Advertisement

ಬ್ಯಾರೇಜು ಬರಿದಾಯ್ತು.. ಚಿಂತೆ ಶುರುವಾಯ್ತು..!

12:40 PM May 14, 2019 | pallavi |

ಗುಳೇದಗುಡ್ಡ: ಸಮೀಪದ ಇಂಜಿನವಾರಿ ಹಾಗೂ ಆಸಂಗಿ ಗ್ರಾಮಗಳ ಹತ್ತಿರದ ಮಲಪ್ರಭಾ ನದಿಗೆ ನಿರ್ಮಿಸಿದ ಬ್ಯಾರೇಜ್‌ ಬರಿದಾಗಿದ್ದು, ಇದರಿಂದ ಜಾನುವಾರುಗಳಿಗೆ ಎಲ್ಲಿಂದ ನೀರು ತರಬೇಕೆಂಬ ಚಿಂತೆ ಈಗ ಈ ಭಾಗದ ಗ್ರಾಮಗಳ ರೈತರಲ್ಲಿ ಶುರುವಾಗಿದೆ. ನೀರಿಲ್ಲದೇ ಇರುವುದರಿಂದ ಕೃಷಿ ಕಾರ್ಯವಂತೂ ನಿಂತೇ ಹೋಗಿದೆ.

Advertisement

ಮಲಪ್ರಭಾ ನದಿಯಲ್ಲಿನ ತಗ್ಗು ಪ್ರದೇಶದಲ್ಲಿ ಅಳಿದುಳಿದ ನೀರನ್ನು ಸುತ್ತಲಿನ ಗ್ರಾಮಸ್ಥರು ದನಕರುಗಳಿಗೆ, ಕುರಿ-ಆಡುಗಳಿಗೆ ಕುಡಿಸಲು ಬಳಸುತಿದ್ದಾರೆ. ಇಂಜಿನವಾರಿ ಹತ್ತಿರವಿರುವ ಬ್ಯಾರೇಜ್‌ ಸಂಪೂರ್ಣ ಬತ್ತಿ ಹೋಗಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.

ಆಸಂಗಿ ಬ್ಯಾರೇಜ್‌ ಖಾಲಿ: ಇಂಜಿನವಾರಿ ಬ್ಯಾರೇಜ್‌ ಅಷ್ಟೇ ಅಲ್ಲ ಆಸಂಗಿ ಬ್ಯಾರೇಜ್‌ ಸಹ ಖಾಲಿಯಾಗಿದ್ದು, ನದಿಯಲ್ಲಿರುವ ತಗ್ಗು ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ನಿಂತ ನೀರೇ ಜಾನುವಾರುಗಳಿಗೆ ಅನುಕೂಲವಾಗಿದೆ. ಅದು ಖಾಲಿಯಾದರೆ ದನಕರುಗಳಿಗೆ ಸಮಸ್ಯೆಯಾಗಲಿದೆ.

ಮಲಪ್ರಭಾ ನದಿಯ ಬ್ಯಾರೇಜ್‌ ಖಾಲಿಯಾಗಿರುವುದರಿಂದ ಸುತ್ತಮುತ್ತಲಿನ ಇಂಜಿನವಾರಿ, ಹಳದೂರ, ಅಲ್ಲೂರ, ಆಸಂಗಿ, ಕಟಗಿನಹಳ್ಳಿ ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. ಸುತ್ತಲಿನ ಹೊಲಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂರ್ತಜಲ ಕಡಿಮೆಯಾಗಿದೆ.

