ನಾಗಮಂಗಲ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲು ಅಧಿಕಾರಿಗಳೇ ನೇರ ಹೊಣೆಗಾರರು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಗಮಂಗಲ ತಾಲೂಕು ಬರಪೀಡಿತ ಎಂದು ಗುರುತಿಸಿಕೊಂಡಿದೆ. ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರ ಪರಿಣಾಮವೇ ಇಂದಿಗೂ ತಾಲೂಕಿನ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ದುಸ್ಥಿತಿ ತಲುಪಿದೆ ಎಂದು ಆರೋಪಿಸಿದರು.
ಸುಳ್ಳು ಮಾಹಿತಿ ನೀಡಬೇಡಿ: ಬೋರ್‌ವೆಲ್ನಲ್ಲಿ ನೀರು ಇಲ್ಲವೆಂದು ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡಿದ್ದರೂ ಇಲಾಖೆಯ ಅಧಿಕಾರಿಗಳು ಬೋರ್‌ವೆಲ್ನಲ್ಲಿ ನೀರು ಲಭ್ಯವಿದೆ ಎಂದು ವರದಿ ನೀಡಿದ್ದೀರಿ. ಆದರೆ, ಬೋರ್‌ವೆಲ್ನಲ್ಲಿ ನೀರಿಲ್ಲದೆ ಜನರು ಪರಿತಪಿಸುತ್ತಿರುವುದು ನಾನೇ ಖುದ್ದು ಭೇಟಿ ಮಾಡಿ ಪರಿಶೀಲಿಸಿದ್ದೇನೆ. ನೀವು ಕೊಟ್ಟ ಮಾಹಿತಿಯಿಂದ ಹೊಸ ಬೋರ್‌ವೆಲ್ಗೆ ಬಂದಿದ್ದ ಅನುದಾನ ಇಲ್ಲವಾಯಿತು. ಈ ರೀತಿ ಸುಳ್ಳು ನಡೆಯಿಂದ ಜನತೆ ಪ್ರತಿನಿತ್ಯ ಸಮಸ್ಯೆ ಎದುರಿಸಬೇಕಿದೆ ಎಂದು ಜೆಇ ವೇಣುಗೋಪಾಲ್ರನ್ನು ತರಾಟೆಗೆ ತೆಗೆದುಕೊಂಡರು.
ಟ್ಯಾಂಕರ್ ನೀರಿನಲ್ಲೂ ಅವ್ಯವಹಾರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಿ ಸುಮಾರು 3ರಿಂದ 4 ವರ್ಷಗಳೇ ಕಳೆಯುತ್ತಿದೆ. ಅವುಗಳಿಗೆ ಮೋಟಾರ್ ಅಳವಡಿಸಿಲ್ಲ. ಇಷ್ಟು ವರ್ಷಗಳವರೆಗೆ ನೀರು ಇರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಟ್ಯಾಂಕರ್ ನೀರು ಸರಬರಾಜಿನಲ್ಲಿ ಬಾರಿ ಅವ್ಯವಹಾರ ನಡೆಯುತ್ತಿದೆ. ಜಿಪಿಎಸ್ ಅಳವಡಿಕೆ ಕೇವಲ ನೆಪ ಮಾತ್ರಕ್ಕೆ ಅಷ್ಟೇ. ಈ ಇಲಾಖೆ ಅಧಿಕಾರಿಗಳು ಯಾವುದೋ ಒಂದು ಪಕ್ಷದ ಪರವಾಗಿ ಮತ್ತು ಕೆಲ ಮುಖಂಡರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದೇ ರೀತಿ ಮುಂದುವರಿದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಚ್ಛತೆಗೆ ಕ್ರಮ: ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ ಮಾತನಾಡಿ, ದೊಡ್ಡಬಾಲ, ಹೊಣಕೆರೆ, ಬಿಂಡಿಗನವಿಲೆ, ಲಾಳನಕೆರೆ, ಬೆಳ್ಳೂರು ವ್ಯಾಪ್ತಿಯಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಕಾರಣ ಅಶುಚಿತ್ವದಿಂದ ಸೊಳ್ಳೆ ಹೆಚ್ಚಳವಾಗುತ್ತಿದೆ. ಸ್ವಚ್ಛತೆ ಕುರಿತು ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಬೇಕಿದೆ. ಕೋಡಿಹೊಸೂರು, ಜಿನ್ನೇನಹಳ್ಳಿ ಪಾಳ್ಯ, ಅಣೆಚೆನ್ನಾಪುರ, ಗೋವಿಂದಘಟ್ಟ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳ ಲಾಗಿದೆ. ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಿದೆ ಮತ್ತು ಸ್ವತಃ ಮನಃ ಪರಿವರ್ತನೆಯಾಗಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ರೇಷ್ಮೆ ಇಲಾಖೆ ಕುರಿತು ಉಪನಿರ್ದೇಶಕ ಆರಾಧ್ಯ ಮಾಹಿತಿ ನೀಡಿದರು. ತಾಪಂ ಇಒ ಅನಂತರಾಜು, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಶಾಂತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ, ಮೀನುಗಾರಿಕೆ ಇಲಾಖೆ ಲೋಕೇಶ್ ಉಪಸ್ಥಿತರಿದ್ದರು.