Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಬೃಹತ್‌ ಅಕ್ರಮ

12:31 PM Dec 15, 2018 | |

ಬೆಂಗಳೂರು: ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸಲು ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್‌ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ಹಗಲು ದರೋಡೆ ಮಾಡಲಾಗುತ್ತಿದ್ದು, ಮುಖ್ಯಮಂತ್ರಿಗಳು ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಒತ್ತಾಯಿಸಿದರು. 

Advertisement

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಇಂದಿರಾ ಕ್ಯಾಂಟೀನ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿದ ಅವರು, ಇಂದಿರಾ ಕ್ಯಾಂಟೀನ್‌ಗಳಿಗೆ ಹೋಗುವ ಗ್ರಾಹಕರ ಸುಳ್ಳು ಸಂಖ್ಯೆ ನೀಡಿ ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಹೊಡೆಯುತ್ತಿದ್ದಾರೆ. ಜತೆಗೆ ಗ್ರಾಹಕರವನ್ನು ಹಣವನ್ನೂ ಗುತ್ತಿಗೆದಾರರೇ ಪಾವತಿಸಿ, ಸರ್ಕಾರದಿಂದ ಸಹಾಯ ಧನ ಪಡೆಯುತ್ತಿದ್ದು, ಅಕ್ರಮಕ್ಕೆ ಪಾಲಿಕೆಯ ಅಧಿಕಾರಿಗಳು ಹಾಗೂ ಪ್ರಭಾವಿ ನಾಯಕರು ಬೆಂಬಲವಾಗಿದ್ದಾರೆ ಎಂದು ಆರೋಪಿಸಿದರು. 

ಸರ್ಕಾರವು ಯೋಜನೆ ಜಾರಿಗೊಳಿಸಿದಾಗ 198 ವಾರ್ಡ್‌ಗಳಲ್ಲಿ ತಲಾ ಒಂದು ಕ್ಯಾಂಟೀನ್‌ ಹಾಗೂ 27 ಅಡುಗೆ ಮನೆಗಳನ್ನು ನಿರ್ಮಿಸಲು ಕೆಇಎಫ್ ಇನ್ಫಾಸ್ಟ್ರಕ್ಚರ್‌ ಸಂಸ್ಥೆಗೆ 72.90 ಕೋಟಿ ಬಿಡುಗಡೆ ಮಾಡಿದೆ. ಆದರೆ, ನಗರದ 174 ಕಡೆಗಳಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್‌ ಹಾಗೂ 19 ಕಡೆಗಳಲ್ಲಿ ಮಾತ್ರ ಅಡುಗೆ ಮನೆ ನಿರ್ಮಿಸಲಾಗಿದೆ. ಆದರೆ, ಸರ್ಕಾರ ಮಾತ್ರ ನಿರ್ಮಾಣವಾಗದ 24 ಕ್ಯಾಂಟೀನ್‌ ಹಾಗೂ 8 ಅಡುಗೆ ಮನೆಗಳಿಗೂ 11.72 ಕೋಟಿ ರೂ. ಬಿಡುಗಡೆ ಮಾಡಿರುವುದರ ಹಿಂದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್‌ ಕೈವಾಡವಿದೆ ಎಂದು ಆರೋಪಿಸಿದರು. 

ನಗರದ 189 ಇಂದಿರಾ ಕ್ಯಾಂಟೀನ್‌ಗಳ ಪೈಕಿ ಶೆಫ್ಟಾಕ್‌ ಸಂಸ್ಥೆ 105 ಮತ್ತು ರಿವಾರ್ಡ್‌ ಸಂಸ್ಥೆ 86 ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆ ಮಾಡುತ್ತಿವೆ. ಅದರಂತೆ ಎರಡೂ ಸಂಸ್ಥೆಗಳು ಬೆಳಗ್ಗೆ 90.107, ಮಧ್ಯಾಹ್ನ 80,394 ಹಾಗೂ ರಾತ್ರಿ ವೇಳೆ 38,517 ಜನರು ಕ್ಯಾಂಟೀನ್‌ಗಳಲ್ಲಿ ಆಹಾರ ಸೇವಿಸಿದ್ದಾರೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದಿಂದ ಪ್ರತಿ ತಿಂಗಳು ಆರು ಕೋಟಿಗೂ ಹೆಚ್ಚಿನ ಹಣವನ್ನು ಸಹಾಯಧನ ರೂಪದಲ್ಲಿ ಪಡೆಯುತ್ತಿದ್ದು, ಮಾಜಿ ವಿಶೇಷ ಆಯುಕ್ತ (ಹಣಕಾಸು) ಮನೋಜ್‌ ರಾಜ್‌ ಅವರು ದಾಖಲೆಗಳನ್ನು ಪರಿಶೀಲಿಸದೆ ಹಣ ಬಿಡುಗಡೆಗೊಳಿಸಿದ್ದಾರೆ ಎಂದು ದೂರಿದರು. 

ನಗರದ ಹಲವಾರು ಇಂದಿರಾ ಕ್ಯಾಂಟೀನ್‌ಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ವೇಳೆ 100 ಜನರೂ ಹೋಗುವುದಿಲ್ಲ. ಆದರೆ, ಗುತ್ತಿಗೆದಾರರು ಮಾತ್ರ ಸರಾಸರಿ 500-600 ಜನರು ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುತ್ತಿದ್ದಾರೆಂದು ಬಿಲ್‌ಗ‌ಳನ್ನು ಸಲ್ಲಿಸುತ್ತಿದ್ದು, ಅದನ್ನು ಪರಿಶೀಲನೆ ನಡೆಸದೆ ಅಧಿಕಾರಿಗಳು ಬಿಲ್‌ ಪಾವತಿಸಿರುವುದು ಕಂಡುಬಂದಿದೆ ಎಂದು ಹೇಳಿದರು. 

Advertisement

ಮಾಜಿ ಸಿಎಂ ಸಚಿವರ ವಿರುದ್ಧ ತನಿಖೆಯಾಗಲಿ: ಆ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿನ ಅಕ್ರಮಕ್ಕೆ ಕಾರಣವಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್‌, ವಿಶೇಷ ಆಯುಕ್ತರಾಗಿದ್ದ ಮನೋಜ್‌ ರಾಜನ್‌ ವಿರುದ್ಧ ಕೂಡಲೇ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅದೇಶಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ ಎನ್‌.ಆರ್‌.ರಮೇಶ್‌, ಇವರ ವಿರುದ್ಧ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next