Advertisement
ಮನೆ ಮನೆಗೆ ತೆರಳಿ ಹಣ ಸಂಗ್ರಹ, ಅಕ್ಕಿ ಸಂಗ್ರಹಿಸಿ ಅದರಿಂದ ಮಾರಾಟ ಮಾಡಿ ಬಂದ ಹಣದಿಂದ ಬ್ಯಾಂಕ್ ಸ್ಥಾಪನೆ ಮಾಡಿದ ಇತಿಹಾಸ ಅವಿಭಜಿತ ದ.ಕ. ಜಿಲ್ಲೆಯದ್ದು. ದೂರದೃಷ್ಟಿತ್ವ, ಸಮುದಾಯ ಅಭಿವೃದ್ಧಿಯ ಉದ್ದೇಶದಿಂದ ಸ್ಥಾಪಿತವಾಗಿದ್ದ ಈ ಬ್ಯಾಂಕ್‌ಗಳು ಬಳಿಕ ದೇಶದ ಆರ್ಥಿಕ ಚಕ್ರಕ್ಕೆ ಶಕ್ತಿ ನೀಡಿದ್ದವು.
Related Articles
Advertisement
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳು ವಿಲೀನಗೊಳ್ಳಲಿದ್ದು, ವಾರ್ಷಿಕ ಸುಮಾರು 15.20 ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ದೇಶದ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಆಗಲಿದೆ. ಯೂನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳು ವಿಲೀನಗೊಳ್ಳಲಿದ್ದು, ವಾರ್ಷಿಕ 14.6 ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ದೇಶದ 5ನೇ ಅತಿ ದೊಡ್ಡ ಬ್ಯಾಂಕ್ ಆಗಲಿದೆ.
ಕರಾವಳಿಯ ಹೆಮ್ಮೆ
1900 ದಶಕದಲ್ಲಿ ಕರಾವಳಿಯ ಪ್ರಮುಖ ಬ್ಯಾಂಕ್‌ಗಳು ಜನ್ಮ ತಳೆದಿದ್ದು, ದೇಶದ ಪ್ರಮುಖ ಬ್ಯಾಂಕ್‌ಗಳಾಗಿ ಬೆಳೆದಿವೆ. 1969ರಲ್ಲಿ ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ ಕಾಲಾಂತರದಲ್ಲಿ ಕೇಂದ್ರ ಸರಕಾರ ಬ್ಯಾಂಕ್‌ಗಳ ಏಕೀಕರಣದ ಉದ್ದೇಶದಿಂದ ವಿಲೀನಕ್ಕೆ ಚಿಂತನೆ ಮಾಡಿದ್ದು, ಇದರಿಂದ ಏಕರೂಪದ ಆಡಳಿತ ಜಾರಿ, ವಿಶ್ವಮಟ್ಟದ ಬ್ಯಾಂಕ್‌ಗಳನ್ನು ವಿಸ್ತರಿಸುವ ಯೋಜನೆ, ಅನುತ್ಪಾದಕ ಸಾಲಗಳ ವಿರುದ್ಧ ಕ್ರಮಕ್ಕಾಗಿ ವಿಲೀನದ ಯೋಜನೆ ರೂಪಿಸಲಾಗಿತ್ತು. ಇದರಿಂದಾಗಿ 2017ರಲ್ಲಿ 27ರಷ್ಟಿದ್ದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಜತೆ ಸೇರಿ ಇನ್ನು 12 ಬ್ಯಾಂಕ್‌ಗಳಾಗಲಿವೆ. ಇದರಲ್ಲಿ ಕರಾವಳಿಯ ಪ್ರಮುಖ ಬ್ಯಾಂಕ್‌ಗಳೂ ಸೇರಿವೆ.
ಯಾವ ಬ್ಯಾಂಕ್ ಯಾವಾಗ ಸ್ಥಾಪನೆ?
