ದೇವನಹಳ್ಳಿ: ಕರಾಟೆ ಕಲೆಯೆಂಬುವುದು ಒಂದು ಅದ್ಭುತ ಶಕ್ತಿಯಾಗಿದೆ. ಆರೋಗ್ಯದ ಸಮತೋಲನ ಮತ್ತು ದೇಹ ಸದೃಢಕ್ಕೆ ಕರಾಟೆ ಕಲೆ ಸಹಕಾರಿ ಆಗಿದೆ ಎಂದು ಖೇಲ್ರತ್ನ ಪ್ರಶಸ್ತಿ ಪುರಸ್ಕೃತ ಸನ್ಸೈ ಮುರಳಿ ತಿಳಿಸಿದರು.
ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ದೈಹಿಕ ಶಿಕ್ಷಣ ಒಳಾಂಗಣ ಜಮಿನಾಸ್ಟಿಕ್ ಹಾಲ್ನಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಇಸ್ಕಾ ಚಾಂಪಿಯನ್ಶಿಪ್ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಸರಾಂತ ಕರಾಟೆ ಮಾಸ್ಟರ್ ಡಾ.ರೆನ್ಷಿ ಎನ್.ರಾಜು ಹಾಗೂ ಪೃಥ್ವಿ ಅವರ ಮಾರ್ಗದರ್ಶನದಿಂದ ದೇವನಹಳ್ಳಿ 18 ವಿದ್ಯಾರ್ಥಿಗಳ ಪೈಕಿ ಪಂದ್ಯಾವಳಿಯಲ್ಲಿ ಉತ್ತಮ ಕರಾಟೆ ಪ್ರದರ್ಶನ ನೀಡಿ ಬಹುಮಾನಗಳನ್ನು 13 ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಮುಖ್ಯವಾಗಿ 8 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದುಕೊಂಡಿರುವುದು ಸಂತಸವನ್ನು ತಂದುಕೊಟ್ಟಿದೆ ಎಂದರು.
ಯುವಪೀಳಿಗೆ ದುಶ್ಚಟಕ್ಕೆ ಬಲಿ: ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಹಲವಾರು ರೀತಿಯ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲಾ ಹಂತದಲ್ಲಿಯೇ ಆರೋಗ್ಯದ ಜಾಗೃತಿಯ ಜೊತೆಗೆ ಕರಾಟೆಯಂತಹ ಕ್ರೀಡಾ ಮನೋಭಾವವನ್ನು ಬೆಳೆಸಿದರೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಕ್ಷಿಯಾಗುತ್ತದೆ ಎಂದರು.
ಚಿನ್ನದ ಪದಕ ಪಡೆದಂತಹ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್, ಸಾಂಚಿನಿ, ಧವಂತ್, ಸೂರಜ್ಗೌಡ, ಶ್ರೇಯಸ್, ಸಾರನಾಥ್, ಭೂಮಿಕಾ, ಶರಣ್, ಬೆಳ್ಳಿ ಪದಕ ಪಡೆದಂತಹ ಕುಶಲಾ ಆರಾಧ್ಯ, ಅಮೂಲ್ಯ, ಪ್ರವೀಣ್, ಕಂಚಿನ ಪದಕ ಪಡೆದಂತಹ ವೆಂಕಟೇಶ್, ಹೇಮಂತ್ ಅವರನ್ನು ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.