Advertisement

ಪೂರ್ವಿಕರ ಇತಿಹಾಸದ ಅರಿವು ಮುಖ್ಯ: ವಝೆ

12:27 PM Aug 05, 2018 | |

ಸಾಗರ: ನಮ್ಮ ಪೂರ್ವಿಕರ ಇತಿಹಾಸವನ್ನು ಅರಿತುಕೊಳ್ಳದೆ ಹೋದಲ್ಲಿ ನಮ್ಮ ಬಗ್ಗೆ ನಾವು ಸಂಪೂರ್ಣ ತಿಳಿದುಕೊಳ್ಳುವುದು ಕಷ್ಟಸಾಧ್ಯ ಎಂದು ಸಂಸ್ಕಾರ ಭಾರತೀ ಇತಿಹಾಸ ಸಂಕಲನ ಸಮಿತಿ ಭೂತ ಪೂರ್ವ ಸಂಘಟನಾ ಕಾರ್ಯದರ್ಶಿ ಹರಿಭಾವು ವಝೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕೆಳದಿಯಲ್ಲಿ ಸಂಸ್ಕಾರ ಭಾರತೀ ಕರ್ನಾಟಕ, ತುಮಕೂರು ವಿಶ್ವವಿದ್ಯಾಲಯ, ಕೆಳದಿ ರಿಸರ್ಚ್‌ ಫೌಂಡೇಶನ್‌ ವತಿಯಿಂದ ಶನಿವಾರ ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ, ಚಿತ್ರಕಾರ ಪದ್ಮಶ್ರೀ ಡಾ| ವಿಷ್ಣು ಶ್ರೀಧರ್‌ ವಾಕಣಕರ್‌ ಜನ್ಮಶತಾಬ್ದಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ “ತಾಡೋಲೆ ಹಸ್ತಪ್ರತಿಗಳಲ್ಲಿ ಲಲಿತ ಕಲೆಗಳು’ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತ ದೇಶಕ್ಕೆ ಸುದೀರ್ಘ‌ವಾದ ಸಂಸ್ಕಾರಭರಿತ ಇತಿಹಾಸವಿದೆ. ಈ ಇತಿಹಾಸವನ್ನು ಪ್ರತಿಪಾದಿಸಲು ಬೇಕಾದ ಅನೇಕ ಆಕರಗಳು ನಮಗೆ ತಾಡೋಲೆ, ಹಸ್ತಪ್ರತಿ, ಶಾಸನ, ವಾಸ್ತುಶಿಲ್ಪ, ಪುರಾತನ ದೇವಸ್ಥಾನಗಳ ಮೂಲಕ ಸಿಗುತ್ತವೆ. ಆದರೆ ಅದನ್ನು ಸಂರಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ನಡೆದಿಲ್ಲ. ಸಂಸ್ಕಾರ ಭಾರತೀ ಪುರಾತತ್ವ ಶಾಸ್ತ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಂಸ್ಕಾರ ಭಾರತೀ ಆಗ್ರಾ ಸಂರಕ್ಷಕರಾದ ಪದ್ಮಶ್ರೀ ಬಾಬಾ ಯೋಗೇಂದ್ರಜೀ ಮಾತನಾಡಿ, ಡಾ| ವಿಷ್ಣು ಶ್ರೀಧರ್‌ ವಾಕಣಕರ್‌ ಪುರಾತತ್ವ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದರಲ್ಲಿಯೂ ತಾಡೋಲೆ ಹಸ್ತಪ್ರತಿ ಕ್ಷೇತ್ರದಲ್ಲಿ ವಾಕಣಕರ್‌ ಮಾಡಿದ ಕೆಲಸ ಅಭೂತಪೂರ್ವವಾದದ್ದು. ಭಾರತ ದೇಶದ ಅನೇಕ ಅಮೂಲ್ಯ ವಸ್ತುಗಳನ್ನು ಬ್ರಿಟಿಷರು ತಮ್ಮ ದೇಶಕ್ಕೆ ಕೊಂಡೊಯ್ದಿದ್ದಾರೆ. ಅಳಿದುಳಿದ ವಸ್ತುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಸಂಸ್ಕಾರ ಭಾರತೀ ಬೇರೆಬೇರೆ ಹಂತದಲ್ಲಿ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿಸ್ತರಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಪ್ರಮುಖವಾಗಿ ಕೆಳದಿಯಂತಹ ಐತಿಹಾಸಿಕ ಸ್ಥಳದಲ್ಲಿ ತಾಡೋಲೆ ಹಸ್ತಪ್ರತಿಗಳಲ್ಲಿ ಲಲಿತಕಲೆಗಳು ವಿಷಯ ಕುರಿತು ಬೆಳಕು ಚೆಲ್ಲಲು ನಡೆಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೆಳದಿಯಲ್ಲಿ ಸಂಸ್ಥೆ ಪುರಾತತ್ವ ಶಾಸ್ತ್ರದ ಕುರಿತು ಶಾಖೆ ಪ್ರಾರಂಭಿಸಿ ತನ್ಮೂಲಕ ಯುವಜನರಿಗೆ ನಮ್ಮ ಪ್ರಾಚೀನ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದರು. 

