Advertisement

ಸಂಪ್ರದಾಯಬದ್ಧವಾಗಿ ನಡೆದ ಭೀಷ್ಮ ವಿಜಯ

05:48 PM Dec 05, 2019 | mahesh |

ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ ಮತ್ತು ಸೊಂಟದ ಕೆಳಭಾಗಕ್ಕೆ ಕಟ್ಟುತ್ತಿದ್ದ ತ್ರಿಕೋನಾಕರದ ಬಟ್ಟೆ ಹಿಂಭಾಗವನ್ನು ಮುಚ್ಚುತ್ತಿತ್ತು.

Advertisement

ಇತ್ತೀಚಿಗೆ ಸೌಕೂರು ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಬಣ್ಣದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯಕ್ಷದೇಗುಲ ಕಲಾವಿದರು ಕೆ. ಮೋಹನ್‌ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ “ಭೀಷ್ಮವಿಜಯ’ ಪ್ರಸಂಗವು ಸಂಪ್ರದಾಯ ಶೈಲಿಯ ರಂಗ ನಡೆ, ಕುಣಿತ, ವೇಷಭೂಷಣಗಳ ಮೂಲಕ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಯವರು ರಚಿಸಿದ ಪ್ರಸಂಗ “ಭೀಷ್ಮವಿಜಯ’. ಕಾಶೀರಾಜ ಪ್ರತಾಪಸೇನ ಮೂವರು ಹೆಣ್ಣು ಮಕ್ಕಳಿಗೆ ಸ್ವಯಂವರವನ್ನು ಏರ್ಪಡಿಸುವುದು, ಸಾಲ್ವ ಶೃಂಗಾರ, ಭೀಷ್ಮ ಪಣವನ್ನು ಗೆದ್ದು ಮೂವರನ್ನು ಹಸ್ತಿನಾವತಿಗೆ ಕರೆತರುವುದು. ತಮ್ಮನಾಗಿರುವ ವಿಚಿತ್ರವೀರ್ಯನನ್ನು ವರಿಸುವಂತೆ ಹೇಳುವುದು. ಅಂಬಿಕೆ-ಅಂಬಾಲಿಕೆಯರು ಒಪ್ಪುವುದು. ಅಂಬೆ, ಸಾಲ್ವ ಪ್ರಣಯವನ್ನು ಭೀಷ್ಮನಲ್ಲಿ ತಿಳಿಸುವುದು, ಬ್ರಾಹ್ಮಣರ ಜೊತೆಯಲ್ಲಿ ಅಂಬೆಯನ್ನು ಕಳಿಸಿಕೊಡುವುದು, ಸಾಲ್ವ ಅಂಬೆಯನ್ನು ತಿರಸ್ಕರಿಸುವುದು, ವಿವಾಹವಾಗುವಂತೆ ಅಂಬೆ ಪುನಃ ಭೀಷ್ಮನನ್ನು ಕೇಳುವುದು. ಭೀಷ್ಮ ನಿರಾಕರಿಸುವುದು, ಆತನ ಮೇಲಿನ ಪ್ರತೀಕಾರಕ್ಕಾಗಿ ಅಂಬೆ ಕಿರಾತ ಏಕಲವ್ಯನನ್ನು ಕರೆತರುವುದು, ಕಿರಾತನಿಗೆ ಜೀವದಾನ, ಹೋತ್ರವಹನ- ಶೈಖಾವತ್ಸ್ಯ ಪ್ರಕರಣ. ಶೈಖಾವತ್ಸéನ ಮೂಲಕ ವಿಷಯ ತಿಳಿದ ಗುರು ಪರಶುರಾಮರು ಭೀಷ್ಮನಿಗೆ ತಿಳಿಹೇಳುವುದು ಗುರು-ಶಿಷ್ಯರ ಸಂಗ್ರಾಮ, ಪರಶುರಾಮರು ಶಿಷ್ಯನನ್ನು ಮೆಚ್ಚುವುದು, ಅಂಬೆಯ ಶಪಥ ಮತ್ತು ಅಗ್ನಿಪ್ರವೇಶ ಇದು ಪ್ರಸಂಗದ ಕಥಾ ಹಿನ್ನಲೆ.

