ರಿಪ್ಪನ್‌ಪೇಟೆ: ಅಂಗನವಾಡಿಯಲ್ಲಿ ಮಲಗಿದ್ದ ಸಮಯದಲ್ಲಿ ಹಾವು ಕಡಿದು ಮಗುವೊಂದು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ಹೊಟ್ಟಾಳಪುರದಲ್ಲಿ ನಡೆದಿದೆ. ಅಂಗನವಾಡಿಯಲ್ಲಿ ಮಧ್ಯಾಹ್ನದ ಊಟ ಮಾಡಿ ಮಲಗಿದ್ದ ಐದೂವರೆ ವರ್ಷದ ಮಗು ರಿಶಿತ್‌ಸುಮುಖ್‌ಗೆ ಹಾವು ಕಡಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದೆ.
ಹೊಟ್ಟಾಳಪುರದಲ್ಲಿ ಸಂಪೂರ್ಣ ಶಿಥಿಲಗೊಂಡ ಬಾಡಿಗೆ ಕಟ್ಟಡದಲ್ಲಿ ಮಿನಿ ಅಂಗನವಾಡಿ ಇದ್ದು ಊರಿನ 9 ಮಕ್ಕಳು ಈ ಅಂಗನವಾಡಿಗೆ ಬರುತ್ತಿದ್ದಾರೆ. ಎಂದಿನಂತೆ ಗುರುವಾರ ಬೆಳಗ್ಗೆ ಅಂಗನವಾಡಿಗೆ ಆಗಮಿಸಿದ್ದ ಮಕ್ಕಳ ಆಟ ಪಾಠದ ನಂತರ ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ಊಟ ಬಡಿಸಿ ಮಕ್ಕಳನ್ನು ಮಲಗಿಸಿದ್ದಾರೆ.
ಆದರೆ ನಿದ್ರೆ ಮಾಡದ ರಿಶಿತ್‌ಸುಮುಖ್ ಮಲಗಿದಲ್ಲೇ ಆಟವಾಡುತ್ತಿದ್ದಾನೆ. ಈ ವೇಳೆ ಒಳಬಂದ ಹಾವನ್ನು ಯಾರೂ ನೋಡಿಲ್ಲ. ಹಾವು ಮಗುವಿನ ಕಾಲ ಬೆರಳಿಗೆ ಕಡಿದಿದೆ. ತಕ್ಷಣ ಮೇಲೆದ್ದ ರಿಶಿತ್, ನನ್ನ ಕಾಲಿಗೆ ಹಾವು ಕಡಿಯಿತು ಎಂದು ತೊದಲು ನುಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಧಾಗೆ ಹೇಳಿದ್ದಾನೆ. ಸುಧಾ ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದಾರೆ. ನಂತರ ಮಗುವಿನ ಕಾಲಿಗೆ ಹಗ್ಗದಿಂದ ಕಟ್ಟು ಬಿಗಿಯಲಾಗಿದೆ. ಮಗುವಿನ ತಂದೆಗೆ ಫೋನ್ ಮಾಡಲಾಗಿದೆ. ಆದರೆ ತಂದೆ ಊರಿನಲ್ಲಿ ಇಲ್ಲದ್ದರಿಂದ ಮಗುವಿನ ಚಿಕ್ಕಪ್ಪ ಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದೆ.
ನಾವು ಕೊಡುವುದಿಲ್ಲವೆಂದರೂ ಒತ್ತಾಯಪೂರ್ವಕವಾಗಿ ಅಂಗನವಾಡಿ ನಡೆಸಲು ನಮ್ಮ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರು. ಇಂತಹ ದುರ್ಘಟನೆಯಿಂದ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಇನ್ನು ಮುಂದೆ ಎಲ್ಲಾದರೂ ಒಳ್ಳೆಯ ಕಟ್ಟಡದಲ್ಲಿ ಅಂಗನವಾಡಿ ಪ್ರಾರಂಭಿಸಲಿ. ನಾವು ಮನೆ ನೀಡುವುದಿಲ್ಲ.
ಕಾಳಮ್ಮ, ಮನೆ ಮಾಲೀಕರು.