Advertisement

ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ

11:52 PM May 15, 2019 | mahesh |

∙ ನೀವು ಇತ್ತೀಚೆಗೆ ಸಂದರ್ಶನವೊಂದರಲ್ಲಿ ” ನರೇಂದ್ರ ಮೋದಿ ಎಲ್ಲಿ ಮತ್ತೂಮ್ಮೆ ಪ್ರಧಾನಿಯಾಗುತ್ತಾರೋ ಎಂದು ನನಗೆ ಭಯವಾಗುತ್ತದೆ’ ಎಂದಿರಿ. ಏನು ನಿಮ್ಮ ಮಾತಿನ ಅರ್ಥ?
ಉದಾಹರಣೆಗೆ, ಇತ್ತೀಚೆಗಷ್ಟೇ ಮೋದಿಯವರು ಅಣ್ವಸ್ತ್ರಗಳ ಬಗ್ಗೆ ನೀಡಿದ ಹೇಳಿಕೆಯನ್ನು ಗಮನಿಸಿ. ಚಿಕ್ಕ ಹುಡುಗರು ದೀಪಾವಳಿಗೆ ಪಟಾಕಿ ಖರೀದಿಸಿದಾಗ ಮಾತನಾಡುತ್ತಾರಲ್ಲ, ಆ ರೀತಿ ಅವರು ಮಾತನಾಡಿದರು. “ನಾವೇನೂ ದೀಪಾವಳಿ ಆಚರಿಸಲು ಅಣ್ವಸ್ತ್ರ ಇಟ್ಟುಕೊಂಡಿಲ್ಲ’ ಎಂದು ಅವರು ಹೇಳಿದರು. ಏನು ಈ ಮಾತಿನ ಅರ್ಥ? ಇಂದು ಇಡೀ ವಿಶ್ವವೇ ಅಣ್ವಸ್ತ್ರ ಮುಕ್ತ ಜಗತ್ತಿನ ಬಗ್ಗೆ ಮಾತನಾಡುತ್ತಿದೆ. ಇಂಥ ಸಂದರ್ಭದಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವವರು “ನಾವು ದೀಪಾವಳಿಗಾಗಿ ಅಣ್ವಸ್ತ್ರಗಳನ್ನು ಇಟ್ಟುಕೊಂಡಿಲ್ಲ’ ಎಂದು ಹೇಳುತ್ತಾರೆ. ಇದರಿಂದ ನಾವು ಜಗತ್ತಿಗೆ ಎಂಥ ಸಂದೇಶ ಕಳುಹಿಸುತ್ತಿದ್ದೇವೆ? ಭಾರತ ಅಗ್ರೆಸಿವ್‌ ಆಗಿದೆ, ನಾವು ಮತ್ತು ನಮ್ಮ ನಾಯಕತ್ವ ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧವಿದ್ದೇವೆ ಎಂಬ ಸಂದೇಶವನ್ನೇ? ಇದು ಒಳ್ಳೆಯದಲ್ಲ. ಸತ್ಯವೇನೆಂದರೆ, ಅವರ ಈ ರೀತಿಯ ಹೇಳಿಕೆಗಳಿಂದ ನಾನು ಚಿಂತಿತನಾಗಿದ್ದೇನೆ. ಅದಕ್ಕೇ ಹಾಗೆ ಹೇಳಿದೆ.

Advertisement

∙ಯಾವ ರೀತಿ ನೀವು ಭಾರತದ ಬಗ್ಗೆ ಚಿಂತಿತರಾಗಿದ್ದೀರಿ? ಹಿಂದೂ ರಾಷ್ಟ್ರದ ಐಡಿಯಾವನ್ನು ಪ್ರಚಾರ ಮಾಡಲಾಗುತ್ತಿದೆ ಎಂಬ ಕಳವಳವೇ? ನಿಜಕ್ಕೂ ಅದು ಸಾಧ್ಯವಾಗುತ್ತದೆ ಎಂದು ನಿಮಗೆ ಅನ್ನಿಸುತ್ತದಾ?
ಮೊದಲನೆಯದಾಗಿ, 2014ರಲ್ಲಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಆರಂಭಿಸಿದಾಗ “ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ’ ಎಂಬುದೊಂದೇ ಅವರ ಘೋಷವಾಕ್ಯವಾಗಿತ್ತು. ಈ ಬಾರಿ ಅವರ ಚುನಾವಣಾ ಪ್ರಚಾರ ಆರಂಭವಾದದ್ದು “ಹಿಂದುತ್ವ’ದೊಂದಿಗೆ! ಪ್ರಧಾನಮಂತ್ರಿಯೂ ಸರ್ವರನ್ನೂ ಸಮಾನವಾಗಿ ಕಾಣಬೇಕು. ಇದನ್ನೇ ಹೇಳಿ ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಆದರೆ ಅವರೀಗ ಹಿಂದುತ್ವವನ್ನು ಪಸರಿಸುವ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುತ್ತಾರೆ. ಇದರರ್ಥ ಅವರು ಧಾರ್ಮಿಕ ವ್ಯಕ್ತಿಗಳಿಗೆ “ನಾನು ಇರುವುದು ಹಿಂದುತ್ವವನ್ನು ರಕ್ಷಿಸುವುದಕ್ಕೆ’ ಎಂದ ಸಂದೇಶ ಕಳುಹಿಸುತ್ತಿದ್ದಾರೆ. ಇದು ಸರಿಯಲ್ಲ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು.

