ನರಗುಂದ: ಮಳೆಯಾದರೆ ಸಾಕು ಸೋರುವ ಕಟ್ಟಡ.. ಶಿಥಿಲಾವಸ್ಥೆ ಕಟ್ಟಡದಲ್ಲಿ ಪುಸ್ತಕಗಳಿಗಿಲ್ಲ ರಕ್ಷಣೆ.. ಓದುಗರಿಗೆ ಕೂಡ್ರಲು ಒಳ್ಳೆಯ ಖುರ್ಚಿಗಳು ಲಭ್ಯವಿಲ್ಲ..
ತಾಲೂಕಿನ ಭೆ„ರನಹಟ್ಟಿಯ ಗ್ರಾಮ ಪಂಚಾಯತ್ ಗ್ರಂಥಾಲಯ ಕಳೆದ 16 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೇ ಸೌಲಭ್ಯಗಳಿಂದ ಬಳಲುತ್ತಿದೆ. ಓದುಗರಿಗೆ ಸೂಕ್ತ ಟೇಬಲ್, ಖುರ್ಚಿಗಳ ವ್ಯವಸ್ಥೆಯಿಲ್ಲದ ಈ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವೇ ಪ್ರಮುಖ ಬೇಡಿಕೆಯಾಗಿದೆ.
2 ಸಾವಿರ ಪುಸ್ತಕ: 2003ರಲ್ಲಿ 400 ಪುಸ್ತಕಗಳಿಂದ ಆರಂಭಗೊಂಡ ಗ್ರಂಥಾಲಯ ಕ್ರಮೇಣ ಕನ್ನಡ, ಆಂಗ್ಲ, ಹಿಂದಿ ಸೇರಿ 2 ಸಾವಿರ ಪುಸ್ತಕಗಳ ದಾಸ್ತಾನು ಹೊಂದಿದೆ. ನಿತ್ಯ ಗ್ರಂಥಾಲಯಕ್ಕೆ 3 ದಿನಪತ್ರಿಕೆ ಬರುತ್ತಿವೆ. 1800ಕ್ಕೂ ಹೆಚ್ಚು ಕನ್ನಡ ಪುಸ್ತಕಗಳಿದ್ದು, ಕನ್ನಡ ಸಾಹಿತ್ಯ ಪಸರಿಸುವಲ್ಲಿ ಗ್ರಂಥಾಲಯ ಗಮನಾರ್ಹವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾಸಿಕ 400 ರೂ.ಮಾತ್ರ ಅನುದಾನ ಬರುತ್ತಿದ್ದರಿಂದ 3 ದಿನಪತ್ರಿಕೆಗಳಿಗೆ ಭರಿಸಲಾಗುತ್ತಿದೆ. ಹೀಗಾಗಿ ಈ ಗ್ರಂಥಾಲಯಕ್ಕೆ ಯಾವುದೇ ಮ್ಯಾಗಜಿನ್ ಪೂರೈಕೆಯಿಲ್ಲ. ಪುಸ್ತಕ ದಾಸ್ತಾನಿಗೆ ತಲಾ ಎರಡು ರ್ಯಾಕ್ ಮತ್ತು ಟ್ರೆಜರಿ ಲಭ್ಯವಿದೆ.
ಸೋರುತ್ತಿದೆ ಕಟ್ಟಡ: ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿದ್ದರಿಂದ 500ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಹಾಳಾಗಿವೆ. ಮೇಲ್ಛಾವಣಿ ಕಟ್ಟಿಗೆಯ ಮಡಿಗೆ ಹೊಂದಿದೆ. ಕಟ್ಟಡದ ಕಿಟಕಿ ಬಾಗಿಲು ಪಡಕುಗಳು ಮುರಿದಿದ್ದು, ಗ್ರಂಥಾಲಯಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಮೇಲ್ಛಾವಣಿ ಕಟ್ಟಿಗೆ ತೊಲೆಗಳು ಮುರಿದು ಬೀಳುವ ಹಂತದಲ್ಲಿರುವುದರಿಂದ ಒಳಗೆ ಒಂದು ಕಟ್ಟಿಗೆಯನ್ನು ತೊಲೆಗೆ ಆಸರೆಯಾಗಿ ನಿಲ್ಲಿಸಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.
2003ರಲ್ಲಿ ಗ್ರಂಥಾಲಯ ಪ್ರಾರಂಭಗೊಂಡಿದ್ದು, ಸಾಕಷ್ಟು ಓದುಗರನ್ನು ಹೊಂದಿದೆ. ಕಟ್ಟಡ ಸೋರುತ್ತಿದ್ದುದರಿಂದ ಸುಸಜ್ಜಿತ ಕಟ್ಟಡ ಅಗತ್ಯವಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಮಳೆಗಾಲದಲ್ಲಿ ಪುಸ್ತಕಗಳ ರಕ್ಷಣೆಗೆ ತೊಡಕಾಗುತ್ತಿದೆ.
–ಹನಮಂತ ಬೆನ್ನೂರ, ಗ್ರಂಥಾಲಯ ಮೇಲ್ವಿಚಾರಕ.
-ಸಿದ್ಧಲಿಂಗಯ್ಯ ಮಣ್ಣೂರಮಠ