ಈ ಭಾಗದ ಎಲ್ಲ ಗ್ರಾಮಗಳಲ್ಲಿ ಜನರಿಗೆ ನೀರಿನ ಸಮಸ್ಯೆ ಇಲ್ಲ. ಆದರೆ ದನಕರುಗಳ ಬಗ್ಗೆಯೇ ಚಿಂತೆ. ನೀರಿಲ್ಲದಿರುವುದರಿಂದ ದನ ಕರುಗಳು, ಆಡು-ಕುರಿಗಳನ್ನು ಮಾರುವಂತಹ ಸ್ಥಿತಿ ಎದುರಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ರೈತರು ತಮ್ಮ ಉದ್ಯೋಗ ಬಿಟ್ಟು ಜಾನುವಾರುಗಳಿಗಾಗಿ ನೀರು ಹುಡುಕಲು ಹೊರಡುವಂತಾಗಿದೆ. ಜಾನುವಾರುಗಳಿಗೆ ಕುಡಿಯಲು ನಿತ್ಯ ನೀರು ತರುವುದೇ ದೊಡ್ಡ ಕೆಲಸವಾದಂತಾಗಿದೆ.

Advertisement

ಬತ್ತಿವೆ ಕೆರೆಗಳು: ಪರ್ವತಿ, ಬೂದಿನಗಡ, ಕೆಂದೂರ, ಕೆಲೂಡಿ, ಕೋಟೆಕಲ್, ಖಾನಾಪೂರ, ಹಂಸನೂರಗಳು ಕೆರೆಯ ನೀರಾವರಿಯನ್ನೇ ಅವಲಂಬಿಸಿವೆ. ಕೃಷಿಗೆ ನೀರಿಲ್ಲ. ಕೆರೆ ಬತ್ತಿ ಅಂತರ್ಜಲ ಕಡಿಮೆಯಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡಿಸಿದ್ದರು. ಅದು ಏಪ್ರಿಲ್ವರೆಗೆ ಸಮಸ್ಯೆ ಆಗಲಿಲ್ಲ. ಈಗ ಬ್ಯಾರೇಜ್‌ ಖಾಲಿಯಾಗಿದ್ದರಿಂದ ನೀರಿನ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ನೀರು ತಂದು ಕುಡಿಸುವುದು ಬಹಳ ಕಷ್ಟವಾಗುತ್ತಿದೆ. ನವಿಲುತೀರ್ಥ ಜಲಾಶಯದಿಂದ ಇನ್ನೊಂದು ಬಾರಿ ನೀರು ಬಿಡಿಸಬೇಕು.

•ಪ್ರಕಾಶ ಗೌಡರ, ಗ್ರಾಪಂ ಮಾಜಿ ಉಪಾಧ್ಯಕ್ಷ, ಆಸಂಗಿ.

ಕಲಾದಗಿಯಲ್ಲಿಲ್ಲ ನೀರಿನ ಸಮಸ್ಯೆ
ಕಲಾದಗಿ:
ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಪಂ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಾದಗಿ ಗ್ರಾಪಂ 12 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ.

ಸದಾ ಸನ್ನದ್ದ: ಜಿಲ್ಲೆಯ ಕೆಲವೆಡೆ ನೀರಿನ ಹಾಹಾಕಾರ ನಿರ್ಮಾಣವಾಗಿ ಜಿಲ್ಲಾಡಳಿತ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಅನೇಕ ಕ್ರಮ ಕೈಗೊಂಡು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದೆ. ಆದರೆ ಇಲ್ಲಿನ ಗ್ರಾಪಂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಗ್ರಾಮದಲ್ಲಿನ ಎಲ್ಲ ಕೊಳವೆ ಬಾವಿಗಳು, ಕೈಪಂಪ್‌ಗ್ಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ನೀರಿನ ಅಭಾವ ಉಂಟಾಗದಂತೆ ಎಚ್ಚರ ವಹಿಸಲಾಗಿದೆ.

15 ಕೊಳವೆ ಬಾವಿ: ಗ್ರಾಮವೂ 12 ವಾರ್ಡ್‌ ಹೊಂದಿದ್ದು, ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿದ ಗ್ರಾಪಂ ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು, ಇವುಗಳಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು, ನಿತ್ಯ ಬಳಕೆಯ ನೀರು, ಸಾರ್ವಜನಿಕ ಶೌಚಾಲಯಗಳಿಗೆ ನೀರು ಒದಗಿಸುತ್ತಿದೆ, ಎಲ್ಲ ಕೊಳವೆ ಬಾವಿಗಳು ಸುಸ್ಥಿತಿಯಲ್ಲಿವೆ.

