ಅಫಜಲಪುರ: ಅಧಿಕಾರ ಶಾಶ್ವತವಲ್ಲ ಹೀಗಾಗಿ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ತಾಲೂಕಿನ ಮಾಶಾಳ ಗ್ರಾಮದಲ್ಲಿ 2021-22ನೇ ಸಾಲಿನ 4.702 ಯೋಜನೆ ಅಡಿಯಲ್ಲಿ ಮಾಶಾಳ ದಿಕ್ಸಂಗಾ ಹಾಗೂ ಅಫಜಲಪುರ ಎಪಿಎಂಸಿ ಯಿಂದ ಬಳ್ಳೂಂಡಗಿ ಮುಖ್ಯ ಕಾಲುವೆಗೆ ಸಂಪರ್ಕಿಸುವ 2.2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಜವಾಬ್ದಾರಿ ನನ್ನ ಮೇಲಿದೆ. ನನಗೆ ಅಧಿಕಾರ ನೀಡಿದ ಜನರ ಬೇಡಿಕೆಗಳನ್ನು ಈಡೇರಿಸುವ ಕೆಲಸದಲ್ಲಿ ತೊಡಗಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರ ಸೇವೆ ಮಾಡುತ್ತೇನೆ. ಈಗ ಅಧಿಕಾರ ನೀಡಿರುವ ಜನರ ನಂಬಿಕೆ ಉಳಿಸಿಕೊಳ್ಳುವುದಲ್ಲದೆ ತಾಲೂಕಿನಾದ್ಯಂತ ಅವಧಿ ಮುಗಿಯುದರೊಳಗಾಗಿ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಜನರ ಋಣ ತೀರಿಸುತ್ತೇನೆ ಎಂದರು.
ಮಾಜಿ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಞಾನೇಶ್ವರಿ ಪಾಟೀಲ್ ಮಾತನಾಡಿದರು. ಮುಖಂಡರಾದ ರಾಜು ಬಬಲಾದ, ಮಹಾದೇವಗೌಡ ಕರೂಟಿ, ಶಿವಾನಂದ ಗಾಡಿಸಾಹುಕಾರ, ಶಿವು ಪಾರಗೊಂಡ, ಬಾಬಾಸಾಹೇಬಗೌಡ ಪಾಟೀಲ್, ಶರಣು ಕುಂಭಾರ ಸೇರಿದಂತೆ ಅನೇಕರು ಇದ್ದರು.