Advertisement
ಕೋಳಿ ಕೂಗು ಕೇಳುವ ಜಾಗಗಳಲ್ಲೆಲ್ಲ ಇಲ್ಲಿ ಕೋಟೆಗಳಿವೆ. ಕೆನರಾ ಜಿಲ್ಲೆಯ ಭೂಗೋಳ ಎಂಬ ಕ್ರಿ.ಶ. 1905ರ ಪುಸ್ತಕದಲ್ಲಿ ಒಂದು ಪಾಠದ ಸಾಲು ಇದು. ಕರಾವಳಿ, ಘಟ್ಟ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಗಳ ಕೆನರಾ ಜಿಲ್ಲೆ (ಇಂದಿನ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ) 2- 3ನೇ ಶತಮಾನಗಳಿಂದಲೂ ರಾಜ ಆಳ್ವಿಕೆಯ ನೆಲ. ಅರಬ್ಬಿ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳು ರಕ್ಷಣೆಯ ಪ್ರಾಕೃತಿಕ ಸಹಜ ವಿನ್ಯಾಸಗಳು.
Related Articles
Advertisement
ಶತಮಾನಗಳ ಹಿಂದೆಯೇ ಜಲಸಂರಕ್ಷಣೆ: ಕೋಟೆ ಬಾವಿ, ಕೋಟೆ ಕೆರೆ, ಆನೆ ಹೊಂಡ, ಕುದುರೆ ಹಳ್ಳ ಮುಂತಾದ ಹೆಸರುಗಳಿಂದ ಕೋಟೆ ಸನಿಹದ ಜಲ ತಾಣಗಳನ್ನು ನೋಡಬಹುದು. ಎತ್ತರದಲ್ಲಿ ನಿಂತು ಶತ್ರು ಆಗಮನ ವೀಕ್ಷಿಸುವ ಅನುಕೂಲ ಕೋಟೆಯ ಕೊತ್ತಲದಲ್ಲಿದೆ. ರಾಜರು, ರಾಜ ಪರಿವಾರ, ಕುದುರೆ, ಆನೆ, ಒಂಟೆ, ಹೇರೆತ್ತು, ಕಾಲಾಳುಗಳೆಲ್ಲರ ಅನುಕೂಲಕ್ಕೆ ನೀರು ಮುಖ್ಯ. ಬನವಾಸಿಯ ಕದಂಬರ ಕೋಟೆ, ವರದಾ ನದಿಯನ್ನು ಬಳಸಿದೆ, ಹಾನಗಲ್‌ದಲ್ಲಿಯೂ ಇದೇ ನದಿಯ ನೆರವಿದೆ.
ಬಳ್ಳಾರಿಯ ಉಚ್ಚಂಗಿ ದುರ್ಗ, ಗಡೇಕೋಟೆ, ಜರಿಮಲೆ, ವೀರನದುರ್ಗ, ಕರಡಿದುರ್ಗ ಅಲ್ಲಿನ ಗಿರಿದುರ್ಗಗಳು. ಕಮಲಾಪುರ ಕೆರೆ, ಕೃಷ್ಣರಾಯ ಸಮುದ್ರ ಕೆರೆಗಳು ವಿಜಯನಗರ ಸಾಮ್ರಾಜ್ಯದ ಪ್ರಮುಖ ಕೋಟೆ ಕೆರೆಗಳು. ಮಳೆ ನೀರನ್ನು ಕೆರೆ, ಬಾವಿಗಳಲ್ಲಿ ಹಿಡಿದು ಗೆಲ್ಲುವ ತಂತ್ರವಿದೆ. ಕೋಟೆ ರಚನೆಯ ಆರಂಭದಲ್ಲಿ ನೆಲದಲ್ಲಿ ದೊಡ್ಡ ಕಂದಕ ತೆಗೆದು, ಪಕ್ಕದಲ್ಲಿ ಏರಿಸುತ್ತ ಕೋಟೆ ಕಟ್ಟಲಾಗುತ್ತಿತ್ತು.
40- 50 ಮೀಟರ್ ಅಗಲದಲ್ಲಿ ಮಣ್ಣಿನ ಏರಿಯನ್ನು ನೂರಾರು ಮೀಟರ್ ಎತ್ತರಕ್ಕೆ ಹಾಕಿ, ಅಲ್ಲಿ ಮರ ಗಿಡ ಬೆಳೆಸುವ ಮಾದರಿಗಳಿದ್ದವು. ಹತ್ತಾರು ಕಿಲೋಮೀಟರ್ ಉದ್ದದಲ್ಲಿ ಮಣ್ಣು ತೆಗೆದ ಕಂದಕಗಳು ಮಳೆ ನೀರನ್ನು ಕೋಟೆಯ ಸುತ್ತ ಹಿಡಿದಿಟ್ಟು ಜಲದುರ್ಗವಾಗಿಸಿ ಇಂಗಿಸಿದ ಪರಿಣಾಮ, ಕೋಟೆ ಕೆರೆ, ಬಾವಿಗಳಿಗೆ ಜೀವ ಬಂದು ಅಂತರ್ಜಲ ಉಳಿದಿದೆ. ಇಂಗುಗುಂಡಿ, ಜಲಕೊಯ್ಲು, ಮಳೆ ನೀರು ಸಂರಕ್ಷಣೆಯ ಕೆಲಸವನ್ನು ಕಲ್ಲುಗುಡ್ಡದ ಕೋಟೆಗಳಲ್ಲಿ ಶತಮಾನಗಳ ಹಿಂದೆಯೇ ಅಳವಡಿಸಲಾಗಿದೆ.
