Advertisement

ಬಿಜೆಪಿ ಅಭ್ಯರ್ಥಿ ಸಿದ್ದರಾಜು ಪಡೆವ ಸ್ಥಾನಮಾನ ಹೈಕೋರ್ಟ್‌ ವ್ಯಾಪ್ತಿಗೆ

07:20 AM Apr 26, 2018 | Team Udayavani |

ಬೆಂಗಳೂರು: ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಎಚ್‌.ಡಿ ಕೋಟೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಿದ್ದರಾಜು ಅವರು ಚುನಾವಣೆಯಲ್ಲಿ ಪಡೆಯುವ ಯಾವುದೇ ಸ್ಥಾನಮಾನಗಳು ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಹೈಕೋರ್ಟ್‌ ಹೇಳಿದೆ.

Advertisement

ಸಿದ್ದರಾಜು ಪಡೆದಿರುವ ಪರಿಶಿಷ್ಟ ಪಂಗಡ (ಎಸ್‌.ಟಿ)ದ ಜಾತಿ ಪ್ರಮಾಣ ಪತ್ರ ಆರೋಪ ಕುರಿತ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಬಗ್ಗೆ ತೀರ್ಪು ನೀಡಿದೆ. ಅರ್ಜಿದಾರರು ಹೊಸದಾಗಿ ಪಡೆದಿರುವ ಎಸ್‌ಟಿ ಜಾತಿ ಪ್ರಮಾಣಪತ್ರದಿಂದ ಪಡೆಯುವ ಯಾವುದೇ ಸ್ಥಾನಮಾನಗಳು ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು.

ಸಿದ್ದರಾಜು ಅವರು ಹಿಂದುಳಿದ ವರ್ಗದ ಪಟ್ಟಿಗೆ ಸೇರುವ ಬೆಸ್ತ ಜಾತಿಗೆ ಸೇರಿದವರಾಗಿದ್ದು, ಪರಿಶಿಷ್ಟ ಪಂಗಡದ ನಾಯಕ ಜಾತಿಯ ನಕಲಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಸುಭಾಷ್‌ ಎಂಬುವರು ಈ ಹಿಂದೆ ಮೈಸೂರು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. 

ಅದರಂತೆ ವಿಚಾರಣೆ ನಡೆಸಿದ್ದ ಮೈಸೂರು ತಹಶೀಲ್ದಾರ್‌, ಸಿದ್ದರಾಜು ಹೊಂದಿರುವ ನಾಯಕ ಜಾತಿ ಪ್ರಮಾಣಪತ್ರ ರದ್ದು ಪಡಿಸಿದ್ದರು. ಈ ಆದೇಶ ಪ್ರಶ್ನಿಸಿ ಸಿದ್ದರಾಜು ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತಹಶೀಲ್ದಾರ್‌ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತಲ್ಲದೆ, ನಾಯಕ ಜಾತಿಗೆ ಸೇರಿದ ಪ್ರಮಾಣಪತ್ರವನ್ನು ಹೊಸದಾಗಿ ನೀಡುವಂತೆ ಏ.5ರಂದು ಮಧ್ಯಂತರ ಆದೇಶ ನೀಡಿತ್ತು.

ಈ ಮಧ್ಯೆ, ಜಾತಿ ಪ್ರಮಾಣಪತ್ರ ರದ್ದುಪಡಿಸಿದ್ದ ತಹಶೀಲ್ದಾರ್‌ ಆದೇಶಕ್ಕೆ ನೀಡಿರುವ ತಡೆಯಾಜ್ಞೆ ತೆರವು ಕೋರಿ ಸುಭಾಷ್‌ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಸಿದ್ದರಾಜು ಸಲ್ಲಿಸಿದ್ದ ಮೂಲ ಅರ್ಜಿ ಮತ್ತು ಸುಭಾಷ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳು ವಿಚಾರಣೆಗೆ ಬಂದಾಗ ನ್ಯಾಯಪೀಠ,ಸಿದ್ದರಾಜು ಚುನಾವಣೆಯಲ್ಲಿ ಪಡೆಯುವ ಯಾವುದೇ
ಸ್ಥಾನಮಾನಗಳು ಹೈಕೋರ್ಟ್‌ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next