ಚನ್ನಪಟ್ಟಣ: ವಿಶ್ವದ ಗಮನ ಸೆಳೆದಿರುವ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಉದ್ದೇಶ ಭಾರತೀಯ ಜನತಾ ಪಕ್ಷಕ್ಕೆ ಇಲ್ಲ. ಮತ ತಮ್ಮತ್ತ ಸೆಳೆಯಲು ವಿರೋಧಪಕ್ಷಗಳು ಮಾಡುತ್ತಿರುವ ಹುನ್ನಾರ ಎಂದು ಮಾಜಿ ಸಚಿವ, ಶಾಸಕ ಸುರೇಶ್‌ಕುಮಾರ್ ಹೇಳಿದರು.
ನಗರದ ವಕೀಲರ ಸಂಘದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಅವರ ಪರ ಮತ ಪ್ರಚಾರ ನಡೆಸಿದ ಅವರು ಮಾತನಾಡಿ, ಭಾರತದ ಮಹಾನ್ ಗ್ರಂಥವಾದ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ. ಮತದಾರರನ್ನು ದಿಕ್ಕು ತಪ್ಪಿಸಲು ಅದರಲ್ಲೂ ಹಿಂದುಳಿದ ಸಮುದಾಯದ ಮತಗಳನ್ನು ಕೇಂದ್ರಿಕರಿಸಿಕೊಳ್ಳಲು ಅನ್ಯಪಕ್ಷಗಳು ಮಾಡಿರುವ ತಂತ್ರಗಾರಿಕೆಯಾಗಿದೆ. ಸಂವಿಧಾನ ದುರ್ಬಲ ಗ್ರಂಥವಲ್ಲ. ಮಹಾನ್ ಮೇಧಾವಿಗಳು ರಚನೆ ಮಾಡಿರುವ ಮಹಾನ್ ಗ್ರಂಥವಾಗಿದೆ. ಭಾರತ ರತ್ನ, ಡಾ. ಬಿ.ಆರ್.ಅಂಬೇಡ್ಕರ್‌ಗೆ ಗೌರವ ನೀಡುವ ಪಕ್ಷವಿದ್ದರೆ ಅದು ಭಾರತೀಯ ಜನತಾ ಪಕ್ಷ ಎಂದರು.
ಪಾರದರ್ಶಕ ಆಡಳಿತಕ್ಕೆ ಮತ್ತೂಮ್ಮೆ ಅವಕಾಶ ನೀಡಿ: ದೇಶದ ಸುರಕ್ಷತೆಗಾಗಿ ಹಾಗೂ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಕಾನೂನು ಪಂಡಿತರಾಗಿರುವ ವಕೀಲರು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತಕ್ಕೆ ಮತ್ತೂಮ್ಮೆ ಅವಕಾಶ ನೀಡಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಗೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಭರವಸೆ ಕಾರ್ಯಗತವಾಗಲಿ: ನ್ಯಾಯಾಲಯದಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಸೆಳೆದಾಗ ಸಭೆಯಲ್ಲಿ ಹಾಜರಿದ್ದ ಹಿರಿಯ ವಕೀಲೆ ಅಂಬಿಕಾ ಅವರು ಚುನಾವಣಾ ಸಂದರ್ಭಗಳಲ್ಲಿ ಭರವಸೆಗಳನ್ನು ನೀಡುತ್ತೀರಿ, ಇದೇ ಮಾತನ್ನು ಕೇಳಲು ಮತ್ತೂಂದು ಚುನಾವಣೆಯನ್ನು ಎದುರು ನೋಡಬೇಕಾಗುತ್ತದೆ ಎಂದು ನಯವಾಗಿಯೇ ತರಾಟೆಗೆ ತಗೆದುಕೊಂಡರು.
ನ್ಯಾಯಾಲಯದಲ್ಲಿ ಕಿರಿಯ ವಕೀಲರಿಗೆ ಕ್ಯಾಂಟಿನ್ ವ್ಯವಸ್ಥೆಯಿಲ್ಲ. ದೂರದ ಗ್ರಾಮಗಳಿಂದ ಬಂದು ನ್ಯಾಯಾಲಯದಲ್ಲಿ ತರಬೇತಿ ಪಡೆಯುತ್ತಾರೆ. ಅವರಿಗೆ ಒಂದು ಕ್ಯಾಂಟಿನ್ ವ್ಯವಸ್ಥೆಯನ್ನು ಮಾಡಿಕೊಡಬೇಕು. ಇದು ಕೇವಲ ಭರವಸೆಗಳು ಆಗಬಾರದು, ಕಾರ್ಯಗತವಾಗಬೇಕು ಎಂದು ಮನವಿ ಮಾಡಿದರು.
ವಕೀಲರ ಬೇಡಿಕೆಗಳನ್ನು ಸ್ವೀಕರಿಸಿದ ಸುರೇಶ್ ಕುಮಾರ್ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಕೆ. ನಿಂಗಪ್ಪ, ಖಜಾಂಚಿ ಹೇಮಂತ್, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ನಗರ ಘಟಕದ ಅಧ್ಯಕ್ಷ ವಿಷಕಂಠು, ಪಕ್ಷದ ಮುಖಂಡರಾದ ಜಯರಾಮು, ರಾಂಪುರ ಮಲವೇಗೌಡ, ಹುಲುವಾಡಿ ದೇವರಾಜು, ನೇರಳೂರು ನಾಗರಾಜು ಮತ್ತಿತರರಿದ್ದರು.