Advertisement

ದೀಪಾವಳಿ ಸಂಭ್ರಮ ಆರಂಭ; ಬೆಳಕಿನ ಹಬ್ಬದ ಸಡಗರ

01:29 AM Nov 04, 2021 | Team Udayavani |

ಮಂಗಳೂರು/ಉಡುಪಿ: ಮನೆ, ಮನದ ಅಂಧಕಾರವನ್ನು ಹೊಡೆದೋಡಿಸುವ ಬೆಳಕಿನ ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸಲು ಕರಾವಳಿಯಾದ್ಯಂತ ಜನತೆ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಬುಧವಾರ ಹಬ್ಬದ ಖರೀದಿ ಜೋರಾಗಿ ನಡೆದಿದೆ.

Advertisement

ದೀಪಾವಳಿಯ ಮೊದಲ ದಿನವಾದ ಬುಧವಾರ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಆಲಯಗಳಲ್ಲಿ ಭಕ್ತರ ಸಂಖ್ಯೆಯೂ ಅಧಿಕವಿತ್ತು. ಬಹುತೇಕ ದೇವಾಲಯದಲ್ಲಿ ಹಣತೆ ಹಚ್ಚಿ ದೀಪಾವಳಿ ಸಂಭ್ರಮವೂ ನಡೆಯಿತು.

ಖರೀದಿ ಜೋರು
ಲಕ್ಷ್ಮೀಪೂಜೆ ಹಿನ್ನೆಲೆಯಲ್ಲಿ ಜನ ಹೂ, ಹಣ್ಣು ಖರೀದಿಯಲ್ಲಿ ತೊಡಗಿದ್ದರು. ನಾಡಿನ ವಿವಿಧ ಭಾಗಗಳಿಂದ ತರಕಾರಿ/ಹೂವು ಮಾರುಕಟ್ಟೆಗೆ ಬಂದಿದ್ದು ವ್ಯಾಪಾರ ಜೋರಾಗಿತ್ತು. ಲಕ್ಷ್ಮೀಪೂಜೆ ಹಿನ್ನೆಲೆಯಲ್ಲಿ ಹೂ, ಹಣ್ಣು ಖರೀದಿಯೂ ಜೋರಾಗಿತ್ತು. ಉಡುಗೊರೆ ನೀಡಲು ಸಿಹಿತಿಂಡಿ / ಒಣಹಣ್ಣುಗಳ ಖರೀದಿಯೂ ಕಂಡುಬಂತು.

ಬೆಳಕಿನ ಸಾಲು
ವಿವಿಧ ದೇಗುಲಗಳಲ್ಲಿ ಗುರುವಾರ ಲಕ್ಷ್ಮೀ ಪೂಜೆ, ವಾಹನ ಪೂಜೆ ಸಹಿತ ವಿವಿಧ ಪೂಜೆಗಳು ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. ನಗರದ ಮನೆ, ವಾಣಿಜ್ಯ ಮಳಿಗೆಗಳಿಗೆ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹೂವಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಹಸುರು ಪಟಾಕಿ ಸದ್ದು
ಸರಕಾರವು ಹಸುರು ಪಟಾಕಿಯನ್ನೇ ಉಪಯೋಗಿಸಬೇಕು ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಹಸುರು ಪಟಾಕಿಗಳ ಮಾರಾಟ ಬಿರುಸಾಗಿತ್ತು. ಗೋಮಯ ಹಣತೆಗಳು, ಸಾದಾ ಮಣ್ಣಿನ ಹಣತೆಗಳಿಗಾಗಿ ಜನರು ಹೆಚ್ಚು ಬೇಡಿಕೆ ಮಂಡಿಸುತ್ತಿರುವುದು ಕಂಡುಬಂತು. ಸಾಂಪ್ರದಾಯಿಕ ಗೂಡುದೀಪಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದುದು ಕಂಡುಬಂತು.

Advertisement

ಇದನ್ನೂ ಓದಿ:ರಾಜ್ಯ ಸರ್ಕಾರದಿಂದ 7 ರೂ. ಗಳಷ್ಟು ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ

ಹಸುರು ಪಟಾಕಿ: ಸಮಿತಿ ರಚನೆ
ಉಡುಪಿ ಜಿಲ್ಲೆಯಲ್ಲಿ ಹಸುರು ಪಟಾಕಿ ಬಿಟ್ಟು ಇತರ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿಲ್ಲ. ಜಿಲ್ಲಾದ್ಯಂತ ಒಟ್ಟು 100 ಕಡೆಯಲ್ಲಿ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಂದಾಯ ಇಲಾಖೆ ತಹಶೀಲ್ದಾರ್‌/ ಕಂದಾಯ ನಿರೀಕ್ಷಕರು, ಪೊಲೀಸ್‌ ಇಲಾಖೆ, ನಗರಾಡಳಿತ ಹಾಗೂ ಪರಿಸರ ಎಂಜಿನಿಯರ್‌, ಪಿಡಿಒ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಹಸುರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಟ್ರಾಫಿಕ್‌ ಜಾಮ್‌
ಉಡುಪಿ ನಗರದ ಸಿಟಿ ಬಸ್‌ ನಿಲ್ದಾಣ ರಸ್ತೆ, ಆಭರಣ ಮಳಿಗೆ ಸಮೀಪ, ಚಿತ್ತರಂಜನ್‌ ಸರ್ಕಲ್‌, ಕೋರ್ಟ್‌ ರೋಡ್‌, ಕಲ್ಸಂಕ್‌ ಮಾರ್ಗ, ಶಿರಿಬೀಡು ಜಂಕ್ಷನ್‌, ಮಸೀದಿ ರೋಡ್‌ನ‌ಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾಗಿತ್ತು. ನಗರದ ಕೆಲವು ಭಾಗದಲ್ಲಿ ಪೊಲೀಸ್‌ ಸಿಬಂದಿಯನ್ನು ನೇಮಕ ಮಾಡಿದ್ದು, ಮಳೆಯಿಂದಾಗಿ ವಾಹನ ದಟ್ಟಣೆ ನಿಯಂತ್ರಿಸಲಾಗದೆ ರಸ್ತೆ ಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ನಿಂತು ಕೊಂಡಿರುವ ದೃಶ್ಯಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next