Advertisement

ದೇವರಂತೆ ಬಂದ ಆಟೋ ಚಾಲಕ

06:00 PM Aug 12, 2019 | mahesh |

ಆಗ ನನಗೆ ಬೆಂಗಳೂರು ಯಾವ ದಿಕ್ಕಲ್ಲಿ ಇದೆ ಎಂಬುದೇ ಗೊತ್ತಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಬೆಂಗಳೂರು ಹೊಸತು. ಹಾಗಂತ ಬೆಂಗಳೂರಿಗೆ ಬರುವುದು ಕೌತುಕದ ವಿಚಾರಕ್ಕಿಂತ ಅನಿವಾರ್ಯವಾಗಿತ್ತು. ಏಕೆಂದರೆ, ಕೆಲಸಕ್ಕೂ ಮುನ್ನ ನನಗೆ ತರಬೇತಿ ತುಂಬಾ ಅವಶ್ಯಕವಾಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದೆ. ಆವತ್ತು ನಾನು ತರಬೇತಿ ಮುಗಿಸಿ ಆಫೀಸ್‌ ನಿಂದ ಹಾಸ್ಟೆಲ್‌ಗೆ ಹೊರಡುವಷ್ಟರಲ್ಲೇ ರಾತ್ರಿ 11 ಗಂಟೆಯಾಗಿತ್ತು. ಹೇಗೋ ಮಾಡಿ ಕಟ್ಟ ಕಡೆಯ ಮೆಟ್ರೋ ಹಿಡಿದು ಮೆಜೆಸ್ಟಿಕ್‌ ತಲುಪಿದೆ. ಆಮೇಲೆ ಹಾಸ್ಟೆಲ್‌ಗೆ ಬಸ್‌ ಮೂಲಕ ಹೋಗಬೇಕು ಅನ್ನೋದು ನನ್ನ ಯೋಜನೆ. ಆದರೆ ನಾನಿದ್ದ ಏರಿಯಾಕ್ಕೆ 9 ಗಂಟೆಗೇ ಕೊನೆ ಬಸ್‌ ಅಂತೆ. ಇದು ನನಗೊ ಗೊತ್ತಿಲ್ಲ.

Advertisement

ಮೆಜೆಸ್ಟಿಕ್‌ ಬಗ್ಗೆ ಗೆಳೆಯರಿಂದ ಪುಂಖಾನುಪುಂಖ ಕಥೆಗಳನ್ನು ಕೇಳಿದ್ದರಿಂದ, ಅಲ್ಲಿ ಯಾರ ಬಳಿಯೂ ಬಸ್‌ ಬಗ್ಗೆ ಮಾಹಿತಿ ಕೇಳಲು ಧೈರ್ಯ ಇರಲಿಲ್ಲ. ಸರತಿ ಸಾಲಿನಲ್ಲಿ ನಿಂತಿದ್ದ ಬಸ್‌ಗಳನ್ನು ನೋಡುತ್ತಾ, ಭಯದಿಂದ ಏದುಸಿರು ಬಿಡುತ್ತಾ, ಮುಂದೇನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿ ಆಳುತ್ತಾ ನಿಂತುಬಿಟ್ಟೆ. ದಿಕ್ಕೇ ತೋಚದಂತಾಯಿತು. ಆಟೋಗಳು ಕೂಡ ಕಣ್ಣಿಗೆ ಬೀಳುತ್ತಿರಲಿಲ್ಲ. ಕಾಲು ಗಂಟೆ ಸುಮ್ಮನೆ ನಿಂತೆ. ಆ ಕ್ಷಣಕ್ಕೆ, ಕಣ್ಣಿಗೆ ಕಾಣುವ ವ್ಯಕ್ತಿಗಳೆಲ್ಲರೂ ಕಳ್ಳರಂತೆ ಕಾಣುತ್ತಿದ್ದದ್ದು ಮಾತ್ರ ನಿಜ. ತಕ್ಷಣ ಒಂದು ಆಟೋ ನನ್ನ ಮುಂದೆ ಬಂದು ನಿಂತಿತು. ಡ್ರೈವರ್‌ ಮನೆಗೆ ಹೊರಟಿದ್ದರು ಅಂತ ಕಾಣುತ್ತೆ. ನನ್ನ ಪರಿಸ್ಥಿತಿ ಅರಿತು, ತಬ್ಬಿಬ್ಟಾಗಿ ನಿಂತಿದ್ದ ನನಗೆ ಧೈರ್ಯ ಹೇಳಿ, ಇನ್ನ ಮೇಲೆ, ಈ ರೀತಿ ತಡವಾಗಿ ಬರಬೇಡಿ ಎಂಬ ಕಿವಿಮಾತನ್ನು ಹೇಳಿ, ನನ್ನನ್ನು ಹಾಸ್ಟೆಲ್‌ಗೆ ಸುರಕ್ಷಿತವಾಗಿ ತಲುಪಿಸಿದರು. ಆ ಸಮಯದಲ್ಲಿ ನನಗೆ ಮಾತುಗಳೇ ಬರಲಿಲ್ಲ. ಅವರ ಮಾತುಗಳು ಮಾತ್ರ, ಪ್ರಯಾಣದುದ್ದಕ್ಕೂ ನನ್ನ ಕಿವಿಯ ಮೇಲೆ ಬಿಳುತ್ತಿದ್ದವು.

ದಿಕ್ಕು ತೋಚದ ನನಗೆ ದೇವರಂತೆ ಬಂದು ಸಹಾಯ ಮಾಡಿದ ಅವರಿಗೆ ಒಂದೇ ಒಂದು ಧನ್ಯವಾದ ಕೂಡ ಹೇಳಲಿಲ್ಲ. ಆ ದಿನ ನನಗಿದ್ದ ಭಯದಿಂದಾಗಿ, ಆ ಪುಣ್ಯಾತ್ಮ ಆಟೋ ಡ್ರೈವರ್‌ ಮುಖವೂ ನೆನಪಾಗುತ್ತಿಲ್ಲ.

ಭಾಗ್ಯಶ್ರೀ. ಎಸ್‌

Advertisement

Udayavani is now on Telegram. Click here to join our channel and stay updated with the latest news.

Next