ನಂಜನಗೂಡು: ಉಗ್ರಗಾಮಿಗಳು ದೇಶದೊಳಗೆ ನುಗ್ಗಲು ಬಿಟ್ಟಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಟೀಕಿಸಿದರು.
ನಗರದ ಚಾಮಲಾಪುರದ ಹುಂಡಿಯಲ್ಲಿ ಗುರುವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಆಡಳಿತ ವೈಫಲ್ಯದ ಕುರಿತು ವಿವರವಾಗಿ ಮುದ್ರಿಸಿರುವ ಹೊತ್ತಿಗೆಗಳನ್ನು ಮನೆ ಮನೆಗೆ ತಲುಪಿಸಿ ಕಾಂಗ್ರೆಸ್ ಗೆಲುಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಪೊಳ್ಳು ಭರವಸೆ: ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಖಾತೆಗೂ ಹಣ ಜಮೆ ಮಾಡುವುದಾಗಿ ನೀಡಿದ್ದ ಭರವಸೆ ಏನಾಯಿತು?, ಯಾರ ಖಾತೆಗೆ ಎಷ್ಟು ಹಣ ಬಂದಿದೆ ಎಂದು ಪ್ರಶ್ನಿಸಿದ ಅವರು, ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಕೇವಲ 37 ಲಕ್ಷ ಮಂದಿಗೆ ಮಾತ್ರ ಕೆಲಸ ನೀಡಿದೆ. ಸುಳ್ಳು ಪ್ರಚಾರ, ಪೊಳ್ಳು ಘೋಷಣೆಗಳಲ್ಲಿ ನಿರತವಾಗಿದೆ. ಬಡವರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧ್ರುವ ಕಾಂಗ್ರೆಸ್ ಆಸ್ತಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಷ್ಣುನಾಧನ್ ಮಾತನಾಡಿ, ಅತ್ಯಂತ ಕ್ರಿಯಾಶೀಲ ಸಂಸದ ಎಂಬ ಪ್ರಸಿದ್ಧಿ ಪಡೆದಿರುವ ಆರ್.ಧ್ರುವನಾರಾಯಣ ಪಕ್ಷದ ಆಸ್ತಿಯಾಗಿದ್ದಾರೆ. ಸಾಧನೆಯಲ್ಲಿ ರಾಜ್ಯಕ್ಕೆ ಪ್ರಥಮರಾಗಿ, ರಾಷ್ಟ್ರದಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಇವರ ಗೆಲುವು ಕಟ್ಟಿಟ್ಟಬುತ್ತಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಧ್ರುವನಾರಾಯಣ ಸಾಧನೆ ಹಾಗೂ ಬಿಜೆಪಿ ದುರಾಡಳಿತದ ಕುರಿತು ಹೊರತಂದಿರುವ ಕಿರುಹೊತ್ತಿಗೆಯನ್ನು ಮತದಾರರಿಗೆ ತಲುಪಿಸಿ ಭಾರಿ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕ್ಷೇತ್ರದಲ್ಲಿ ಪ್ರತಿ ಕಾರ್ಯಕರ್ತರೂ ತಲಾ 25 ಮನೆಗಳ ಜವಾಬ್ದಾರಿ ಹೊತ್ತು ಕಾಂಗ್ರೆಸ್‌ಗೆ ಮತ ತರಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕ್ಷೇತ್ರ ವೀಕ್ಷಕ ಶ್ರೀಕಂಠು, ಪಕ್ಷದ ನಗರಾಧ್ಯಕ್ಷ ಪಿ.ಶ್ರೀನಿವಾಸ್, ನಗರಸಭಾಧ್ಯಕ್ಷೆ ಪುಷ್ಪಲತಾ ಕಮಲೇಶ, ಉಪಾಧ್ಯಕ್ಷ ಪ್ರದೀಪ್, ನಗರಸಭೆ ಸದಸ್ಯರಾದ ಸಿ.ಎಂ. ಶಂಕರ, ಲಿಂಗಪ್ಪ, ಚಲುವರಾಜು, ಆರ್ ರಾಜು, ಮಂಜುನಾಥ, ಮುಖಂಡರಾದ ಕುರಹಟ್ಟಿ ಮಹೇಶ, ಎಸ್.ಸಿ.ಬಸವರಾಜು, ಮಂಜು. ನಂದಕುಮಾರ, ಆರ್.ಮಹದೇವು, ಅರಸು, ಶ್ರೀಧರ್ ಇತರರು ಉಪಸ್ಥಿತರಿದ್ದರು.