ಕೆನರಾ ಬ್ಯಾಂಕ್ :
1906ರಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು “ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ’ ಅನ್ನು ಸ್ಥಾಪಿಸಿದರು. ಬಳಿಕ ಇದು 1910ರಲ್ಲಿ ಕೆನರಾ ಬ್ಯಾಂಕ್ ಲಿ. ಆಗಿದ್ದು 1969ರಲ್ಲಿ ರಾಷ್ಟ್ರೀಕರಣಗೊಂಡಿತ್ತು. ಸದ್ಯ ಇದು 6 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಕಾರ್ಪೋರೇಷನ್ ಬ್ಯಾಂಕ್ :
1906ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಉಡುಪಿಯಲ್ಲಿ ಆರಂಭಗೊಂಡಿತು. ಆಗ ಅದರ ಹೆಸರು “ದಿ ಕೆನರಾ ಬ್ಯಾಂಕಿಂಗ್ ಕಾರ್ಪೋರೇಷನ್ (ಉಡುಪಿ) ಲಿ.’ ಆಗ ಇದರ ಸ್ಥಾಪಕ ಅಧ್ಯಕ್ಷರಾಗಿದ್ದವರು ಖಾನ್ ಬಹಾದ್ದೂರ್ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ ಬಹಾದ್ದೂರ್ ಅವರು. 1939ರಲ್ಲಿ ಬ್ಯಾಂಕ್‌ನ ಹೆಸರು ಕೆನರಾ ಬ್ಯಾಂಕಿಂಗ್ ಕಾ.ಲಿ ಎಂದಾಗಿತ್ತು. 1972ರಲ್ಲಿ ಅದು ಮತ್ತೆ ಕಾರ್ಪೋರೇಷನ್ ಬ್ಯಾಂಕ್ ಎಂದು ಹೆಸರು ಪಡೆಯಿತು.
ಸಿಂಡಿಕೇಟ್ ಬ್ಯಾಂಕ್ :
1925ರಲ್ಲಿ ಉಡುಪಿಯಲ್ಲಿ ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿ. ಅನ್ನು ಡಾ|ಟಿಎಂಎ ಪೈ ಮತ್ತು ಉಪೇಂದ್ರ ಪೈ ಮತ್ತು ವಾಮನ ಕುಡ್ವ ಅವರು ಆರಂಭಿಸಿದರು. 1963ರಲ್ಲಿ ಬ್ಯಾಂಕ್ ಹೆಸರು ಸಿಂಡಿಕೇಟ್ ಬ್ಯಾಂಕ್ ಎಂದಾಯಿತು. 1928ರಿಂದಲೇ ಪಿಗ್ಮಿ ಸಂಗ್ರಹಣೆ ಆರಂಭಿಸಿದ್ದ ದೇಶದ ಮೊದಲ ಬ್ಯಾಂಕ್ ಇದಾಗಿದೆ.
ವಿಜಯಾ ಬ್ಯಾಂಕ್ :
1931ರಲ್ಲಿ ಮಂಗಳೂರಿನಲ್ಲಿ ವಿಜಯಾ ಬ್ಯಾಂಕ್ ಅನ್ನು ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರು ಆರಂಭಿಸಿದ್ದರು. ವಿಜಯದಶಮಿಯಂದು ಬ್ಯಾಂಕ್ ಆರಂಭ ಮಾಡಿದ್ದರಿಂದ ವಿಜಯ ಬ್ಯಾಂಕ್ ಎಂದೇ ಇದಕ್ಕೆ ಹೆಸರಿಡಲಾಗಿತ್ತು.
