Advertisement
ಸದ್ಯಕ್ಕೆ ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ಸಮರ್ಥವಾಗಿ ಎದುರಿಸದೆ ಬೇರೆ ದಾರಿಯಿಲ್ಲ’ – ಹೀಗೆ ಹೇಳುತ್ತ ಮಾತಿಗಿಳಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್. ಪ್ರದರ್ಶಕರಾಗಿ, ಹಂಚಿಕೆದಾರರಾಗಿ ಕನ್ನಡ ಚಿತ್ರೋದ್ಯಮದಲ್ಲಿ ನಾಲ್ಕೈದು ದಶಕಗಳ ಅನುಭವ ಹೊಂದಿರುವ ಡಿ.ಆರ್ ಜೈರಾಜ್, ಕಳೆದ ವರ್ಷ ಪ್ರದರ್ಶಕರ ವಲಯದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದವರು.
Related Articles
Advertisement
ಸಮರ್ಥವಾಗಿ ಎದುರಿಸಬೇಕು: ಇನ್ನು ಕಳೆದ ನಾಲ್ಕೈದು ತಿಂಗಳಿನಿಂದ ಚಿತ್ರರಂಗದ ಮೇಲೆ ಕೋವಿಡ್ 19ದಿಂದಾಗಿರುವ ಸಂಕಷ್ಟದ ಬಗ್ಗೆ ಮಾತನಾಡಿರುವ ಜೈರಾಜ್, “ಅನಿರೀಕ್ಷಿತವಾಗಿ ಬಂದ ಕೋವಿಡ್ 19, ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಿದೆ. ನಿರ್ಮಾಪಕರು, ವಿತರಕರು, ಪ್ರದರ್ಶಕರು ಹೀಗೆ ಎಲ್ಲ ವಲಯದವರೂ ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಿತ್ರೋದ್ಯಮವನ್ನೇ ನಂಬಿಕೊಂಡ ಲಕ್ಷಾಂತರ ಜನರು ಕಂಗಾಲಾಗಿದ್ದಾರೆ. ಇಂಥ ಸಮಯದಲ್ಲಿ ವಾಣಿಜ್ಯ ಮಂಡಳಿ ಸಂಕಷ್ಟದಲ್ಲಿರುವ ಸದಸ್ಯರ ಸಹಾಯಕ್ಕೆ ನಿಂತಿದೆ.
ಲಾಕ್ ಡೌನ್ ವೇಳೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ನಿರ್ಮಾಪಕರಿಗೆ ಸುಮಾರು 15 ಸಾವಿರ ರೂ. ಧನ ಸಹಾಯ ಮಾಡಿದ್ದೇವೆ. ಕನ್ನಡ ಚಿತ್ರರಂಗ ಸದ್ಯದ ಮಟ್ಟಿಗೆ ಗಂಭೀರ ಸ್ಥಿತಿಯಲ್ಲಿದೆ. ಈ ವೇಳೆ ನಾವೆಲ್ಲರೂ ಒಟ್ಟಾಗಿ ಕೈ ಜೋಡಿ ಚಿತ್ರರಂಗವನ್ನು ಮುನ್ನಡೆಸಬೇಕು. ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಎಲ್ಲರೂ ಒಗ್ಗಟ್ಟಿನಿಂದ ಸಮರ್ಥವಾಗಿ ಎದುರಿಸದೆ ಬೇರೆ ದಾರಿಯಿಲ್ಲ’ ಎನ್ನುತ್ತಾರೆ.
ಪ್ರೇಕ್ಷಕ ಕೈ ಬಿಡಿವಿದಿಲ್ಲ: ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಹಾಗೆಯೇ ಎಲ್ಲವೂ ತಿಳಿಯಾಗುತ್ತದೆ ಎಂದು ಆಶಾವಾದದ ಮಾತನ್ನಾಡುವ ಡಿ ಆರ್ ಜೈರಾಜ್, ಈಗಿನ ಮಟ್ಟಿಗೆ ಹೇಳುವುದಾದ್ರೆ ಕೋವಿಡ್ 19 ನಿಯಂತ್ರಣಕ್ಕೆ ಬರಬೇಕು. ಈಗಾಗಲೇ ಸ್ಥಗಿತಗೊಂಡಿರುವ ಎಲ್ಲ ಕ್ಷೇತ್ರಗಳಲ್ಲೂ ಮತ್ತೆ ಚಟುವಟಿಕೆ ಶುರುವಾಗಬೇಕು. ಆಗ ಜನರು ಕೂಡ ನಿಧಾನವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ.
ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಚಿತ್ರರಂಗವನ್ನು ನಂಬಿಕೊಂಡ ವರನ್ನು ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಆದ್ರೆ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಅದು ಯಾವಾಗ ಆಗುತ್ತದೆ ಅನ್ನೋದನ್ನ ಈಗಲೇ ಹೇಳಲಾಗದು’ ಎನ್ನುತ್ತಾರೆ ಜೈರಾಜ್ ಇನ್ನು ಹಾಲಿ ಅಧ್ಯಕ್ಷ ಡಿ.ಆರ್ ಜೈರಾಜ್ ಅವರ ಅವಧಿ ಕೂಡ ಇದೇ ಜೂನ್ 30ಕ್ಕೆ ಅಂತ್ಯವಾಗಲಿದ್ದು, ವಾಣಿಜ್ಯ ಮಂಡಳಿ ಬೈಲಾದಂತೆ ಚುನಾವಣೆ ನಡೆದು ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಕೂಡ ನಡೆಯಬೇಕಿತ್ತು.
ಆದರೆ ಈ ಬಾರಿ ಕೋವಿಡ್ 19 ಕಾರಣದಿಂದ ವಾಣಿಜ್ಯ ಮಂಡಳಿ ಚುನಾವಣೆಗೂ ಬ್ರೇಕ್ ಬಿದ್ದಿದೆ. ಸರ್ಕಾರ ಈಗಾಗಲೆ ಪಂಚಾಯತ್ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಗೆ ಮುಂದೂಡಿ ಆದೇಶ ಹೊರಡಿಸಿರುವುದರಿಂದ, ವಾಣಿಜ್ಯ ಮಂಡಳಿ ಚುನಾವಣೆ ಕೂಡ ಮುಂದಿನ ಆದೇಶ ಬರುವವರೆಗೆ ಅನಿರ್ಧಿಷ್ಟವಧಿಗೆ ಮುಂದೂಡಲ್ಪಟ್ಟಿದೆ. ಹಾಗಾಗಿ ಸದ್ಯದ ಮಟ್ಟಿಗೆ ಡಿ.ಆರ್ ಜೈರಾಜ್ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
* ಕಾರ್ತಿಕ್