Advertisement

ಅಪ್ಪನೆಂಬ ಆಲದ ಮರ ಮತ್ತು ನಾನು

09:34 PM Jun 22, 2019 | mahesh |

ನಾನು ಕಥೆ ಬರೆಯುವುದು, ಪುಸ್ತಕ ಓದುವುದು ಅಪ್ಪನಿಗೆ ಒಂಚೂರೂ ಇಷ್ಟವಿರಲಿಲ್ಲ. “”ಲೇ ತಮ್ಮಾ, ಯಾಕ ಪೇಪರ ಹಾಳಿ ಬರದ ಬರದ ಹಾಳ ಮಾಡತಿಯಾ. ನೆಟ್ಟಗ ಭೂಮ್ಯಾಗ ಮೈ ಬಗ್ಗಿಸಿ ಕೆಲಸಾ ಮಾಡು ಹೊಟ್ಟಿ ಹಸಿತೈತಿ, ಹೊಟ್ಟಿತುಂಬ ಊಟ ಹೊಗತೈತಿ, ಆರೋಗ್ಯ ಚಲೋ ಇರತೈತಿ ಜೊತಿಗಿ ನಾಕ ರುಪಾಯಿ ಪಗಾರು ಬರತೈತಿ” ಅಂತ ಉಪದೇಶ ಮಾಡುತ್ತಿದ್ದ.

Advertisement

ಆವಾಗೆಲ್ಲ ಬೇಜಾನ ನಿರಾಸೆ ಆಗೋದು ನನಗೆ. ಕೈಯಲ್ಲಿದ್ದ ಪುಸ್ತಕ ಕಪಾಟಿಗೆ ಎಸೆದು ಊರ ಹೊರಗಡೆ ಹೋಗಿ ಬಿಡುತ್ತಿದ್ದೆ. ಅಪ್ಪನ ಬುದ್ಧಿಮಾತಿಗೆ ಕೋಪವಿಲ್ಲ. ಆದರೆ ಓದು ಇಂದಿನ ಜಗತ್ತಿನಲ್ಲಿ ಎಷ್ಟು ಆವಶ್ಯಕ ಅನ್ನೋದು ಅವನಿಗೆ ಅವನ ಧಾಟಿಯೊಳಗ ಹೇಳಬೇಕಾಗಿತ್ತು. ಊರಾಚೇ ಇರುವ ದೇವಸ್ಥಾನಕ್ಕೆ ಬಂದು ಮುಳುಗುವ ಸೂರ್ಯನ ನೋಡುತ್ತ ಆಲೋಚಿಸಿದೆ. ಹೇಗೆ ಹೇಳಬೇಕು ಅನ್ನುವುದು ಮನಸ್ಸನ್ನು ಕಡಿಯುತ್ತಲೇ ಇತ್ತು. ಕೊನೆಗೆ ಯಾವುದೊಂದು ತಲೆಗೆ ಹೊಳೆಯದೆ ಮನೆಗೆ ಬಂದೆ.

ಚಹಾ ಕುಡಿಯುತ್ತಿದ್ದ ಅಪ್ಪನ ಮುಂದೆ ಕುಳಿತು ಕೇಳಿದೆ, “”ಅಪ್ಪಾ, ಯಾಕೆ ಈ ಓದುಬರಹ ಅಂದರೆ ನಿನಗೆ ಆಗಿ ಬರಲ್ಲ? ಕಾರಣ ಹೇಳು, ಒಪ್ಪಕೋತಿನಿ…” ಅಂತಂದು ಪಟ್ಟು ಹಿಡಿದು ಮುಂದೆ ಕುಳಿತೆ.
ಚಹಾ ಕುಡಿದು ಬಾಯಿ ಒರೆಸಿಕೊಳ್ಳುತ್ತ, “”ಅತಿಯಾಗಿ ಓದಿ ಓದಿ ಪಾಟೀಲರ ಮಗಾ ಇನ್ನೇನಾದಪ್ಪ ಹುಚ್ಚನಾಗಿ ಊರೆಲ್ಲ ಅಲೆಯುತ್ತಿರೋದು ಕಣ್ಣಿಗೆ ಕಾಣಿಸೊದಿಲ್ಲೇನು?” ಕೇಳಿದ ತಕ್ಷಣ ಅವನ ಕಣ್ಣಲ್ಲಿ ನೀರು ತುಂಬಿ ಬಂತು.

“”ನೀನು ನಮ್ಮ ಹರಕಿಯ ಮಗಾ. ಇರೋ ಒಬ್ಬ ಮಗಾ ಓದಿ ಹುಚ್ಚನಾಗಿ ಇದ್ದು ಸತ್ತಂತಿದ್ರೆ ಅದರ ನೋವು ಏನು ಅಂತ ಹೆತ್ತವರಿಗೆ ಗೊತ್ತು” ಅಂದಾಗ ಓದಿನ ಬಗೆಗೆ ಆವತ್ತು ಏನೊಂದೂ ಮಾತಾಡದೆ ಸುಮ್ಮನಾದೆ.

ಅಪ್ಪ ಸತ್ತ ಮೂರು ವರ್ಷಕ್ಕೆ ನನಗೆ ನೌಕರಿ ಸಿಕ್ಕಿತು ನಿಜ. ಆದರೆ? ಓದಿನಿಂದ ಆಗುವ ಸುಖ ಹಾಗೂ ಎಲ್ಲರೂ ಹುಚ್ಚರಾಗಲ್ಲ ಎನ್ನುವ ಸತ್ಯವನ್ನು ಅಪ್ಪನ ಪೋಟೋದ ಮುಂದೆ ನಿತ್ಯ ಹೇಳುತ್ತಿದ್ದೇನೆ. ಆತ ಕೇಳಿಸಿಕೊಳ್ಳುತ್ತಲೆ ಇಲ್ಲ !

Advertisement

ಬಸವಣ್ಣೆಪ್ಪ ಕಂಬಾರ

Advertisement

Udayavani is now on Telegram. Click here to join our channel and stay updated with the latest news.

Next