ಕೆಲವೇ ಸಾವಿರ ರೂ.ಗಳಿಂದ ಆರಂಭವಾಗಿದ್ದ ಬ್ಯಾಂಕ್
ಕಾರ್ಪೋರೇಷನ್ ಬ್ಯಾಂಕ್ ಆರಂಭವಾಗಿದ್ದಾಗ ಅದರ ಬಂಡವಾಳ ಇದ್ದದ್ದು 5 ಸಾವಿರ ರೂ. ಇಂದು ಅದರ ವ್ಯವಹಾರ 3.29 ಲಕ್ಷ ಕೋಟಿ ರೂ. ದಾಟಿದೆ. 2501 ಶಾಖೆಗಳಿದ್ದು, 3169 ಎಟಿಂಗಳನ್ನು ಹೊಂದಿದೆ. ಸಿಂಡಿಕೇಟ್ ಬ್ಯಾಂಕ್ 8 ಸಾವಿರ ರೂ. ಬಂಡವಾಳದೊಂದಿಗೆ ಆರಂಭವಾಗಿದ್ದು, ಈಗ ಅದರ ವ್ಯವಹಾರ 4.77 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ವಿಜಯಾ ಬ್ಯಾಂಕ್ 8670 ರೂ.ಗಳ ಬಂಡವಾಳದೊಂದಿಗೆ ಆರಂಭವಾಗಿದ್ದು, ಅದರ ವ್ಯವಹಾರ ವಾರ್ಷಿಕ 2.79 ಲಕ್ಷ ಕೊಟಿ ರೂ. ದಾಟಿದೆ. ಶೇ.60ಕ್ಕೂ ಹೆಚ್ಚು ಶಾಖೆಗಳನ್ನು ಅದು ಗ್ರಾಮೀಣ ಪ್ರದೇಶದಲ್ಲಿ ಹೊಂದಿದೆ. ಕೆನರಾ ಬ್ಯಾಂಕ್ 50 ರೂ.ಗಳ 2 ಸಾವಿರ ಷೇರುಗಳೊಂದಿಗೆ ಆರಂಭವಾಗಿದ್ದು, ಇಂದು 10.43 ಲಕ್ಷ ಕೋಟಿ ರೂ. ವ್ಯವಹಾರ ಮತ್ತು 6 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಸಮಾಜೋದ್ಧಾರವೇ ಉದ್ದೇಶ
ಕರಾವಳಿಯಲ್ಲಿ ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಿದ ಯಾವುದೇ ಸ್ಥಾಪಕರಿಗೂ ಹಣ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ಸಮಾಜದ ಉದ್ಧಾರವೇ ಅವರ ಪ್ರಮುಖ ಧ್ಯೇಯವಾಗಿತ್ತು. ಅದನ್ನೇ ಅವರು ಕನಸು ಕಂಡಿದ್ದರು. ವಿಜಯಾ ಬ್ಯಾಂಕ್ ಅನ್ನು ರೈತರ ಕಲ್ಯಾಣಕ್ಕಾಗಿಯೇ ಮೀಸಲಿರಿಸುವ ಕನಸನ್ನು ಎ.ಬಿ.ಶೆಟ್ಟಿಯವರು ಕಂಡಿದ್ದರು. ಸಿಂಡಿಕೇಟ್ ಬ್ಯಾಂಕ್ ಕೂಡ ದೀನರಿಗಾಗಿಯೇ ಕೆಲಸ ಮಾಡುವ ಉದ್ದೇಶ ಹೊಂದಿತ್ತು. ನೇಕಾರರು ಕಷ್ಟದಲ್ಲಿದ್ದಾಗ, ದೇಶದಲ್ಲೇ ಮೊದಲ ಬಾರಿಗೆ ಪಿಗ್ಮಿ ಆರಂಭಿಸಿ, ಅವರ ಕಷ್ಟದ ಕಾಲದಲ್ಲಿ ನೆರವಾಗುವ ಉದ್ದೇಶವನ್ನು ಬ್ಯಾಂಕ್ ಹೊಂದಿತ್ತು. ಇಂದು ಪಿಗ್ಮಿ ಸಂಗ್ರಹಣೆಯಲ್ಲೇ ದಿನಕ್ಕೆ 2 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬ್ಯಾಂಕ್ ಸಣ್ಣ ದುಡಿಮೆಗಾರರಿಂದ ಸಂಗ್ರಹಿಸುತ್ತಿದೆ. ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರ ಉದ್ದೇಶವೂ ಸಮಾಜದಲ್ಲಿ ಸಮೃದ್ಧಿಯನ್ನು ತರಬೇಕು ಎಂಬುದಾಗಿತ್ತು. ಕೆನರಾ ಬ್ಯಾಂಕ್ ಕೂಡ ಸಮುದಾಯದ ಹಣಕಾಸಿನ ಕೇಂದ್ರವಾಗುವುದರೊಂದಿಗೆ ಸಾಮಾನ್ಯ ಜನರ ಹಣಕಾಸು ಸ್ಥಿತಿಗತಿಯನ್ನು ಉನ್ನತಿಗೇರಿಸುವ ಗುರಿಯೊಂದಿಗೆ ಸ್ಥಾಪನೆಯಾಗಿತ್ತು.
