ಶಿವಮೊಗ್ಗ: ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯದ ನಡುವಿನ ಸೇತುವೆಯಾಗಿ ಕೇಂದ್ರ ಸಚಿವ ಅನಂತ್‌ಕುಮಾರ್ ಕಾರ್ಯನಿರ್ವಹಿಸುತ್ತಿದ್ದರು ಎಂದು ನೂತನ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಅನಂತ್‌ಕುಮಾರ್ ನಿಧನ ನಿಮಿತ್ತ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾನ್ಯ ಕಾರ್ಯಕರ್ತನನ್ನೂ ಗೌರವಿಸಿ, ಪಕ್ಷ ಕಟ್ಟಿ ಬೆಳೆಸಿದ ರೀತಿ ಎಲ್ಲರಿಗೂ ಮಾದರಿ. ಅಜಾತಶತ್ರುವಾಗಿ ಎಲ್ಲರ ಪ್ರೀತಿಪ್ರಾತರಾಗಿ ಹಿರಿಯರೂ ಕೂಡ ಅವರನ್ನು
ಗೌರವಿಸುವ ವ್ಯಕ್ತಿತ್ವ ಹೊಂದಿದವರು. 6 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಎಲ್ಲರಿಗೂ ಮಾಗದರ್ಶಕರಾಗಿ ಪಕ್ಷದ ದೊಡ್ಡ ಸಂಘಟಕರಾಗಿದ್ದ ಅನಂತ್‌ಕುಮಾರ್ ನಿಧನಕ್ಕೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು.
ಬಿಜೆಪಿ ಹಿರಿಯ ನಾಯಕ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಅನಂತ್‌ಕುಮಾರ್ ನಿಧನ ಆಘಾತಕಾರಿಯಾಗಿದೆ. ಪಕ್ಷ ಅಧಿಕಾರ ಗ್ರಹಣ ಮಾಡುವಲ್ಲಿ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿತ್ತು. ಪಕ್ಷದ ಆದರ್ಶ ಮತ್ತು ಸಿದ್ಧಾಂತಗಳನ್ನು ಬಿಡದೆ ಎಲ್ಲೂ ಲೋಪವಾಗದಂತೆ ಎಲ್ಲರನ್ನೂ ಪ್ರೀತಿಸಿ ಪಕ್ಷ ಬೆಳೆಸಿದ ರೀತಿ ಗಮನಾರ್ಹವಾಗಿದೆ. ಅವರು ಅಪೂರ್ಣಗೊಳಿಸಿದ ಕೆಲಸಗಳನ್ನು ಪೂರ್ತಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, 1984ರಿಂದ ಅನಂತ್ ಒಡನಾಟ ನನಗಿದ್ದು ಅವರಿದ್ದೆಡೆ ಉತ್ಸಾಹ, ಹಾಸ್ಯ, ಕೇಕೆ ಎಲ್ಲವೂ ಇತ್ತು. ಎಬಿವಿಪಿ ಪದಾಧಿಕಾರಿಗಳಾಗಿ ನಾವಿಬ್ಬರೂ ಬಸ್ಸಿನಲ್ಲೇ ಸಂಚರಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೆವು.
ಬಿಎಸ್‌ವೈ ಅವರ ಅನೇಕ ಹೋರಾಟಗಳ ಹಿಂದಿನ ಯೋಜನಾ ಶಕ್ತಿ ಮತ್ತು ಪ್ರೇರಕ ಶಕ್ತಿ ಅನಂತ್‌ಜೀ ಆಗಿದ್ದರು. ಪಕ್ಷದ ಕಾರ್ಯಕರ್ತರ ಜತೆ ನಿರಂತರ ಸಂಪರ್ಕ, ಅಪೂರ್ವ ನೆನಪಿನ ಶಕ್ತಿ ಮತ್ತು ದೊಡ್ಡ ಪರಿಶ್ರಮ ಅವರದ್ದಾಗಿತ್ತು ಎಂದು ಹೇಳಿದರು.
ಆರೆಸ್ಸೆಸ್‌ನ ಪಟ್ಟಾಭಿರಾಮ್, ಪದ್ಮನಾಭ ಭಟ್, ಶಾಸಕರಾದ ಆಯನೂರು ಮಂಜುನಾಥ್, ಜಿಲ್ಲಾಧ್ಯಕ್ಷ ರುದ್ರೇಗೌಡ, ದತ್ತಾತ್ರಿ, ಡಿ.ಎಸ್.ಅರುಣ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.