ಕೋಟೆಗಳನ್ನು ಹೊರಕೋಟೆ, ಒಳಕೋಟೆಗಳೆಂದು ಗೋಡೆ ಗಡಿಯಿಂದ ಗುರುತಿಸಲಾಗುತ್ತದೆ. ಕೋಟೆಯ ಒಳಗಡೆ ಅಥವಾ ಹೊರಗಡೆ ಕೆರೆಗಳಿರುವುದು ಸಾಮಾನ್ಯ. ಒಂದು ಆವರಣಕ್ಕೆ ಸುತ್ತ ಭದ್ರತೆ ದೊರಕಿದಾಗ ಒಳಗಡೆ ಸುರಿಯುವ ಮಳೆ ನೀರು, ನಿಶ್ಚಿತ ದಾರಿಗಳಲ್ಲಿ ಹರಿದರಷ್ಟೇ ನಿರ್ಮಿಸಿದ ರಚನೆ ಉಳಿಯುತ್ತದೆ. ಆದರೆ, ಇಲ್ಲಿ ಹರಿಯುವ ನೀರನ್ನು ಸರಾಗ ಹೊರಗಡೆ ಕಳಿಸಿದರೆ ದೈನಂದಿನ ಬಳಕೆಗೆ ಸಮಸ್ಯೆಯಾಗುತ್ತದೆ.
ಕೋಟೆಗೆ ನೀರು ಪೂರೈಸಲು ನದಿಗಳಿಂದ ಕಾಲುವೆ ನಿರ್ಮಾಣ ಕೌಶಲ ಇದೆಯಾದರೂ, ಅದು ನೆಲ ದುರ್ಗಕ್ಕೆ ಸೀಮಿತ. ಎತ್ತರದ ಬೆಟ್ಟಕ್ಕೆ ನೀರು ಏರಿಸುವುದಕ್ಕಿಂತ, ಅಲ್ಲಿರುವ ನೀರನ್ನು ಸಮರ್ಥವಾಗಿ ಉಳಿಸುವ ಪ್ರಜ್ಞೆ ರಚನಾ ವಿನ್ಯಾಸದಲ್ಲಿ ವನದುರ್ಗ, ಗಿರಿದುರ್ಗಗಳಲ್ಲಿ ಮೂಡಿದೆ. ಬೀದರ, ರಾಯಚೂರು, ಬಳ್ಳಾರಿ, ವಿಜಯಪುರ, ಕೋಲಾರದ ಇಂದಿನ ಬರದ ನೆಲೆಯಲ್ಲೂ ಶತ ಶತಮಾನಗಳ ಜಲದುರ್ಗಗಳಿವೆ, ಕೋಟೆಯಲ್ಲಿ ನೀರು ಹಿಡಿದು ರಾಜ್ಯ ಕಟ್ಟಿದ ಉದಾಹರಣೆಯಿದೆ.
ನೀರು ನುಂಗಿದ ನಗರಗಳು: ಕೊಳ್ಳೇಗಾಲದ ಕೋಟೆಕೆರೆ 37 ಹೆಕ್ಟೇರ್ ವಿಸ್ತೀರ್ಣವಿದೆ. ಕೆರೆ ದಂಡೆಯ ಉದ್ದವೇ 1120 ಮೀಟರ್! ದೊಡ್ಡ ಸಂಪಿಗೆ, ಕುರುಬನಕಟ್ಟೆ, ಸಿದ್ದಪ್ಪಾಜಿ ದೇಗುಲ, ಮೌನೇಶ್ವರ ಬೆಟ್ಟದ ಮಳೆ ನೀರಿನಿಂದಾಗಿ ಕೆರೆ ತುಂಬುತ್ತದೆ. ಸಾಮಾನ್ಯವಾಗಿ ಯಾವುದೇ ಕೆರೆ ಒಣಗಬಹುದು ಆದರೆ ಈ ಕೋಟೆ ಕೆರೆ ಸ್ಥಳ ಆಯ್ಕೆಯ ತಜ್ಞತೆಗೆ ಸಾಕ್ಷಿಯಾಗಿದ್ದು ಸಂಪೂರ್ಣ ಒಣಗಿದ ದಾಖಲೆ ಕಡಿಮೆಯೇ!