ಜನಸಾಮಾನ್ಯರ ಪ್ರತಿಬಿಂಬ
ಕರಾವಳಿಯ ಎಲ್ಲ ಬ್ಯಾಂಕ್‌ಗಳ ಚಿಹ್ನೆಗಳನ್ನೇ ನೋಡಿದರೆ ಸಾಕು. ಅದು ಸಾಮಾನ್ಯರನ್ನೇ ಪ್ರತಿಬಿಂಬಿಸುತ್ತಿರುವುದು ಸ್ಪಷ್ಟ. ವಿಜಯಾ ಬ್ಯಾಂಕ್ ಸಾಮಾನ್ಯ ವಕ್ತಿಯ ಚಿತ್ರವನ್ನು ಹೊಂದಿದ್ದರೆ, ಸಿಂಡಿಕೇಟ್ ಬ್ಯಾಂಕ್ ವಿಧೇಯತೆಗೆ ಹೆಸರಾದ ಶ್ವಾನದ ಚಿತ್ರವನ್ನು ಹೊಂದಿದೆ. ಕೆನರಾ ಬ್ಯಾಂಕ್ ಕೂಡ ಕೈಯಲ್ಲಿ ಹೂವು ಹಿಡಿದ ಚಿತ್ರವನ್ನು ಹೊಂದಿದ್ದು ಸಮೃದ್ಧಿಯನ್ನು ಪ್ರತಿಬಿಂಬಿಸುತ್ತಿತ್ತು. ಕಾರ್ಪೋರೇಷನ್ ಬ್ಯಾಂಕ್ ಕೂಡ ಹಸು ಮತ್ತು ಕಲ್ಪವೃಕ್ಷ, ಸಾಮಾಜಿಕ ನ್ಯಾಯದ ತಕ್ಕಡಿಯ ಚಿತ್ರವನ್ನು ಹೊಂದಿದ್ದು, ಸ್ಥಾಪಕರ ದೂರದೃಷ್ಟಿ ಮತ್ತು ಅತ್ಯುನ್ನತ ಆದರ್ಶದ ನೆಲೆಯಲ್ಲೇ ಸ್ಥಾಪನೆಯಾಗಿತ್ತು.
ಪ್ರತಿ ಮನೆ-ಮನಗಳ ಬ್ಯಾಂಕ್
ಅವಿಭಜಿತ ದ.ಕ.ಜಿಲ್ಲೆಯ ಪ್ರತಿ ಬ್ಯಾಂಕ್‌ಗಳೂ ಪ್ರತಿ ಮನೆಯಲ್ಲಿ ಮನೆ ಮಾತು. ವಿದ್ಯಾಭ್ಯಾಸದಿಂದ ಹಿಡಿದು, ಪ್ರತಿಯೊಂದು ಸ್ವಂತ ಉದ್ದಿಮೆ, ವ್ಯವಹಾರಗಳಿಗೆ ಈ ಬ್ಯಾಂಕನ್ನೇ ಜನರು ಆಶ್ರಯಿಸುತ್ತಿದ್ದಾರೆ. ಕರಾವಳಿಯ ಗ್ರಾಹಕರಿಗೆ “ನಮ್ಮ ಬ್ಯಾಂಕ್’ ಎಂಬ ಆಪ್ತತೆ ಮತ್ತು ಗಾಢತೆ ಇದ್ದುದರಿಂದ ಈ ಬ್ಯಾಂಕ್‌ಗಳೂ ಕರಾವಳಿಯ ಉದ್ಯಮ ವಲಯಗಳು ಮತ್ತು ಉದ್ದಿಮೆದಾರರು ಮತ್ತು ವ್ಯವಹಾರ ವಲಯವನ್ನು ಪೋಷಿಸಿದೆ. ಇಂದು ಅವಿಭಜಿತ ದ.ಕ. ಜಿಲ್ಲೆ ಸುಶಿಕ್ಷಿತ ಮತ್ತು ಸಾಕ್ಷರಜಿಲ್ಲೆ ಮಾತ್ರವಲ್ಲ. ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟ ದೇಶದ ಅಗ್ರಗಣ್ಯ ಪ್ರದೇಶಗಳಲ್ಲಿ ಒಂದು. ಶೇ.95ಕ್ಕೂ ಹೆಚ್ಚು ಪ್ರತಿಶತ ಇಲ್ಲಿನ ಜನರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಉತ್ತಮ ಉಳಿತಾಯ, ವ್ಯವಹಾರ, ಸಾಲ ಮರುಪಾವತಿ, ಉದ್ಯಮ ವಲಯದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಒಳ್ಳೆಯ ಹಿಡಿತ ಹೊಂದಿದ್ದ ಕೆನರಾ ಬ್ಯಾಂಕ್, ಸಿಂಡಿಕೇಟ್‌ಬ್ಯಾಂಕ್ ಮತ್ತು ಕಾರ್ಪೋರೇಶನ್ ಬ್ಯಾಂಕುಗಳ ಒಟ್ಟು ವ್ಯವಹಾರಗಳು ಎಷ್ಟಿತ್ತು ಮತ್ತು ಅವುಗಳ ಬಲಾಬಲಗಳೇನು ಇಲ್ಲಿದೆ ಮಾಹಿತಿ.
