Advertisement

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

05:33 PM Jan 27, 2022 | Team Udayavani |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಮೇಲ್ದರ್ಜೆಗೆ ಅನುಷ್ಠಾನಗೊಂಡಿದ್ದು, ಆಸ್ಪತ್ರೆಯನ್ನು 1,400 ಹಾಸಿಗೆಗಳಿಂದ 2,404 ಹಾಸಿಗೆಗೆ ಹೆಚ್ಚಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿಯೇ ಒಳ ರೋಗಿಗಳ ಅತಿ ಹೆಚ್ಚು ಹಾಸಿಗೆಯುಳ್ಳ ಪ್ರಥಮ ಆಸ್ಪತ್ರೆಯಾಗಿ ಹೊರ ಹೊಮ್ಮಿದೆ. ಜತೆಗೆ ರಾಜ್ಯದಲ್ಲೇ ಎಲ್ಲಾ ಸೌಲಭ್ಯ ಹೊಂದಿದ ದೊಡ್ಡ ಆಸ್ಪತ್ರೆಯಾಗಿದೆ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹೇಳಿದರು.

Advertisement

73ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಿಮ್ಸ್‌ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆ ಹಾಗೂ ವಿಆರ್‌ಡಿಎಲ್‌ ಲ್ಯಾಬ್‌ ಹಾಗೂ ಕಾರ್ಡಿಯಾಲೋಜಿ ಆಸ್ಪತ್ರೆ ಕಾರ್ಯರೂಪಗೊಂಡಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 200 ಹಾಸಿಗೆಗಳ ಹಾಸ್ಟೆಲ್‌ ಕಟ್ಟಡ ಪೂರ್ಣಗೊಂಡಿದೆ. ಅಂದಾಜು 28ಕೋಟಿ ರೂ. ವೆಚ್ಚದಲ್ಲಿ ನೂತನ ಶಸ್ತ್ರ ಚಿಕಿತ್ಸಾ (ಒಟಿ) ಕಾಂಪ್ಲೆಕ್ಸ್‌ ಕಟ್ಟಡ ಕಾಮಗಾರಿ ಹಾಗೂ 5ಕೋಟಿ ರೂ. ವೆಚ್ಚದಲ್ಲಿ ಕಿಮ್ಸ್‌ ಆಡಿಟೋರಿಯಂ ನವೀಕರಣ ಕಾರ್ಯ ಹಾಗೂ 450 ಹಾಸಿಗೆಯ ತಾಯಿ ಮತ್ತು ಮಕ್ಕಳ
ಆಸ್ಪತ್ರೆಯ ಕಟ್ಟಡ ಕೆಲಸವು ಅಂತಿಮ ಹಂತದಲ್ಲಿದೆ. ಪೂರ್ಣಗೊಂಡ ನಂತರ ಶೀಘ್ರವೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.

ಲಸಿಕೆ ನೀಡುವಲ್ಲಿ ಅಗ್ರಸ್ಥಾನ: ತಾಲೂಕಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಸ್ವಾಮಿತ್ವ ಯೋಜನೆ ಕಾರ್ಯ ರೂಪಕ್ಕೆ ತರಲಾಗಿದೆ. ತಾಲೂಕಿನ 35 ಗ್ರಾಮಗಳ ಪೈಕಿ 9 ಗ್ರಾಮಗಳ 5,212 ಆಸ್ತಿಗಳ ದ್ರೋಣ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ 3 ತಿಂಗಳಲ್ಲಿ ಉಳಿದ ಗ್ರಾಮಗಳ 15 ಸಾವಿರ ಆಸ್ತಿಗಳಸರ್ವೆ ಕಾರ್ಯ ಪೂರ್ಣಗೊಳಿಸಲಾಗುವುದು. ನಂತರ ಗ್ರಾಮ ಪಂಚಾಯಿತಿ ಮೂಲಕ ಆಸ್ತಿ ದಾಖಲೆಗಳ ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದರು.

ಸರಕಾರ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಲ್ಲಿ 6,17,078 ಜನರಿಗೆ ಕೋವಿಡ್‌ ಲಸಿಕೆ ನೀಡುವ ಗುರಿ ನಿಗದಿಪಡಿಸಿದೆ. ಇದರಲ್ಲಿ 6,25,881 ಜನರಿಗೆ ಮೊದಲ ಡೋಸ್‌ ಲಸಿಕೆ, 5,05,306 ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಕೋವಿಡ್‌ ಲಸಿಕೆ ನೀಡುವಲ್ಲಿ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕುಗಳು ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿವೆ.

