Advertisement
ಇಂತಹ ಮನ ಮಿಡಿಯುವ ನೋವಿನ ಕಥೆಗೆ ಹಿರಿಯ ವೃತ್ತಿರಂಗಭೂಮಿ ಕಲಾವಿದೆ ದಿ.ಎಸ್.ಮಾಲತಿ ಸಾಗರ ಅವರ ಬದುಕು ಸಾಕ್ಷಿಯಾಗಿದೆ. ಈ ಹಿಂದೆ (ಫೆ.5ರಂದು) ಸಭೆ ಸೇರಿದ್ದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್ ನೇತೃತ್ವದ ಆಯ್ಕೆ ಸಮಿತಿ, 2018ನೇ ಸಾಲಿನ “ಡಾ.ಗುಬ್ಬಿವೀರಣ್ಣ ಮತ್ತು “ಬಿ.ವಿ.ಕಾರಂತರ’ ಪ್ರಶಸ್ತಿಗೆ ರಂಗಭೂಮಿ ಸಾಧಕರ ಹೆಸರನ್ನು ಅಂತಿಮಗೊಳಿಸಿತ್ತು.
Related Articles
Advertisement
ಆದರೆ ಸರ್ಕಾರದ ನಡೆಗೆ ಪ್ರಶಸ್ತಿ ಆಯ್ಕೆ ಸಮಿತಿ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಶೇಖ್ ಮಾಸ್ತರ್, ಮಾಲತಿ ಅವರು ಬದುಕಿದ್ದಾಗಲೇ ಕಾರಂತ ಪ್ರಶಸ್ತಿಗೆ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ಪ್ರಶಸ್ತಿ ಘೋಷಣೆ ತಡವಾಗಿದೆ. ಇದಕ್ಕೆ ಸರ್ಕಾರ ನೇರ ಹೊಣೆ ಎಂದು ಹೇಳಿದರು.
ಹವ್ಯಾಸಿ ರಂಗಭೂಮಿ ಕ್ಷೇತ್ರಕ್ಕೆ ಮಾಲತಿ ಸಾಗರ ಅವರ ಕೊಡುಗೆ ಅಪಾರ. ರಂಗತಂಡಗಳನ್ನು ಕಟ್ಟಿ ಅವರು ರಂಗಸೇವೆ ಮಾಡಿದ್ದಾರೆ. ಆ ಹಿನ್ನೆಲೆಯಲ್ಲೇ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇದೊಂದು “ವಿಶೇಷ ಪ್ರಕರಣ’ಎಂದು ಸರ್ಕಾರ ಪರಿಗಣಿಸಿ ಮಾಲತಿ ಅವರಿಗೆ ಕಾರಂತ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ಮನವಿ ಸಲ್ಲಿಕೆ: ಮಾಲತಿ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ನೀಡದೇ ಇರುವುದಕ್ಕೆ ರಂಗಭೂಮಿ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ನೇತೃತ್ವದ ಹಿರಿಯ ರಂಗಕರ್ಮಿಗಳ ನಿಯೋಗ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದೆ.
ಸರ್ಕಾರದ ವಿಳಂಬ ನೀತಿಯಿಂದಾಗಿ ಮಾಲತಿ ಅವರಿಗೆ ಪ್ರಶಸ್ತಿ ಕೈತಪ್ಪಿಹೋಗಿದೆ. ಆ ಹಿನ್ನೆಲೆಯಲ್ಲಿ ಕಾರಂತರ ಪ್ರಶಸ್ತಿಗೆ ಮಾಲತಿ ಅವರನ್ನು ಪರಿಗಣಿಸಬೇಕೆಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಮಲ್ಲಿಕಾರ್ಜುನ ಕಾಡಕೋಳ ಆಗ್ರಹಿಸಿದ್ದಾರೆ.
ಆನಂದ ಪಟ್ಟಿದ್ದರು: ಕಾರಂತರ ಪ್ರಶಸ್ತಿಗೆ ಹೆಸರು ಅಂತಿಮಗೊಂಡಿರುವುದರಿಂದ ಅವರು ಖುಷಿಯಲ್ಲಿದ್ದರು. ನನ್ನ ಹೆಸರು ಕಾರಂತರ ಪ್ರಶಸ್ತಿಗೆ ಅಂತಿಮಗೊಂಡಿದೆಯಂತೆ ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಅವರು ಏ.1ರಂದು ಇಹಲೋಕ ತ್ಯಜಿಸಿದರು. ಹೀಗಾಗಿ ಪ್ರಶಸ್ತಿ ಸ್ವೀಕರಿಸುವ ಆ ಆಸೆ ಕನಸಾಗಿಯೇ ಉಳಿಯಿತು ಎಂದು ಮಾಲತಿ ಅವರ ಪತಿ ಪುರುಷೋತ್ತಮ ತಲವಾಟ ಬೇಸರ ವ್ಯಕ್ತಪಡಿಸಿದರು.
ಹಿರಿಯ ಹವ್ಯಾಸಿ ರಂಗಭೂಮಿ ಕಲಾವಿದೆ ದಿ.ಎಸ್.ಮಾಲತಿ ಸಾಗರ ಅವರಿಗೆ ಕಾರಂತರ ಪ್ರಶಸ್ತಿ ನೀಡಬೇಕೆಂದು ಹಿರಿಯ ರಂಗಕರ್ಮಿಗಳು ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.-ಕೆ.ಎಂ.ಜಾನಕಿ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ * ದೇವೇಶ ಸೂರಗುಪ್ಪ