಲಿ ಕಾಯ್ದುಕೊಂಡಿದ್ದ ರಿಜ್ವಾನ್‌ ಹರ್ಷದ್‌ ಅಂತಿಮವಾಗಿ ಸೋಲೋ ಪ್ಪಿಕೊಳ್ಳಬೇಕಾಯಿತು. ಪಿ.ಸಿ.ಮೋಹನ್‌ ಅವರು 602853 ಮತ ಹಾಗೂ ರಿಜ್ವಾನ್‌ ಹರ್ಷದ್‌ ಅವರು 531885 ಮತ ಗಳಿಸಿದ್ದು, 70968 ಮತಗಳ ಅಂತದಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

Advertisement

2014ರಲ್ಲಿ ಇವರಿಬ್ಬರ ನಡುವೆಯೇ ಸ್ಪರ್ಧೆ ನಡೆದಿದ್ದು, 1.37 ಲಕ್ಷ ಅಂತರದಲ್ಲಿ ಪಿ.ಸಿ.ಮೋಹನ್‌ ಜಯ ಸಾಧಿಸಿದ್ದರು. ಈ ಬಾರಿ ಸುಮಾರು 50 ಸಾವಿರ ಮತ ಕಡಿಮೆಯಾಗಿದೆ. ಬಿಜೆಪಿಯ ಭದ್ರ ಕೋಟಿ ಯಾಗಿದ್ದರೂ, ಕಾಂಗ್ರೆಸ್‌ ಅಭ್ಯರ್ಥಿ ಶೇ.44.43ರಷ್ಟು ಮತಗಳಿಸಿರುವ ಬಗ್ಗೆ ಬಿಜೆಪಿ ಆತ್ಮಾವ ಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ ಭದ್ರಕೋಟೆ ಎಂದುಕೊಂಡೇ, ಬಿಜೆಪಿ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೂ, ಬಿಜೆಪಿಯ ಅಶ್ವತ್ಥ್ ನಾರಾಯಣ ಗೌಡ ಅವರು 671388 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್‌ 878258 ಮತ ಪಡೆದುಕೊಂಡಿದ್ದಾರೆ.

2,06,870 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. 2014ರಲ್ಲಿ ಡಿ.ಕೆ. ಸುರೇಶ್‌ ಅವರು 2.31 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಬಾರಿ ಬಿಜೆಪಿಗೆ ಶೇ.41.4ರಷ್ಟು ಮತ ಬಂದಿದೆ. ಬಿಜೆಪಿ ಮುಖಂಡರು ಈ ಕ್ಷೇತ್ರದಲ್ಲಿ ಇನ್ನಷ್ಟು ಪ್ರಯತ್ನಪಟ್ಟಿದರೆ ಪ್ರಬಲ ಸ್ಪರ್ಧೆಯನ್ನಾದರೂ ನೀಡಬಹುದಾದ ಅವಕಾಶ ಇತ್ತು.

ಗೆದ್ದು ಬೀಗಿದ ಸೂರ್ಯ: ಕೇಂದ್ರ ಸಚಿವ ಅನಂತಕುಮಾರ್‌ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಅಚ್ಚರಿಯ ಆಯ್ಕೆಯಾದರೂ, ಕಾಂಗ್ರೆಸ್‌ನ ಅನುಭವಿ ಹಾಗೂ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ವಿರುದ್ಧ ಪ್ರಚಂಡ ಬಹುಮತದೊಂದಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ತೇಜ್ವಸಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನೀಡಬೇಕಿತ್ತು ಎಂದು ಪಕ್ಷದ ನಾಯಕರು ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೂ, ಕೇಂದ್ರ ಬಿಜೆಪಿಯ ನಿರ್ಣಯದಂತೆ ಬಿಜೆಪಿ ಮುಖಂ ಡರಾದ ಆರ್‌.ಅಶೋಕ್‌, ವಿ.ಸೋಮಣ್ಣ, ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿನಿ ಅನಂತಕುಮಾರ್‌ ಅವರ ಸಂಘಟಿತ ಪ್ರಚಾರ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ಹಾಗೂ ಅಭ್ಯರ್ಥಿಯ ವಾಕ್‌ಚಾತುರ್ಯವು ಹೆಚ್ಚಿನ ಮತ ಗಳಿಕೆಗೆ ಅನುಕೂಲ ಮಾಡಿಕೊಟ್ಟಿದೆ. ಅನಂತಕುಮಾರ್‌ ಅವರು ಈ ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದರು.

2014ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದ ಗೆಲುವಿನ ಅಂತರ 2.28 ಲಕ್ಷ ಇತ್ತು. ಕಾಂಗ್ರೆಸ್‌ನಿಂದ ನಂದನ್‌ ನಿಲೇಕಣಿಯವರು ಸ್ಪರ್ಧಿಸಿ ಸೋತಿದ್ದರು. ಈ ಬಾರಿ ತೇಜಸ್ವಿ ಸೂರ್ಯ 739229 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರನ್ನು 3.31 ಲಕ್ಷ ಮತಗಳ ಅಂತದಲ್ಲಿ ಸೋಲಿಸಿದ್ದಾರೆ. ಬಿಜೆಪಿ ಇಲ್ಲಿ ಶೇ.62.2ರಷ್ಟು ಮತ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next