Advertisement

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ವಾಜಪೇಯ ವಸತಿ ಯೋಜನೆಯಲ್ಲಿ 228 ಮನೆಗಳನ್ನು ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆಯಡಿ 12 ಮನೆಗಳನ್ನು ಸರಕಾರ ಮಂಜೂರು ಮಾಡಿದೆ. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 320 ಜಿ+3 ಮಹಡಿಗಳ ಪೌರಕಾರ್ಮಿಕ ಹೌಸಿಂಗ್‌ ಘಟಕವು ನಗರದ ಯಲ್ಲಾಪೂರ ಗ್ರಾಮದಲ್ಲಿ ಅಂದಾಜು 24.64 ಕೋಟಿ ರೂ. ಅನುದಾನದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹುಬ್ಬಳ್ಳಿ ತಾಲೂಕಿನಲ್ಲಿ 251 ಅಂಗವಿಕಲ ವೇತನ, 838 ನಿರ್ಗತಿಕ ವಿಧವಾ ವೇತನ, 2,968 ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ, 175 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ, 148 ಮನಸ್ವಿನಿ, 234 ರಾಷ್ಟ್ರೀಯ ಕೌಟುಂಬಿಕ ಯೋಜನೆ ಸೇರಿದಂತೆ ಒಟ್ಟು 4,614 ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಮಂಜೂರಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಡಾ|ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ ಹಾಗೂ ಸಹ ಶಿಕ್ಷಣ ವಸತಿ ಶಾಲೆಗಳಲ್ಲಿ ಎಸ್‌ಸಿ, ಎಸ್‌ಟಿ ವರ್ಗದ 100 ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಶಿಕ್ಷಣ ಒದಗಿಸಲಾಗಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಲ್ಲಿ 2020-21 ಹಾಗೂ 2021-22ನೇ ಸಾಲಿನ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಒಟ್ಟು 52,197 ರೈತರಿಗೆ 49.64ಕೋಟಿ ರೂ. ಬೆಳೆ ಪರಿಹಾರ ಧನ ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.

ಆರ್‌ಎಸ್‌ಐ ಭಾಗಣ್ಣ ವಾಲಿಕಾರ ನೇತೃತ್ವದಲ್ಲಿ ಪೊಲೀಸ್‌ ದಳ, ಜಿ.ಡಿ. ಮುದೂರ ನೇತೃತ್ವದಲ್ಲಿ ಪುರುಷ ಮತತು ಮಹಿಳಾ ಹೋಮ್‌ ಗಾರ್ಡ್‌ ದಳ ಹಾಗೂ ಪೊಲೀಸ್‌ ಬ್ಯಾಂಡ್‌ ಪಥಸಂಚಲನ ನಡೆಯಿತು. ಫಾತೀಮಾ ಪ್ರೌಢಶಾಲಾ ತಂಡದ ವಿದ್ಯಾರ್ಥಿಗಳು ನಾಡಗೀತೆ-ರೈತಗೀತೆ ಪ್ರಸ್ತುತ ಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಅಪರ ತಹಶೀಲ್ದಾರ್‌ ವಿಜಯಕುಮಾರ ಕಡಕೋಳ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ಎನ್‌ಸಿಸಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಸ್ಕೌಟ್ಸ್‌- ಗೈಡ್ಸ್‌ನವರು ಇದ್ದರು. ಬಿಇಒ ಶ್ರೀಶೈಲ ಕರೀಕಟ್ಟಿ ಸ್ವಾಗತಿಸಿದರು.

ಸಂವಿಧಾನ ಉತ್ಕೃಷ್ಟವಾದದ್ದು
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ದೇಶದ ಸಂವಿಧಾನ ಉತ್ಕೃಷ್ಟವಾಗಿದ್ದು, ಇದನ್ನು ರಚಿಸುವಲ್ಲಿ ಅಂಬೇಡ್ಕರ ಅವರ ಪಾತ್ರ ಪ್ರಮುಖವಾಗಿದೆ. ಗಣತಂತ್ರ ವ್ಯವಸ್ಥೆಗೆ ಸಂವಿಧಾನ ಕೈಗನ್ನಡಿಯಂತಿದೆ. ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸಲಾಗಿದೆ. ಆದರೂ ಕೂಡ ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ಶೋಷಣೆ, ವರ್ಗೀಕರಣ ಆಗುತ್ತಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next