ಒಂದೆಡೆ ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಮತ್ತೂಂದೆಡೆ ಸರ್ಕಾರ ನಿಧಾನವಾಗಿ ಲಾಕ್ ಡೌನ್ ಸಡಿಲಗೊಳಿಸಲು ಮುಂದಾಗುತ್ತಿದೆ. ಇನ್ನು ಎಲ್ಲ ಲಾಕ್ ಡೌನ್‌ಗಳೂ ತೆರೆಯುತ್ತಿದ್ದಂತೆ, ಚಿತ್ರರಂಗದ ಚಟುವಟಿಕೆಗಳಿಗೆ ಬಿದ್ದಿದ್ದ ಬ್ರೇಕ್ ಕೂಡ ತೆರವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಕಿರುತೆರೆಯ ಚಟುವಟಿಕೆಗಳು ಶುರುವಾಗಿರುವು ದರಿಂದ, ಚಿತ್ರರಂಗದ ಚಟುವಟಿಕೆಗಳೂ ಶೀಘ್ರ ದಲ್ಲಿಯೇ ಶುರುವಾಗಬಹುದು ಎಂಬ ನಿರೀಕ್ಷೆ ಚಿತ್ರರಂಗದ ಮಂದಿಯಲ್ಲಿದೆ.
ಅಲ್ಲದೆ ಜುಲೈ ತಿಂಗಳ ಮೊದಲ ವಾರದಲ್ಲಿಚಿತ್ರಮಂದಿರಗಳ ಓಪನ್ಗೆ ಮತ್ತು ಚಿತ್ರೀಕರಣಕ್ಕೆ ಅನುಮತಿ ನೀಡಬಹುದು ಎಂಬ ಮಾತೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ಸದ್ಯ ಕನ್ನಡದಲ್ಲಿ ಈಗಾಗಲೇ ರೆಡಿಯಾಗಿ ರುವ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳ ಪೈಕಿ ಯಾವುದು ಮೊದಲು ಬಿಡು ಗಡೆಯಾಗುತ್ತದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ, ಚಿತ್ರ ರಂಗದಲ್ಲಿ ಹೆಚ್ಚಾಗಿಯೇ ಇದೆ. ಸದ್ಯ “ಸಲಗ’, ರಾಬರ್ಟ್’, “ಪೊಗರು’, “ಕೋಟಿಗೊಬ್ಬ 3′ ರಿಲೀಸ್‌ಗೆ ರೆಡಿ ಇದ್ದು, “ಯುವರತ್ನ’, “ಕೆಜಿಎಫ್ ಚಾಪ್ಟರ್ 2′ ಚಿತ್ರಗಳ ಕೊನೆ ಹಂತದ ಕೆಲಸಗಳು ಬಾಕಿ ಇವೆ.
ಇದೇ ವೇಳೆ ಈ ಸ್ಟಾರ್ ನಟರ ಚಿತ್ರಗಳ ನಿರ್ಮಾಪಕರು ಇತ್ತೀಚೆಗೆ ಸಭೆ ನಡೆಸಿ ಬಿಡುಗಡೆಯ ಬಗ್ಗೆ ಒಂದಷ್ಟು ಚರ್ಚಿಸಿದ್ದಾರೆ ಎನ್ನಲಾಗಿದೆ. ಕೋವಿಡ್ 19 ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದಾಗ ಸಿನಿಮಾ ರಿಲೀಸ್ ಮಾಡುವ ರೀತಿ, ಪ್ರಚಾರ, ಪ್ರೇಕ್ಷಕರನ್ನು ಥಿಯೇಟರ್ ಕಡೆಗೆ ಸೆಳೆಯುವ ಬಗೆ ಮೊದಲಾದ ವಿಷಯಗಳ ಬಗ್ಗೆ ನಿರ್ಮಾಪಕರು ಚರ್ಚಿಸಿ ದ್ದಾರೆ ಎನ್ನಲಾಗಿದೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ, ಸದ್ಯ ಕನ್ನಡದ ಆರು ಸ್ಟಾರ್ಸ್‌ಗಳ ಚಿತ್ರಗಳು ಬಿಡು ಗಡೆಗೆ ರೆಡಿ ಇದ್ದು ಇವನ್ನು ಒಂದರ ಹಿಂದೊಂದರಂತೆ, ಸರದಿ ಯಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದೆ.
ನಿರ್ಮಾಪಕರಾದ ಗಂಗಾಧರ್, ಕೆ. ಪಿ ಶ್ರೀಕಾಂತ್, ಜಾಕ್ ಮಂಜು, ಉಮಾಪತಿ ಶ್ರೀನಿವಾಸಗೌಡ, ಕಾರ್ತಿಕ್ ಗೌಡ, ಯೋಗಿ ಜಿ ರಾಜ, ಜಯಣ್ಣ, ಸೂರಪ್ಪ ಬಾಬು ಮೊದಲಾದವರು ಈಗಾಗಲೇ 2 ಬಾರಿ ಸಭೆ ನಡೆಸಿ, ಸದ್ಯ ಚಿತ್ರರಂಗದ ಆಗುಹೋಗು ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ ಚಿತ್ರಮಂದಿರಗಳು ತೆರೆದ ಮೇಲೆ ಮೊದಲು ಚಿತ್ರ ಬಿಡುಗಡೆ ಮಾಡುವವರಾರು, ಒಂದು ಚಿತ್ರಕ್ಕೂ ಮತ್ತೂಂದು ಚಿತ್ರದ ರಿಲೀಸ್‌ಗೂ ಮಧ್ಯೆ ಗ್ಯಾಪ್ ಕೊಡುವ ಮತ್ತು ಈ ನಡುವೆ ಬೇರೆ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡು ವವರಿಗೂ ಅನುಕೂಲ ಮಾಡಿಕೊಡುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಒಟ್ಟೊಟ್ಟಿಗೆ ಸ್ಟಾರ್‌ಗಳ ಚಿತ್ರಗಳನ್ನು ಬಿಡುಗಡೆ ಮಾಡುವ ಬದಲಿಗೆ ಸಮಯ ನೊಡಿಕೊಂಡು ಮಾಡಬೇಕು. ಎಷ್ಟು ದಿನಗಳ ಗ್ಯಾಪ್ ಕೊಡಬೇಕು ಎಂಬೆಲ್ಲ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಿವೆ. ಇನ್ನು, ಸೆನ್ಸಾರ್ ಆಗಿರುವ ರಿಲೀಸ್‌ಗೆ ರೆಡಿ ಇರುವ ಸುಮಾರು 60ಕ್ಕೂ ಹೆಚ್ಚಿನ ಚಿತ್ರಗಳಿದ್ದು, ಅವರೇನಾದರೂ ಚಿತ್ರಮಂದಿರಗಳು ಓಪನ್ ಆದ ತಕ್ಷಣ ರಿಲೀಸ್ ಮಾಡುತ್ತೇವೆ ಅಂದರೆ ಅವರಿಗೂ ಚಿತ್ರಮಂದಿರಗಳಲ್ಲಿ ಅನುವು ಮಾಡಿಕೊಡಲಾಗವುದು ಎಂದು ಹಿರಿಯ ನಿರ್ಮಾಪಕರೊಬ್ಬರು ಹೇಳುತ್ತಾರೆ.