ಕೆನರಾ ಬ್ಯಾಂಕ್
ಒಟ್ಟು ವ್ಯವಹಾರ : 10,43,249
ಒಟ್ಟು ಠೇವಣಿ : 5,99,033
ಶಾಖೆಗಳು : 6,310
ಎನ್‌ಪಿಎ : 5.37 ಶೇ.
ನೌಕರರು : 58,350
ಸಿಂಡಿಕೇಟ್ ಬ್ಯಾಂಕ್
ಒಟ್ಟು ವ್ಯವಹಾರ : 4,77,046
ಒಟ್ಟು ಠೇವಣಿ : 2,59,897
ಶಾಖೆಗಳು : 4,032
ಎನ್‌ಪಿಎ : 6.16ಶೇ.
ನೌಕರರು : 31,535
ಕಾರ್ಪೋರೇಶನ್ ಬ್ಯಾಂಕ್
ಒಟ್ಟು ವ್ಯವಹಾರ : 3,19,616
ಒಟ್ಟು ಠೇವಣಿ : 1,35,048
ಶಾಖೆಗಳು : 2,432
ಎನ್‌ಪಿಎ : 5.17ಶೇ.
ನೌಕರರು : 17,776
***
ವಿಲೀನಗೊಂಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ವ್ಯವಹಾರಗಳ ಗಾತ್ರ (ಲಕ್ಷ ಕೋಟಿ ರೂ.ಗಳಲ್ಲಿ)
– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 52.05
– ಪಿಎನ್‌ಬಿ+ಒಬಿಸಿ+ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 17.94
– ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಸೇರಿ) 16.13
– ಕೆನರಾ ಬ್ಯಾಂಕ್+ಸಿಂಡಿಕೇಟ್ ಬ್ಯಾಂಕ್ 15.20
– ಯೂನಿಯನ್ ಬ್ಯಾಂಕ್+ಆಂಧ್ರ ಬ್ಯಾಂಕ್+ಕಾರ್ಪೋರೇಶನ್ ಬ್ಯಾಂಕ್ 14.59
– ಬ್ಯಾಂಕ್ ಆಫ್ ಇಂಡಿಯಾ 9.03
– ಇಂಡಿಯಾ ಬ್ಯಾಂಕ್+ಅಲಹಾಬಾದ್ ಬ್ಯಾಂಕ್ 8.08
– ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4.68
– ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 3.75
– ಯುಸಿಒ ಬ್ಯಾಂಕ್ 3.17
– ಬ್ಯಾಂಕ್ ಆಫ್ ಮಹಾರಾಷ್ಟ್ರ 2.34
– ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 1.71