ಚಿತ್ರದುರ್ಗದ ಪಾಳೇಗಾರರ ಕಾಲದಲ್ಲಿ ನಿರ್ಮಿಸಿದ ಜಂಪಣ್ಣ ನಾಯಕನ ಕೋಟೆಕೆರೆ, ವಿಸ್ತೀರ್ಣದಲ್ಲಿ 130 ಹೆಕ್ಟೇರ್ ವಿಶಾಲವಾಗಿದೆ. 32 ಚದರ ಕಿಲೋಮೀಟರ್ ಪ್ರದೇಶಗಳಲ್ಲಿ ಸುರಿದ ಮಳೆ ನೀರು, ಹರಿದು ಬರುವ ಆಯಕಟ್ಟಿನ ಜಾಗದಲ್ಲಿದೆ. ಧಾರವಾಡದ ಹೊರಕೋಟೆಯ ಪ್ರದೇಶದಲ್ಲಿ ಕೊಪ್ಪದಕೆರೆ, ಹಾಲಕೆರೆ, ನೀಲಕೆರೆಗಳಿದ್ದವಂತೆ! ಈಗ ನಗರ ಎಲ್ಲವನ್ನೂ ನುಂಗಿ ಅವಶೇಷವೂ ಉಳಿದಿಲ್ಲ! ಗದಗ ಜಿಲ್ಲೆಯಲ್ಲಿ ಲಕ್ಕುಂಡಿ, ಮುಳಗುಂದ, ನರಗುಂದ, ಲಕ್ಷ್ಮೇಶ್ವರ ಕೋಟೆಗಳು ನೀರು ಹಿಡಿಯುವ ಸೂತ್ರ ಸಾರಿವೆ.
ಭೌಗೋಳಿಕ ಪರಿಸರಕ್ಕೆ ತಕ್ಕುದಾದ ಮಾರ್ಗ ಅನುಸರಿಸಿ ಕೋಟೆಗಳಲ್ಲಿ ನೀರು ನಿಲ್ಲಿಸಿದ ತಂತ್ರಗಳಿಂದ ಕಲಿಯುವುದು ಹಲವಿದೆ. ಚಿತ್ರದುರ್ಗ (ಚಿನ್ಮೂಲಾದ್ರಿ) ಕೋಟೆಯನ್ನೊಮ್ಮೆ ನೋಡಬೇಕು. ಜೋಗಿಮಟ್ಟಿಯಿಂದ ಸಂತೆಹೊಂಡವರೆಗಿನ ಸರಣಿಕೆರೆಗಳ ರಚನೆ ಅಭ್ಯಸಿಸಬೇಕು. ಮುಖ್ಯವಾಗಿ, ಕೋಟೆಯ ಲಾಲಬತ್ತೇರಿಯಿಂದ ಹರಿಯುವ ನೀರು ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿಯರ ಹೊಂಡದಿಂದ ಸಿಹಿನೀರಿನ ಹೊಂಡಕ್ಕೆ,
ದೊಡ್ಡಣ್ಣನ ಕೆರೆ ತುಂಬಿದ ಬಳಿಕ ತಿಮ್ಮಣ್ಣ ನಾಯಕನ ಕೆರೆಗೆ, ನಾಗರತೀರ್ಥಕ್ಕೆ ಒಡ್ಡು ಹಾಕಿದ ವಿಶೇಷ ಗಮನಿಸಿದರೆ ಕಲ್ಲುಬೆಟ್ಟದಲ್ಲಿ ನೀರು ಕಂಡ ಪ್ರಯತ್ನಗಳಿವೆ. ಕೊಪ್ಪಳದ ಕೋಟೆಯ ಕಲ್ಲು ಬೆಟ್ಟದ ನೀರನ್ನು ಹುಲಿ ಕೆರೆಯಲ್ಲಿ ಹಿಡಿದು ಕೋಟೆಯ ಸುತ್ತ ಕಂದಕದಲ್ಲಿ ನಿಲ್ಲಿಸಿದ ಜಲದುರ್ಗದ ಪರಿಕಲ್ಪನೆ ವಿಶೇಷವಿದೆ. ಹೊಲ ಗದ್ದೆ, ಗುಡ್ಡ ಬೆಟ್ಟಗಳಲ್ಲಿ ಕೃಷಿಯನ್ನಾಳುವ ನಾವು ಕೋಟೆಗಳ ಜಲಪಾಠ ಆಲಿಸಬೇಕಿದೆ.
ಮುಂದಿನ ಭಾಗ – 7: ಗುಡೇಕೋಟೆಯ ಜಲ ಚರಿತೆ
* ಶಿವಾನಂದ ಕಳವೆ