ಪ್ರಭಾಕರ ಜೋಗಿ, ರೇಷ್ಮಾ ಕಜೆ ಇವರು ರಾಗಬದ್ಧವಾಗಿ ಹಾಡುಗಳನ್ನು ಹೇಳಿಕೊಟ್ಟಿರುವುದು ಎಷ್ಟು ಮನದಟ್ಟಾಗಿತ್ತೆಂದರೆ ಆರು ವಯಸ್ಸಿನ ಹೆಣ್ಣುಮಗು ಸಂಸ್ಕೃತದ ಪ್ರಾರ್ಥನಾ ಗೀತೆಯನ್ನು ಸುಲಲಿತವಾಗಿ ಹಾಡಿ ತೋರಿಸಿದಳು. ವಸುಧಾ, ಹರ್ಷಿತಾ ಅವರು ಎರಡೇ ದಿನಗಳ ತರಬೇತಿ ನೀಡಿ ಹಲವು ಮಕ್ಕಳಿಂದ ಮಾಡಿಸಿದ ಸಮೂಹ ನೃತ್ಯಗಳು ಪ್ರಬುದ್ಧವಾಗಿದ್ದವು. ಒಂದೇ ತಂಡದ ಮಕ್ಕಳು ಬೇರೆ ಬೇರೆ ನೃತ್ಯಗಳನ್ನು ಅಳುಕಿಲ್ಲದೆ ಪ್ರದರ್ಶಿಸಿದರು. ಮೂಡಬಿದರೆಯಿಂದ ಬಂದಿದ್ದ ಅಕ್ಷಯ್ ಕಲಿಸಿದ್ದು ಹದ ಮಾಡಿದ ಜೇಡಿಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ಚಕಚಕನೆ ತಯಾರಿಸಬಲ್ಲ ಕೌಶಲವನ್ನು. ಇಲ್ಲಿ ಬಗೆಬಗೆಯ ಮಣ್ಣಿನ ವಿಗ್ರಹಗಳು, ಹಲವಾರು ಪರಿಕರಗಳನ್ನು ತಯಾರಿಸಿ ರಾಶಿ ಹಾಕಿದ ಮಕ್ಕಳಲ್ಲಿ ಕೆಲವರಾದರೂ ಈ ವರ್ಷ ಹಬ್ಬಗಳ ಸಾಲಿನಲ್ಲಿ ಗಣಪತಿಯನ್ನೋ ಶಾರದೆಯನ್ನೋ ತಯಾರಿಸಿ ಹಬ್ಬಕ್ಕೆ ಕಳೆ ನೀಡಿದರೆ ಅಚ್ಚರಿಯಿಲ್ಲ.
Advertisement
ಬಣ್ಣದ ಕಾಗದಗಳನ್ನು ಬಳಸಿ ನಾನಾ ಬಗೆಯ ಹೂ, ಮತ್ತಿತರ ವಸ್ತು ವಿಶೇಷಗಳನ್ನು ತಯಾರಿಸುವ ಕಲೆಯನ್ನೂ ಬೋಧಿಸಿದ್ದು ನಿಷ್ಣಾತ ಕೈಗಳು. ನಿವೃತ್ತ ಅಧ್ಯಾಪಕಿ ಶಾರದಾ ಎಸ್. ರಾವ್ ಮುಂಚೂಣಿಯಲ್ಲಿದ್ದರು. ಮುರಳಿಕೃಷ್ಣ, ಚೆನ್ನಕೇಶವ, ತಾರಾನಾಥ ಕೈರಂಗಳ, ಸುರೇಖಾ ಮೊದಲಾದವರು ಬೆರಳೆಣಿಕೆಯ ದಿನಗಳಲ್ಲಿ ಮಕ್ಕಳೊಳಗೆ ಹುದುಗಿದ್ದ ಕಲಾವಿದನನ್ನು ಹೊರ ತೆಗೆಯುವಲ್ಲಿ ಒಂದಿಲ್ಲೊಂದು ಕಲೆಯ ಗುಟ್ಟನ್ನು ಬಯಲಿಗಿಟ್ಟು ಗುರಿ ತಲುಪಿಸುವಲ್ಲಿ ಸಮರ್ಥರಾಗಿದ್ದರು. ಬೆಳಗ್ಗೆ ಒಂಭತ್ತರಿಂದ ಸಂಜೆ ನಾಲ್ಕೂವರೆಯ ತನಕ ನಡೆಯುತ್ತಿದ್ದ ಕಾರ್ಯಕ್ರಮವು ಯೋಗಾಭ್ಯಾಸದಿಂದಲೇ ಆರಂಭವಾಗುತ್ತಿದ್ದುದು ಯೋಗದಲ್ಲಿಯೂ ಮಕ್ಕಳಿಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ಸು ಪಡೆಯಿತು ಅನಿಸಿತು.