Advertisement

ಬ್ಯಾಂಕಿಂಗ್‌ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಯ ಜೀವನಾಡಿ

01:23 AM Jul 08, 2019 | Lakshmi GovindaRaj |

ಬೆಂಗಳೂರು: ದೇಶದ ಆರ್ಥಿಕತೆಯ ಜೀವನಾಡಿಯಾಗಿರುವ ಬ್ಯಾಂಕಿಂಗ್‌ ಕ್ಷೇತ್ರದ ಸಬಲೀಕರಣ, ಉನ್ನತೀಕರಣ ಹಾಗೂ ಆಧುನೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಾಮಾಣಿಕ ಬದ್ಧತೆ ಹೊಂದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Advertisement

ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಪಿಂಚಣಿದಾರರ ಸಮುದಾಯದ ವತಿಯಿಂದ ನಗರದ ಜಯನಗರ ನ್ಯಾಷನಲ್‌ ಕಾಲೇಜಿನ ಡಾ. ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಸ್ಟೇಟ್‌ ಬ್ಯಾಂಕ್‌ ನಿವೃತ್ತರ ಸಂಘ’ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕುಗಳ ಅನುತ್ಪಾದಕ ಆಸ್ತಿ ವಿಷಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಶೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ ಬ್ಯಾಂಕುಗಳ “ಮರು ಬಂಡವಾಳೀಕರಣ’ಕ್ಕೆ 70 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.

ಬ್ಯಾಂಕುಗಳ ಆಧುನೀಕರಣ, ಆಡಳಿತಾತ್ಮಕ ಕ್ಷಮತೆ ಹೆಚ್ಚಿಸುವ ಮೂಲಕ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಪರಿಣಾಮಕಾರಿ ಸಧಾರಣೆಗಳನ್ನು ಕಾಣಬಹುದು. ಬ್ಯಾಂಕ್‌ ನೌಕರರು “ಅಪ್ಪಟ ಮಧ್ಯಮ ವರ್ಗ’. ಮಧ್ಯಮ ವರ್ಗವನ್ನು ಮೆಲೆತ್ತುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದ ತೇಜಸ್ವಿಸೂರ್ಯ, ಬ್ಯಾಂಕ್‌ ನೌಕರರ, ನಿವೃತ್ತ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸದಾ ನಿಮ್ಮ ಧ್ವನಿಯಾಗಿರುತ್ತೇನೆ ಎಂದು ಭರವಸೆ ನೀಡಿದರು.

ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೆರ್‌ ಮತ್ತು ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್ ತ್ರಿವಾಂಕೂರು ಸೇರಿ ಏಳು ಪ್ರಮುಖ ಬ್ಯಾಂಕುಗಳು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಜೊತೆಗೆ ವೀಲಿನಗೊಂಡ ಹಿನ್ನೆಲೆಯಲ್ಲಿ ಆ ಎಲ್ಲ ಅಧೀನ ಬ್ಯಾಂಕುಗಳ ನಿವೃತ್ತರ ಸಂಘಟನೆಗಳು ಸೇರಿಸಿ “ಸ್ಟೇಟ್‌ ಬ್ಯಾಂಕ್‌ ನಿವೃತ್ತರ ಸಂಘ’ ಎಂಬ ಹೆಸರಲ್ಲಿ ಪರಮೋತ್ಛ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ.

Advertisement

ಪದಾಧಿಕಾರಿಗಳ ಆಯ್ಕೆ: ಭಾನುವಾರ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅದರಂತೆ ಅಧ್ಯಕ್ಷರಾಗಿ ಡಾ.ಅನಂತಕೃಷ್ಣರಾವ್‌, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎನ್‌. ಪ್ರಸಾದ್‌, ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿ ವಿ.ಸೋಮ್‌ಬಾಬು, ಪಿ.ಡಿ. ವೈದ್ಯ, ಆರ್‌.ಕೆ. ದೂದ್‌, ಬಿ.ಸಿ. ಬಸ್ಸಿ, ಕಾರ್ಯದರ್ಶಿಯಾಗಿ ರೋಹಿಣಿರಾವ್‌, ಖಜಾಂಚಿಯಾಗಿ ಕೆ.ಎನ್‌. ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪಿ. ಪ್ರದೀಪ್‌ ಕುಮಾರ್‌, ಬ್ಯಾಂಕ್‌ ನೌಕರರ ರಾಷ್ಟ್ರೀಯ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ವಿ. ಮುರಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next