Advertisement

ಬಿಜೆಪಿ ಯಾತ್ರೆಗೆ ಅಡ್ಡಿಗೆ ಮುಖ್ಯಮಂತ್ರಿಯಿಂದಲೇ ಬಂದ್‌ ಕುತಂತ್ರ

12:25 PM Jan 23, 2018 | Team Udayavani |

ಮೈಸೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಅಡ್ಡಿಪಡಿಸಲು, ಮಹಾದಾಯಿ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ರಾಜ್ಯ ಬಂದ್‌ ಮಾಡಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದೂರಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರಿಗೂ ಮೈಸೂರು ಭಾಗಕ್ಕೂ ಏನು ಸಂಬಂಧ ಎಂದು ಬಂದ್‌ಗೆ ಕರೆ ನೀಡಿರುವವರನ್ನು ಪ್ರಶ್ನಿಸಿದ ಅವರು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವಯಂಪ್ರೇರಿತರಾಗಿ ನಡೆಸುತ್ತಿರುವ ಬಂದ್‌, ಅವರಾಗಿಯೇ ಬಸ್‌ಗಳನ್ನು ನಿಲ್ಲಿಸಿ ಕಿತಾಪತಿ ಮಾಡುತ್ತಿದ್ದಾರೆ.

ಜನವರಿ 25ರಂದು ಮೈಸೂರಿನಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶಕ್ಕೆ ಅಡ್ಡಪಡಿಸಲು ಈ ರೀತಿ ಮಾಡಲಾಗುತ್ತಿದೆ. ಆದರೂ ಅಂದು ಮೈಸೂರಿನ ಸಮಾವೇಶ ನಡೆದೇ ನಡೆಯುತ್ತದೆ ಎಂದು ತಿಳಿಸಿದರು.

ಬೆಂಬಲ ಇದೆ: ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ಎಲ್ಲ ರೀತಿಯ ಹೋರಾಟಕ್ಕೂ ಬಿಜೆಪಿಯ ಬೆಂಬಲವಿದೆ. ಆದರೆ, ನಿಜವಾಗಿಯೂ ಹೋರಾಟ ನಡೆಸಬೇಕಿರುವುದು ಕಾಂಗ್ರೆಸ್‌ ಪಕ್ಷದ ವಿರುದ್ಧ, ಕರ್ನಾಟಕಕ್ಕೆ ನೀರು ಕೊಡುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಈಗಾಗಲೇ ಭರವಸೆ ನೀಡಿದ್ದಾರೆ.

ಅದಕ್ಕೆ ಗೋವಾ ಕಾಂಗ್ರೆಸ್‌ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಗೋವಾ ಕಾಂಗ್ರೆಸ್‌ ನಾಯಕರ ಹೇಳಿಕೆ ವಿರುದ್ಧ ರಾಜ್ಯದ ಕಾಂಗ್ರೆಸ್‌ ನಾಯಕರು ಏಕೆ ಪ್ರತಿಭಟನೆ ಮಾಡುತ್ತಿಲ್ಲ? ಇವರಿಗೆ ರಾಜ್ಯದ ಹಿತ ಬೇಕಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಜತೆಗೆ ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ, ಗೋವಾದಿಂದ ಕರ್ನಾಟಕಕ್ಕೆ ನೀರು ಬಿಡುವುದು ಅವರಿಗೆ ಇಷ್ಟವಿಲ್ಲ. ಸಮಸ್ಯೆ ಬಗೆಹರಿಯುವುದು ಅವರಿಗೆ ಬೇಕಾಗಿಲ್ಲ. ಅದೇ ಕಾರಣದಿಂದ ವಿವಾದವನ್ನು ಜೀವಂತವಾಗಿಡಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಯಡಿಯೂರಪ್ಪ ಹರಿಹಾಯ್ದರು.

ಗೆಲುವು ವಿಶ್ವಾಸ: ಯಾರು ಯಾವ ಪಕ್ಷಕ್ಕಾದರೂ ಹೋಗಲಿ, ಯಾವ ಪಕ್ಷವನ್ನಾದರೂ ಸೇರಿಕೊಳ್ಳಲಿ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸ್‌ ದುರ್ಬಳಕೆ: ರಾಜ್ಯಸರ್ಕಾರ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸ್‌ ಬಲ ಪ್ರಯೋಗದ ಮೂಲಕ ಬಿಜೆಪಿಯ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದೆ. ಮುಖ್ಯಮಂತ್ರಿ ತವರು ಮೈಸೂರಿನ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ವಾಗ್ಧಾಳಿ ನಡೆಸಿದರು. ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಟಾಳಿಕೆ ಮಾಡಿಸಲಾಗುತ್ತಿದೆ.

ದೂರು ನೀಡಲು ನಜರ್‌ಬಾದ್‌ ಠಾಣೆಗೆ ಹೋದ ನಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಲಾಗಿದೆ. ಅಲ್ಲಿನ ಇನ್ಸ್‌ಪೆಕ್ಟರ್‌ ನಮ್ಮ ಕಾರ್ಯಕರ್ತರನ್ನು ಥಳಿಸಿದ್ದಲ್ಲದೆ, ಎನ್‌ಕೌಂಟರ್‌ ಮಾಡುವ ಬೆದರಿಕೆ ಹಾಕಿದ್ದಾರೆ. ಸರ್ಕಾರ ಕೂಡಲೇ ಇನ್ಸ್‌ಪೆಕ್ಟರ್‌ ಅನ್ನು ಅಮಾನತ್ತಿನಲ್ಲಿಡಬೇಕು. ಈ ಬಗ್ಗೆ ಪೊಲೀಸ್‌ ಉನ್ನತ ಅಧಿಕಾರಿಗಳಿಗೆ ದೂರು ನೀಡುತ್ತೇವೆ, ಜತೆಗೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next