Advertisement

ಇತಿಹಾಸ ಸಂಶೋಧಕ ಡಾ| ಕೆಳದಿ ಗುಂಡಾ ಜೋಯಿಸ್‌ ಅವರು ಬರೆದಿರುವ “ಅಳಿವಿನಂಚಿಲ್ಲಿರುವ ತಿಗಳಾರಿ ಲಿಪಿ’ ಗ್ರಂಥ ಲೋಕಾರ್ಪಣೆ ಮಾಡಿ ದಿಕ್ಸೂಚಿ ಭಾಷಣ ಮಾಡಿದ ಪುಣೆ ಡೆಕ್ಕನ್‌ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಹಾಗೂ ಸಂಸ್ಕಾರ ಭಾರತೀ ಪ್ರಾಚೀನ ಕಲಾವಿಧಾ ವಿಭಾಗದ ಅಖೀಲ ಭಾರತೀಯ ಸಂಯೋಜಕರಾದ ಡಾ| ಜಿ.ಬಿ.ದೇಗಲೂರಕರ್‌, ಲಲಿತ ಕಲೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ.

 ಸಂಸ್ಕೃತಿಯ ಜೊತೆಗೆ ಕಲೆ, ಸಾಹಿತ್ಯ, ನೃತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಸಂಸ್ಕಾರ ಭಾರತೀ ಮಾಡಿಕೊಂಡು ಬರುತ್ತಿದೆ. ಯುವಜನರು ಶಿಕ್ಷಣದ ಜೊತೆಗೆ ಇಂತಹ ವಿಷಯಗಳ ಬಗ್ಗೆ ಸಹ ಆಸಕ್ತಿ ವಹಿಸಬೇಕು ಎಂದರು.

ಸಂಸ್ಕಾರ ಭಾರತೀ ಪ್ರಮುಖವಾಗಿ ಕೆಳದಿಯನ್ನು ಕೇಂದ್ರವಾಗಿ ಇರಿಸಿಕೊಂಡು ತಾಡೋಲೆ ಹಸ್ತಪ್ರತಿಗಳು ಹಾಗೂ ಪುರಾತತ್ವ ಶಾಸ್ತ್ರ ಕುರಿತು ಅಧ್ಯಯನಾಸಕ್ತಿ ಇದ್ದವರಿಗೆ ತಿಳಿದುಕೊಳ್ಳುವ ಕೆಲಸಕ್ಕೆ ಚಾಲನೆ ನೀಡಿದೆ.

ನಮ್ಮಲ್ಲಿರುವ ತಾಡೋಲೆ ಹಸ್ತಪ್ರತಿಯಲ್ಲಿ ಅನೇಕ ಐತಿಹ್ಯಗಳು ಅಡಗಿದೆ. ಅದನ್ನು ತೆರೆದಿಡುವ ಹಾಗೂ ಸಂಶೋಧಿಸುವ ಕೆಲಸವನ್ನು ಡಾ| ಕೆಳದಿ ಗುಂಡಾ ಜೋಯಿಸ್‌ ಮತ್ತು ಅವರ ಮಗ ಡಾ| ವೆಂಕಟೇಶ್‌ ಜೋಯಿಸ್‌ ಮತ್ತು ತಂಡದವರು ಮಾಡುತ್ತಿದ್ದಾರೆ. ಅದರಲ್ಲಿಯೂ ಅಳವಿನಂಚಿನಲ್ಲಿರುವ ತಿಗಳಾರಿ ಲಿಪಿ ಕುರಿತು ಗುಂಡಾ ಜೋಯಿಸ್‌ ಕೃತಿ ರಚಿಸುವ ಮೂಲಕ ಲಿಪಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿದ್ವಾನ್‌ ಹುಲಿಮನೆ ಗಣಪತಿ ಪುಸ್ತಕ ಕುರಿತು ಮಾತನಾಡಿದರು. ವಾಕಣಕರ್‌ ಜೀವನ ಮತ್ತು ಕಾರ್ಯ ಕುರಿತು ಪುಣೆಯ ಡಾ| ಉದಯನ ಇಂದೂರರ್‌ ಮಾತನಾಡಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ವೈ.ಎಸ್‌. ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಕಾರ್ಯದರ್ಶಿ ರಮೇಶ್‌ ಬಾಬು ಇದ್ದರು. ವಸುಧಾ ಶರ್ಮ ಸಂಗಡಿಗರು ಪ್ರಾರ್ಥಿಸಿದರು.

ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಸಂಸ್ಕಾರ ಭಾರತೀ ಅಖೀಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಕೆಳದಿ ವೆಂಕಟೇಶ್‌ ಜೋಯಿಸ್‌ ವಂದಿಸಿದರು. ರೇಖಾ ಪ್ರೇಮಕುಮಾರ್‌ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next