Advertisement

ಪಕ್ಷಾಂತರಿಗಳಿಗೆ ಮಣೆ

06:00 AM Nov 22, 2018 | |

ಹೊಸದಿಲ್ಲಿ: ಡಿ.7ರಂದು ನಡೆಯಲಿರುವ ರಾಜಸ್ಥಾನ ಚುನಾವಣೆಯಲ್ಲಿ ಪಕ್ಷಾಂತರಿಗಳದ್ದೇ ಹವಾ! 
ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿರುವ “ಪ್ಯಾರಾಚೂಟ್‌’ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವಲ್ಲಿ ಎರಡೂ ಪಕ್ಷಗಳು ಆಸಕ್ತಿ ತೋರಿರುವುದು ವಿಶೇಷ. ಈ ಬಾರಿ ಪಕ್ಷಾಂತರ ಮಾಡಿರುವ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇಂದ್ರದ ಮಾಜಿ ಸಚಿವ ಜಸ್ವಂತ್‌ ಸಿಂಗ್‌ ಪುತ್ರ ಮಾನವೇಂದ್ರ ಸಿಂಗ್‌ ಅವರು ತಮ್ಮ ಅಪ್ಪನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರೋಪಿಸಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದವರು. ಅವರು ಈಗ ಝಾಲ ರಾಪಟನ್‌ನಲ್ಲಿ ಸಿಎಂ ವಸುಂಧರಾ ರಾಜೇ ವಿರುದ್ಧ ಕಾಂಗ್ರೆಸ್‌ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದಾರೆ. ಇನ್ನು ಆಡಳಿತಾರೂಢ ಬಿಜೆಪಿಯೇ 7 ಮಂದಿ ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿದೆ. ಈ ಪೈಕಿ 6 ಮಂದಿ ಕಾಂಗ್ರೆಸ್‌ನಿಂದ ಬಂದವರಾದರೆ, ಒಬ್ಬರು ಬಿಎಸ್‌ಪಿಯಿಂದ ಬಿಜೆಪಿ ಸೇರ್ಪಡೆಯಾದವರು.

Advertisement

ಇದೇ ವೇಳೆ, ಪ್ಯಾರಾ ಚೂಟ್‌ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವುದಿಲ್ಲ. ಪಕ್ಷದ ಕಾರ್ಯಕರ್ತರ ಮಾತೇ ಅಂತಿಮ ಎಂದು ಆಗಸ್ಟ್‌ನಲ್ಲಿ ನುಡಿದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ  ಮನಸ್ಸು ಬದಲಿಸಿ, 4 ಪಕ್ಷಾಂತರಿಗಳಿಗೆ ಟಿಕೆಟ್‌ ನೀಡಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿದ ಕೆಲವರಿಗೆ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. 

ರೈಲು ಮಾರ್ಗಕ್ಕಾಗಿ ಕಾಯುತ್ತಿರುವ ಜನ: ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಸ್ಪರ್ಧಿಸಿರುವ ರಾಜಸ್ಥಾನದ ಟೋಂಕ್‌ ಕ್ಷೇತ್ರದ ಮತದಾರರಿಗೆ ಚುನಾವಣೆಯ ಪ್ರಮುಖ ವಿಷಯವೆಂದರೆ ರೈಲು ಮಾರ್ಗ. ಕಳೆದ ಎರಡು ದಶಕಗಳಿಂದಲೂ ಇಲ್ಲಿನ ಜನ ರೈಲು ಮಾರ್ಗಕ್ಕಾಗಿ ಕಾಯುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಪೈಲಟ್‌, ಇದನ್ನು ಗಂಭೀರವಾಗಿಪರಿಗಣಿಸಿದ್ದೇನೆ ಎಂದಿದ್ದಾರೆ. 

ಧರ್ಮದ ಹೆಸರಲ್ಲಿ ವೋಟು: ಮಧ್ಯ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಅವರು ಧರ್ಮದ ಹೆಸರಿನಲ್ಲಿ ಮತ ಯಾಚಿಸಿರುವಂಥ ವಿಚಾರ ಈಗ ತೀವ್ರ  ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಮರಿ ರುವ ಬೂತ್‌ಗಳಲ್ಲಿ ಶೇ.90ರಷ್ಟು ಮತಗಳು ಕಾಂಗ್ರೆಸ್‌ಗೆ ಬೀಳುವಂತೆ ನೋಡಿಕೊಳ್ಳಿ. ಮುಸ್ಲಿಮರ ಮತ ಸಿಗದೇ ಇದ್ದರೆ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿಲ್ಲ’ ಎಂದು ಕಮಲ್‌ನಾಥ್‌ ಹೇಳುತ್ತಿರುವ ವಿಡಿಯೋವೊಂದು ಬಹಿರಂಗವಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಆದರೆ, ಈ ವಿವಾದ ಕುರಿತು ಕಾಂಗ್ರೆಸ್ಸಾಗಲೀ, ಕಮಲ್‌ನಾಥ್‌ ಅವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

“ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಯತ್ನ’
ನರೇಂದ್ರ ಮೋದಿ ಆಡಳಿತದಲ್ಲಿ ಸಂಸತ್‌, ಸಿಬಿಐನಂಥ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಜಾಣ ಹೆಜ್ಜೆ ಇಡಲಾಗುತ್ತಿದೆ. ಹೀಗೆಂದು ಆರೋಪಿಸಿದ್ದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌. ಮಧ್ಯಪ್ರದೇಶ ಅಸೆಂಬ್ಲಿ ಚುನಾವಣೆಗೆ ಇನ್ನೇನು 6 ದಿನಗಳು ಬಾಕಿಯಿರುವಾಗ ಇಂದೋರ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ಪರಿಸ್ಥಿತಿಯನ್ನು ಬದಲಿಸದೇ ಇದ್ದರೆ ನಮ್ಮ ಪ್ರಸ್ತುತ ತಲೆಮಾರನ್ನು ಇತಿಹಾಸ ಎಂದಿಗೂ ಕ್ಷಮಿಸಲಾರದು ಎಂದೂ ಹೇಳಿದ್ದಾರೆ. ನೋಟು ಅಮಾನ್ಯ ಕುರಿತು ಪ್ರಸ್ತಾಪಿ ಸಿದ ಸಿಂಗ್‌, ನೋಟು ಅಮಾನ್ಯವು ತನ್ನ ಗುರಿ ಸಾಧಿಸುವಲ್ಲಿ ವಿಫ‌ಲವಾಗಿದೆ ಎಂದಿದ್ದಾರೆ‌. ರಫೇಲ್‌ ಕುರಿತು ಮಾತನಾಡಿ, ಇದರ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಮೋದಿ ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಮಾಡುತ್ತಿರುವುದರಿಂದ ಡೀಲ್‌ನಲ್ಲಿ ಏನೋ ನಡೆದಿದೆ ಎಂಬ ಸಂಶಯ ಕಾಡುತ್ತದೆ ಎಂದಿದ್ದಾರೆ ಸಿಂಗ್‌. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, “ನಿಮ್ಮ 10 ವರ್ಷಗಳ ಆಡಳಿತದಲ್ಲಿ ಸಿಬಿಐನಂಥ ಸಂಸ್ಥೆಗಳ ಮೇಲೆ ಒತ್ತಡ ಹಾಕುತ್ತಿದ್ದುದು ನಮಗೆ ಗೊತ್ತು. ಆದರೆ, ಮೋದಿ ಸರ್ಕಾರವು ಎಲ್ಲ ಸಂಸ್ಥೆಗಳನ್ನೂ ಗೌರವಿಸುತ್ತಿ¤ದೆೆ’ ಎಂದಿದೆ.

Advertisement

ಕಾಂಗ್ರೆಸ್‌ ತೆಕ್ಕೆಗೆ ಟಿಆರ್‌ಎಸ್‌ ಶ್ರೀಮಂತ ಸಂಸದ
ಟಿಆರ್‌ಎಸ್‌ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಅವರು ತಮ್ಮ ಪಕ್ಷಕ್ಕೆ ರಾಜೀ ನಾಮೆ ನೀಡಿದ ಮಾರನೇ ದಿನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ರೆಡ್ಡಿ ಅವರು ತೆಲಂಗಾಣದ ಅತಿ ಶ್ರೀಮಂತ ಸಂಸದರಾಗಿದ್ದು, 2014ರ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಒಟ್ಟು ಆಸ್ತಿ ಮೌಲ್ಯ 528 ಕೋಟಿ ರೂ. ಎಂದು ನಮೂದಿಸಿದ್ದರು. ಈ ನಡುವೆ, ನ.23ರ ತೆಲಂಗಾಣ ರ್ಯಾಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಜತೆ ಅಂದು ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು  ಪಾಲ್ಗೊಳ್ಳುವುದಿಲ್ಲ. ಆದರೆ, 28, 29, ಡಿ.3ರ ರ್ಯಾಲಿಯಲ್ಲಿ ಅವರು ರಾಹುಲ್‌  ಜತೆಗಿರಲಿದ್ದಾರೆ ಎಂದು ಹೇಳಲಾಗಿದೆ.

ಯಾವ ರಾಜಕೀಯ ಪಕ್ಷವೂ ಪರ್ಫೆಕ್ಟ್ ಆಗಿರುವುದಿಲ್ಲ. ಆದರೆ, ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ದೇಶವು ಪ್ರಸ್ತುತ ಒಳ್ಳೆಯ ದಿನಗಳನ್ನು ನೋಡುತ್ತಿದೆ.
ರಾಜನಾಥ್‌ ಸಿಂಗ್‌, ಗೃಹ ಸಚಿವ

ಬಿಜೆಪಿ ಮೈತ್ರಿಕೂಟದ ವಿರುದ್ಧ ಸಿಡಿದೆದ್ದಿರುವ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗುತ್ತಿದೆ. ಅಲ್ಲದೆ, ಪ್ರಧಾನಿ ಹುದ್ದೆಗೆ ರಾಹುಲ್‌ ಗಾಂಧಿ ಅವರೇ ಸೂಕ್ತ ವ್ಯಕ್ತಿಯೆಂದೆನಿಸಿದ್ದಾರೆ.
ವೀರಪ್ಪ ಮೊಯ್ಲಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next