5 ಶುದ್ಧ ಘಟಕಗಳು: ಗ್ರಾಮದ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಗ್ರಾಪಂ ಕಾರ್ಯಾಲಯದ ಎದುರಿಗೆ, ಹೊಸೂರ್‌ ಚೌಕ ಬಳಿ, ಅಂಬೇಡ್ಕರ್‌ ವೃತ್ತದ ಹತ್ತಿರ, ಗುರುಲಿಂಗೇಶ್ವರ ಹೈಸ್ಕೂಲ್ ಎದುರು, ಲಾಲಸಾಬ ಅಲಿ ಮಕಾನ ಎದುರುಗಡೆ ಒಟ್ಟು ಐದು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಎಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಗ್ರಾಮಸ್ಥರಿಗೆ ನೀರಿನ ಅಭಾವ ತಲೆದೋರಿಲ್ಲ.

3 ಓವರ ಹೆಡ್‌ ಟ್ಯಾಂಕ್‌: ಗ್ರಾಮದ ಮನೆ ಮನೆಗಳಿಗೂ, 2 ದೊಡ್ಡ ಓವರ್‌ ಹೆಡ್‌ ಟ್ಯಾಂಕ್‌ಗಳಿಗೂ(ಜಿಎಲ್ ಎಸ್‌ಆರ್‌) ಒಂದು ಓವರ್‌ ಹೆಡ್‌ ಟ್ಯಾಂಕ್‌(ಇಎಲ್ಎಸ್‌ಆರ್‌), 73 ಸಿಸ್ಟರ್ನ್ ವಾಟರ್‌ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲು 6 ಪಿಡಬ್ಲೂಎಸ್‌ ಜಲಮೂಲ, 9 ಎಂಡಬ್ಲೂಎಸ್‌ ಜಲಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದ 12 ವಾರ್ಡ್‌ಗಳಲ್ಲೂ ಜಾನುವಾರುಗಳು ಸಂಚರಿಸುವ ಪ್ರಮುಖ ಪ್ರದೇಶದಲ್ಲೂ ಗ್ರಾಪಂ ವತಿಯಿಂದ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ.
•ಚಂದ್ರಶೇಖರ ಆರ್‌.ಎಚ್.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 15 ಜಲಮೂಲ ಕೊಳವೆ ಬಾವಿಗಳಿದ್ದು, 12 ವಾರ್ಡ್‌ಗಳಿಗೂ ನೀರಿನ ಸರಬರಾಜು ಮಾಡಲಾಗುತ್ತಿದೆ. 5 ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿವೆ. ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ.

•ಸಿ.ಎಚ್. ಪವಾರಕಲಾದಗಿ ಗ್ರಾಪಂ ಪಿಡಿಒ

ಕಲಾದಗಿ ಹೊಬಳಿ ವ್ಯಾಪ್ತಿಯಲ್ಲಿ 82 ಕೈಪಂಪ್‌ ಹಾಗೂ 161 ಕೊಳವೆ ಬಾವಿಗಳಿವೆ. ಇದರಲ್ಲಿ 136 ಕೊಳವೆ ಬಾವಿ ಸುಸ್ಥಿತಿಯಲ್ಲಿವೆ. 36 ಎಂವಿಎಸ್‌( ಮಿನಿ ವಾಟರ್‌ ಸಪ್ಲಾಯ್‌) ಮೂಲಗಳಿವೆ, ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ, ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ ಮೂಲಕವೂ ನೀರು ಒದಗಿಸಲು ಸೂಚಿಸಲಾಗಿದೆ.

•ಎನ್‌.ವೈ. ಬಸರಿಗಿಡದಬಾಗಲಕೋಟೆ ಇಒ

ಮಲ್ಲಿಕಾರ್ಜುನ ಕಲಕೇರಿ

 

Advertisement

Udayavani is now on Telegram. Click here to join our channel and stay updated with the latest news.

Next