ನಡುತಿಟ್ಟಿನ ಪ್ರಾತಿನಿಧಿಕ ಕೊಂಡಿಯಾಗಿ, ವೃತ್ತಿ ಮತ್ತು ಹವ್ಯಾಸಿ ಕಲಾವಿದರೊಂದಿಗೆ ಸಮರ್ಥವಾಗಿ ವೇಷ ನಿರ್ವಹಿಸುತ್ತಿರುವ ಸುಜಯೀಂದ್ರ ಹಂದೆಯವರು ಕುಣಿತ-ಶೈಲಿ, ಹದವರಿತ ಮಾತು, ವೇಷಭೂಷಣಗಳ ಮೂಲಕ ಪರಂಪರೆಯನ್ನು ನೆನಪಿಸಿ ಮೆಚ್ಚುಗೆಗಳಿಸಿದರು. ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ ಮತ್ತು ಸೊಂಟದ ಕೆಳಭಾಗಕ್ಕೆ ಕಟ್ಟುತ್ತಿದ್ದ ತ್ರಿಕೋನಾಕರದ ಬಟ್ಟೆ ಹಿಂಭಾಗವನ್ನು ಮುಚ್ಚುತ್ತಿತ್ತು. ಕೇದಗೆ ಮುಂದಲೆ ವೇಷಗಳಿಗೆ ನಾಟಕ ವೇಷಗಳಂತೆ ಪಾಕು ರೀತಿಯಲ್ಲಿ ಚೌಕಕಾರ ವಿನ್ಯಾಸ ಹೊಂದಿದ ಬಟ್ಟೆಯನ್ನು ಕಟ್ಟುತ್ತಿದ್ದು ಅದಕ್ಕೆ ಬೆನ್ನುವಸ್ತ್ರ ಎನ್ನುತ್ತಿದ್ದರು. ಮತ್ತು ಎದೆಕಟ್ಟಿನ ಮೇಲೆ ಅಡ್ಡಲಾಗಿ “ಡಾಲು’ ಎನ್ನುವ ಪರಿಕರವನ್ನು ಧರಿಸುತ್ತಿದ್ದರು ಎಂಬುದು ತಿಳಿದವರ ಅಭಿಪ್ರಾಯ. ವೇಷ ಸೌಂದರ್ಯಕ್ಕಾಗಿ ಹಲವಾರು ಮಾರ್ಪಾಡುಗಳನ್ನು ತಂದಿರುವ ಕೋಟ ಶಿವರಾಮ ಕಾರಂತರು ವೇಷಗಳ ಹಿಂದೆ ಪಾಕು ಸೀರೆಗಳನ್ನು ಬಳಸುತ್ತಿದ್ದು, ಮುಂದೆ ಈ ಸುಂದರ ಬದಲಾವಣೆ ಸಾರ್ವತ್ರಿಕವಾಯಿತು.

ಭೀಷ್ಮನ ವೇಷಗಾರಿಕೆಯಲ್ಲಿ ಹಿಂದಿನ ಕ್ರಮವನ್ನ ತೋರಿಸಿರುವುದು ಪ್ರಶಂಸೆಗೆ ಪಾತ್ರವಾಯಿತು. ಹಿತಮಿತವಾದ ಕುಣಿತ, ಮಾತುಗಾರಿಕೆ ಮತ್ತು ಮನೋಜ್ಞ ಅಭಿನಯದ ಮೂಲಕ ಅಂಬೆಯ ಪಾತ್ರ ನಿರ್ವಹಿಸಿದ ಮನೋಜ್‌ ಭಟ್‌ ಆಂಗಿಕ ಚರ್ಯೆಗಳ ಮೂಲಕ ನಗೆಯುಕ್ಕಿಸುವ ನರಸಿಂಹ ತುಂಗ ಬ್ರಾಹ್ಮಣನಾಗಿ ರಂಜಿಸಿದರು. ಅಂತೆಯೇ ಸಾಲ್ವನ ಪಾತ್ರವನ್ನು ಬಣ್ಣದ ವೇಷದಲ್ಲಿ ನಿರ್ವಹಿಸುತ್ತಿದ್ದುದು ಕ್ರಮ. ಕೆರೆಮನೆ ಶಂಭು ಹೆಗಡೆಯವರು ಆ ಪಾತ್ರವನ್ನು ಕೆಂಪು ಮುಂಡಾಸಿನ ವೇಷವನ್ನಾಗಿಸಿ ಶೃಂಗಾರ ರಸಕ್ಕೆ ಪ್ರಾಧಾನ್ಯತೆಯನ್ನು ನೀಡಿ ಪರಿಷ್ಕರಿಸುವುದರಿಂದ ಹಾಗೆಯೇ ಆ ಪಾತ್ರವನ್ನು ನಿರ್ವಹಿಸುವುದು ರೂಢಿಯಾಗಿರಬೇಕು. ಉಳಿದ ವೇಷಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ಹಿಡಿಯುವ ಬಣ್ಣದ ವೇಷವನ್ನು ಕೃಷ್ಣಮೂರ್ತಿ ಉರಾಳರು ನಿರ್ವಹಿಸಿ ಸಾಲ್ವನ ಪಾತ್ರಕ್ಕೆ ಮುಂಡಾಸು ವೇಷದ ಕೊರತೆ ಕಂಡುಬಾರದಂತೆ ನ್ಯಾಯ ಒದಗಿಸಿಕೊಟ್ಟರು.