∙ ಒಂದು ವೇಳೆ ಬಿಜೆಪಿ ಗೆದ್ದರೆ, ನಿತಿನ್‌ ಗಡ್ಕರಿ ಅವರು ಪ್ರಧಾನಮಂತ್ರಿಯಾಗುವ ಸಾಧ್ಯತೆ ಇದೆಯೇ?
ಇಲ್ಲ, ಇಲ್ಲ. ಬಿಜೆಪಿ ಗೆಲ್ಲುವ ಪ್ರಶ್ನೆಯೇ ಇಲ್ಲ. ಹಾಗೆ ಆಯಿತು ಅಂದರೂ, ಮೋದಿ ಮತ್ತು ಅಮಿತ್‌ ಶಾ ಪಕ್ಷದಲ್ಲಿ ಬೇರೆ ಯಾರಿಗೂ ಅವಕಾಶ ಕೊಡುವುದಿಲ್ಲ.

∙ ನೀವು ಅವರನ್ನು ಮುಖತಃ ಭೇಟಿಯಾದಾಗಲೆಲ್ಲ, ಅವರ ಬಗ್ಗೆ ಏನನ್ನಿಸುತ್ತದೆ?
ಅನೇಕ ವರ್ಷಗಳಿಂದ ನಾನು ಅವರನ್ನು ಬಲ್ಲೆ. ಹತ್ತು ವರ್ಷ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವನಾಗಿದ್ದೆ. ಕೃಷಿ ಇಲಾಖೆಗೆ ದೆಹಲಿಯಲ್ಲಿ ಕುಳಿತು ನೀತಿ ರಚಿಸುವುದಷ್ಟೇ ಕೆಲಸವಾಗಿರುತ್ತದೆ. ಆದರೆ ನಿಜವಾದ ಕೆಲಸಗಳು ಆಗಬೇಕಿರುವುದು ಫೀಲ್ಡ್‌ಗಳಲ್ಲಿ. ಈ ಕಾರಣಕ್ಕಾಗಿಯೇ ನಾವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದೆವು.
ಕೃಷಿ ಉತ್ಪಾದನೆಯನ್ನು ಮತ್ತು ಗುಣಮಟ್ಟವನ್ನು ಸುಧಾರಿಸಬೇಕೆಂದರೆ, ಕೃಷಿಕರೊಂದಿಗೆ, ಕೃಷಿ ವಿ.ವಿ.ಗಳೊಂದಿಗೆ, ಕೃಷಿ ವಿಜ್ಞಾನಿಗಳೊಂದಿಗೆ ಮತ್ತು ಆಯಾ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ಮೋದಿಯವರನ್ನು ಒಳಗೊಂಡು ಎಲ್ಲ ಮುಖ್ಯಮಂತ್ರಿಗಳ ಜೊತೆಗೂ ನಾನು ಸಂಪರ್ಕದಲ್ಲಿದ್ದೆ. ಆ ಸಮಯದಲ್ಲಿ ನಮ್ಮ ಕಾರ್ಯಕ್ರಮಗಳನ್ನು ಸುಧಾರಿಸಲು ಅವರು ನನಗೆ ಸಹಕರಿಸಿದರು. ಅದೇ ರೀತಿಯಲ್ಲಿ ನಾವು ಅನೇಕ ಸಂದರ್ಭಗಳಲ್ಲಿ ಭೇಟಿಯಾದವು. ವಿದೇಶಕ್ಕೂ ಜೊತೆಯಾಗಿ ಹೋಗಿದ್ದೆವು. ಅಧಿಕೃತ ನಿಯೋಗದೊಂದಿಗೆ ಇಸ್ರೇಲ್‌ಗೆ ಹೋದ ಮೊದಲ ಕೃಷಿ ಸಚಿವ ನಾನು. ಆ ಸಮಯದಲ್ಲಿ ಮೂರ್ನಾಲ್ಕು ಮುಖ್ಯಮಂತ್ರಿಗಳನ್ನೂ ಜೊತೆಯಲ್ಲಿ ಕರೆದೊಯ್ದಿದ್ದೆ. ಅದರಲ್ಲಿ ನರೇಂದ್ರ ಮೋದಿಯೂ ಇದ್ದರು.

∙ ಎನ್‌ಸಿಪಿಯು ಕಾಂಗ್ರೆಸ್‌ನೊಂದಿಗೆ ಒಂದಾಗುವ ಸಾಧ್ಯತೆ ಇದೆಯೇ?
ಇಲ್ಲ. ಆ ಪ್ರಶ್ನೆಯೇ ಉದ್ಭವಿಸದು.

Advertisement

∙ ನೀವೊಂದು ರೀತಿಯಲ್ಲಿ ರಾಜಕೀಯದ ಭೀಷ್ಮ ಪಿತಾಮಹರಿದ್ದಂತೆ. ಹಾಗಿದ್ದರೆ ಈ ಚುನಾವಣೆಯಲ್ಲಿ ಏನಾಗಲಿದೆ ಎಂದು ನಿಮ್ಮ ಊಹೆ?
ನನಗನ್ನಿಸುತ್ತೆ, ಈ ಬಾರಿ ಭಾರತೀಯ ಜನತಾ ಪಾರ್ಟಿ ಅಧಿಕಾರ ಕಳೆದುಕೊಳ್ಳಲಿದೆ. ಬಿಜೆಪಿಯೇತರ ಪಕ್ಷಗಳೆಲ್ಲ ಜೊತೆಯಾಗುತ್ತವೆ ಮತ್ತು ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ಫೈನಲೈಸ್‌ ಮಾಡುತ್ತವೆ. ಈ ಎಲ್ಲಾ ಪಕ್ಷಗಳೂ ಒಬ್ಬ ನಾಯಕನನ್ನು ಆಯ್ಕೆ ಮಾಡಿ, ದೇಶಕ್ಕೆ ಸುಭದ್ರ ಸರ್ಕಾರವನ್ನು ಕೊಡುತ್ತವೆ.

ಕೃಪೆ: ರೆಡಿಫ್

ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next