ಬೆಂಗಳೂರು: ಬಿಜೆಪಿ ಸರ್ಕಾರ ಅಂದರೆ ಅದು ಸುಳ್ಳಿನ ಕಾರ್ಖಾನೆ. ಅಧಿಕಾರಕ್ಕೆ ಬಂದಾಗಿನಿಂದ ಬರೀ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಸ್ವಾತಂತ್ರ್ಯ ಭಾರತದ ನಂತರ ಹಲವಾರು ಪ್ರಧಾನಿಗಳು ಬಂದರೂ, ಮೋದಿಯಷ್ಟು ಸುಳ್ಳು ಹೇಳುವವರು ಯಾರೂ ಬರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಫ್ರೀಡಂ ಪಾರ್ಕ್ ನಲ್ಲಿ ಬೆಲೆ ಏರಿಕೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವ ಏರಿಸಿದೆ. ಅದಕ್ಕೆ ಕಾಂಗ್ರೆಸ್ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಇದೇ ಮೋದಿ ನೇತೃತ್ವದಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಹೋರಾಟ ಮಾಡುತ್ತಿದ್ದರು. ಮನಮೋಹನ್ ಸಿಂಗ್ ಸರ್ಕಾರವನ್ನು ಕಟುವಾಗಿ ಮಾತಾಡಿದ್ದರು ಎಂದರು.
ಮೋದಿ ಅವರೇ ಒಳ್ಳೆಯ ದಿನ ಬಂತೆ? ಮಹಿಳೆಯರಿಗೆ, ಯುವಕರಿಗೆ ಒಳ್ಳೆಯ ದಿನ ಬಂತೆ? ಎಂಡು ವರ್ಷದಲ್ಲಿ ನೀವು ಯಾವುದನ್ನು ಈಡೆರಿಸಿದ್ದೀರಿ ತೋರಿಸಿ. ಯಾಕೆ ಬೆಲೆ ಏರಿಕೆ ಎಂದು ಕೇಳಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಹೆಚ್ಚಾಗಿದೆ ಎನ್ನುತ್ತಾರೆ. ಹಾಗಾದ್ರೆ ಮನಮೋಹನ್ ಸಿಂಗ್ ಕಾಲದಲ್ಲಿ ಯಾಕೆ ಬೆಲೆ ಏರಿಕೆಯಾಗಲಿಲ್ಲ. ಮನಮೋಹನ್ ಸಿಂಗ್ ಕಾಲದಲ್ಲಿ ಡೀಸೇಲ್ ಬೆಲೆ 46, ಪೆಟ್ರೋಲ್ ಬೆಲೆ 68 ರೂ. ಇತ್ತು. ಆದರೆ ಈಗ 113 ರೂ ಆಗಿದೆ. ಇದು ಹಗಲು ದರೋಡೆ ಅಲ್ಲವೇ ಎಂದರು.
ಇದನ್ನೂ ಓದಿ:ಚುಚ್ಚಿದಾಗ ನರ ಕಟ್ ಆಗಿ ಚಂದ್ರು ಸತ್ತಿದ್ದಾನೆ : ಜಮೀರ್ ಅಹ್ಮದ್ ಖಾನ್ ವಿವಾದ
ಸ್ವಾತಂತ್ರ್ಯ ಬಂದು 75 ವರ್ಷ ಆದಾಗ ರೈತರ ಆದಾಯ ಹೆಚ್ಚು ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ರೈತರ ಸಾಲವೇ ದುಪ್ಪಟ್ಟಾಗಿದೆ. ಗೊಬ್ಬರದ ಬೆಲೆ ಹೆಚ್ಚು ಮಾಡಿದ್ದಾರೆ, ಒಂದು ಚೀಲಕ್ಕೆ 150 ರೂ ಹೆಚ್ಚು ಮಾಡಿದ್ದಾರೆ. ರೈತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ರೈತರ ಆದಾಯ ಎಲ್ಲಿ ದುಪ್ಪಟ್ಟಾಯ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.