Advertisement

ಅಕ್ಕಿಹಿಟ್ಟಿನಿಂದ ಚುಟ್ಟಿಯಿಟ್ಟು ಆಕರ್ಷಕವಾದ ಮುಖವರ್ಣಿಕೆಯ ಮೂಲಕ ತಮ್ಮ ಪ್ರಸಾದನ ಕಲೆಗಾರಿಕೆಯನ್ನು ತೋರಿಸಿಕೊಟ್ಟರು. ವೈವಿಧ್ಯಕ್ಕಾಗಿ ಕಿರಾತ ವೇಷಕ್ಕೆ ಕೋರೆ ಮುಂಡಾಸು ಹಾಗೂ ಜೋಡಿ ಮುಂಡಾಸು ಕಟ್ಟುವ ಕ್ರಮವೂ ಇದೆ. ಸುದರ್ಶನ ಉರಾಳರು ಕಿರಾತ ವೇಷದ ಕೋರೆ ಮುಂಡಾಸನ್ನು ಅಟ್ಟೆಕಟ್ಟಿ ಸುಂದರವಾಗಿ ವಿನ್ಯಾಸಗೊಳಿಸಿರುವುದು ವಿಶೇಷ. ಏಕಲವ್ಯನ ಪಾತ್ರ ನಿರ್ವಹಿಸಿದ ಪ್ರಣವ್‌ ಭಟ್‌ ಕುಣಿತ ಮತ್ತು ಮಾತುಗಳಲ್ಲಿ ವಿಭಿನ್ನತೆಯನ್ನು ಮೆರೆದರು. ಕಿರಾತನ ಸಹಚರರಾಗಿ ನರಸಿಂಹ ತುಂಗ, ಶಿವಾನಂದ ಕೋಟ, ನವೀನ್‌ ಮಣೂರು ಅವರು ಪಡೆವೇಷಗಳ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಕುಣಿತ ಮತ್ತು ಹಾಸ್ಯಭರಿತ ಮಾತುಗಳಿಂದ ರಂಜಿಸಿದರು. ಪರಶುರಾಮನ ವೇಷದಲ್ಲಿ ಕಾಣಿಸಿಕೊಂಡ ತಮ್ಮಣ್ಣ ಗಾಂವ್ಕರ್‌ ಪಾತ್ರೋಚಿತ ನಿರ್ವಹಣೆಯಿಂದ ಗಮನಸೆಳೆದರು. ಭೀಷ್ಮ ಮತ್ತು ಪರಶುರಾಮನ ಸಂಭಾಷಣೆಯ ಸನ್ನಿವೇಷ ಉತ್ತಮವಾಗಿ ಮೂಡಿಬಂತು. ದೇವರಾಜದಾಸ್‌, ಲಂಬೋದರ ಹೆಗಡೆ ಭಾಗವತಿಕೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿದರು. ಯಲ್ಲಾಪುರ ರಾಘವೇಂದ್ರ ಹೆಗಡೆ, ಮದ್ದಲೆ ವಾದನದಲ್ಲಿ ಹಾಗೂ ಕಟೆRàರಿ ಮಂಜುನಾಥ ನಾವಡ ಹಾಗೂ ಸುದೀಪ ಉರಾಳ ಅವರು ಸ್ಪರ್ಧಾತ್ಮಕ ಹಿಮ್ಮೇಳ ಸಾಂಗತ್ಯವನ್ನು ಒದಗಿಸಿದರು.

ರಾಘವೇಂದ್ರ ತುಂಗ ಕೋಟ

Advertisement

Udayavani is now on Telegram. Click here to join our channel and stay updated with the latest news.

Next