Advertisement

ಯುವಜನೋತ್ಸವಕ್ಕೆ ನೀರಸ ಪ್ರತಿಕ್ರಿಯೆ

12:04 PM Nov 30, 2018 | |

ಮೈಸೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಬೇಕಿದ್ದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಗಳ ಯುವಕ-ಯುವತಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 

Advertisement

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ವತಿಯಿಂದ ನಗರದ ಜೆ.ಕೆ.ಮೈದಾನದಲ್ಲಿ ಗುರುವಾರ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ವಿವಿಧ ವಿಭಾಗದಲ್ಲಿ ನಡೆದ ಯುವಜನೋತ್ಸವಕ್ಕೆ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು, ಯುವಜನತೆ ಭಾಗವಹಿಸಿರಲಿಲ್ಲ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಂಗಳುಗಳ ಹಿಂದೆಯೇ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳು, ಯುವಕರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಸಕ್ತಿ ತೋರಿಲ್ಲ. ಕಾರ್ಯಕ್ರಮದಲ್ಲಿ ಕೇವಲ 12 ಕಾಲೇಜುಗಳು ಹಾಗೂ 5 ಶಾಲೆಗಳ ವಿದ್ಯಾರ್ಥಿಗಳು ಮಾತ್ರವೇ ಭಾಗವಹಿಸಿದ್ದರು.

ಸ್ಪರ್ಧೆಗಳ ಆಕರ್ಷಣೆ: ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ 15-29 ವರ್ಷದೊಳಗಿನ ಯುವಕ-ಯುವತಿಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೋಂದಣಿಯಾದ ಯುವಕ ಸಂಘಗಳು, ಯುವತಿ ಮಂಡಳಿಗಳು ಹಾಗೂ ರಾಜೀವ್‌ ಗಾಂಧಿ ಯುವಶಕ್ತಿ ಸಂಘಗಳ ಪದಾಧಿಕಾರಿಗಳು ಭಾಗವಹಿಸಲು ಅವಕಾಶ ನೀಡಲಾಗುತ್ತು.

ಅದರಂತೆ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ವಿವಿಧ ಕಲಾ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು. ಜನಪದ ನೃತ್ಯ, ಜನಪದ ಗೀತೆ ಗಾಯನ, ಶಾಸ್ತ್ರೀಯ ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳು ನುಡಿಸುವ ಮೂಲಕ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 

Advertisement

ನೃತ್ಯ ಪ್ರದರ್ಶನ: ಜತೆಗೆ ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಒಡಿಶಾ, ಮಣಿಪುರಿ, ಕುಚುಪುಡಿ, ಕಥಕ್‌ ನೃತ್ಯದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಇನ್ನು ಶಾಸ್ತ್ರೀಯ ನುಡಿಸುವ ವಿಭಾಗದಲ್ಲಿ ಸೀತಾರ್‌, ಕೊಳಲು, ತಬಲ, ವೀಣೆ, ಮದಂಗ, ಹಾರೊ¾àನಿಯಂ, ಗಿಟಾರ್‌ ವಾದನ ಮನರಂಜನೆ ಉಣಬಡಿಸಿತು. 

ಕಾರ್ಯಕ್ರಮಕ್ಕೆ ಚಾಲನೆ: ಇದಕ್ಕೂ ಮುನ್ನ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಹೆಣ್ಣು ಗಂಡು ಎಂಬ ಬೇಧವಿಲ್ಲದೇ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಲಿದೆ ಎಂದರು.

ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್‌ ಮಾತನಾಡಿ, ಯುವಜನರಿಗೆ ಸ್ವಾಮಿ ವಿವೇಕಾನಂದರಿಂದಲೇ ವಿವೇಕ ತುಂಬ ಬೇಕಾಗಿದೆ. ವಿದ್ಯಾರ್ಥಿಗಳು, ಯುವಜನರು ಪದವಿ ಪಡೆದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ. ನೈತಿಕ ಮೌಲ್ಯಗಳೊಂದಿಗೆ, ತನ್ನ ಸುತ್ತಮುತ್ತಲಿನವರ ಬದುಕಿಗೆ ನೆರವಾದಾಗ ಮಾತ್ರ ವಿದ್ಯಾವಂತರಾಗುತ್ತಾರೆ.

ಸ್ವಾಮಿ ವಿವೇಕಾನಂದರು ದೇಶದ ಯುವಕರೇ ಭವಿಷ್ಯ ಎಂದಿದ್ದರು. ಆದರೆ, ಇಂದಿನ ಯುವಕರು ಅನುಕರಣೆ ಮಾಡುವ ಪ್ರವೃತ್ತಿಗೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ಚಂದ್ರಿಕಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next