ಬೆಂಗಳೂರು: ಆಪರೇಷನ್ ಕಮಲದ ಆಡಿಯೋ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರಕ್ಕೆ ಸೂಚಿಸಿರುವುದಕ್ಕೆ ಭಾರತೀಯ ಜನತಾ ಪಕ್ಷ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸೋಮವಾರ ಕಲಾಪದಲ್ಲಿ ಗಂಭೀರ ಚರ್ಚೆ ನಡೆದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರು, ವಿಶೇಷ ತನಿಖಾ ತಂಡದ ಮೂಲಕ 15 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದರು.
ಏತನ್ಮಧ್ಯೆ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ, ತಾವು ಈ ಬಗ್ಗೆ ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿಯ ಮಾಧುಸ್ವಾಮಿ ಮನವಿ ಮಾಡಿದ್ದರು. ಈ ವೇಳೆ ಕಲಾಪದಲ್ಲಿ ಗದ್ದಲ ಏರ್ಪಟ್ಟಿತ್ತು. ಸ್ಪೀಕರ್ ಅವರು ಮಧ್ಯಪ್ರವೇಶಿಸಿ, ಯಾವ ತನಿಖೆ ಆಗಬೇಕೆಂದು ನಾನು ಹೇಳಲು ಆಗುವುದಿಲ್ಲ. ನ್ಯಾಯಾಂಗ ತನಿಖೆಗೆ ಸುದೀರ್ಘ ಸಮಯ ಹಿಡಿಯುತ್ತದೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ಕೊಡಬೇಕು. ನಂತರ ಆ ವರದಿ ಬಗ್ಗೆ ಚರ್ಚಿಸಲು ಎಲ್ಲರಿಗೂ ಮುಕ್ತವಾದ ಅವಕಾಶ ಇದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ, ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು.
ಸರ್ಕಾರದ ತನಿಖೆಗೆ ಶಾಸಕರಾದ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇದು ಸಾಧ್ಯವಿಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು 3ಗಂಟೆವರೆಗೆ ಮುಂದೂಡಿದರು.