Advertisement

ಬದುಕು ಬದಲಿಸಿದ ಕಲೆ

09:57 PM Feb 07, 2020 | mahesh |

ಮಡಿಕೆ ರೂಪಿಸುವುದು ಕಲೆಯಲ್ಲವೇ ಎಂದು ಕೇಳಿದರೆ ಹೌದು ಎನ್ನಬೇಕು. ಅದರಲ್ಲೂ ಕಲಾವಂತಿಕೆ
ಇದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಕುಂಬಾರಿಕೆಯಲ್ಲಿಯೇ ಯಶಸ್ಸಾಗಿರುವ ಹಿರಿಜೀವವನ್ನು ಪರಿಚಯಿಸಿದ್ದಾರೆ.

Advertisement

ನಮ್ಮ ನಾಗರಿಕತೆಯ ಕುರುಹುಗಳಲ್ಲಿ ಈ ಮಣ್ಣಿನ ಮಡಿಕೆಯ ಪಾತ್ರ ಅಗಾಧ. ಮಾನವನ ಸಂಸ್ಕೃತಿಯ ಹುಟ್ಟಿನೊಂದಿಗೆ ಬೆಳೆದು ಬಂದಿರುವ ಮಡಿಕೆ ತಯಾರಿಸುವ ಕೌಶಲ ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿದೆ. ಇದು ವಂಶವಾಹಿ ಕಲೆ ಎನ್ನಲೂಬಹುದು.

ಧಾವಂತದ ಬದುಕಿನ ಮಧ್ಯೆಯೂ 40 ವರ್ಷಗಳಿಂದ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ಕುಂಬಾರಿಕೆ ವೃತ್ತಿಯಲ್ಲಿಯೇ ತೊಡಗಿ ರುವವರು ಗಂಗೆ ಕುಲಾಲ್ತಿ (61) ಅವರು. ತೆರೆ ಮರೆಯಲ್ಲಿಯೇ ಇವರು ಗ್ರಾಮೀಣ ಕಲೆಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ.

ಬತ್ತದ ಉತ್ಸಾಹ
ಪತಿ ಲಚ್ಚು ಕುಲಾಲ್‌ ಜತೆ ಕುಂಬಾರಿಕೆ ವೃತ್ತಿಯನ್ನು ಕಲಿತು ಮಡಿಕೆ ಮಾಡಿ, ಮನೆ ಮನೆಗಳಿಗೆ ತೆರಳಿ ವ್ಯಾಪಾರ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಕುಂದಾಪುರ ಸಂತೆ, ಬಸ್ರೂರು ಸಂತೆ ಹಾಗೂ ಸಿದ್ದಾಪುರ ಸಂತೆಗಳಿಗೆೆ ತಮ್ಮ ಮಡಿಕೆಯ ವ್ಯಾಪಾರಕ್ಕಾಗಿ ತೆರಳುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಮಡಕೆಗೆ ಹೆಚ್ಚು ಬೇಡಿಕೆ ಇದೆ. ಸದಾ ಅತ್ಯುತ್ಸಾಹದಿಂದ ವೃತ್ತಿ ಬದುಕಿನಲ್ಲಿ ತೊಡಗಿರುವ ಅವರನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಪ್ರಸ್ತುತ ಹೊಂಬಾಡಿ ಗ್ರಾಮ ಪಂಚಾಯತ್‌ನ ಸದಸ್ಯರಾಗಿಯೂ ಜನಸೇವೆಯಲ್ಲಿ ತೊಡಗಿದ್ದಾರೆ ಇವರು.

ಸಾಂಪ್ರದಾಯಿಕ ಶೈಲಿ
ಹದ ಮಾಡಿದ ಆವೆ ಮಣ್ಣನ್ನು ಯಾವುದೇ ತಾಂತ್ರಿಕತೆ ಬಳಸದೇ ಸಾಂಪ್ರದಾಯಿಕ ಶೈಲಿಯಲ್ಲಿ ಮಣ್ಣಿನ ನೂರಾರು ವಿನ್ಯಾಸಗಳನ್ನು ರೂಪಿಸುತ್ತಾರೆ. ಕುಂದಾಪುರ ಕನ್ನಡದಲ್ಲಿ ಹೇಳುವಂತೆ ಸಗರಿ (ಹದ ಮಾಡಿದ ಮಣ್ಣನ್ನು ತಿರುಗಿಸುವ ಸಾಧನ) ಯಲ್ಲಿ ಮನೆಯವರ ಸಹಾ ಯದಿಂದ ರೂಪುಗೊಂಡ ಹಸಿ ಮಣ್ಣಿನ ಮಡಕೆ ಒಣಗಲು ಸುಮಾರು ಹದಿನೈದು ದಿನಗಳ ಕಾಲಾವ ಕಾಶ ಬೇಕು. ಒಣಗಿದ ಮಡಕೆ ಗಳನ್ನು ಕಟ್ಟಿಗೆಯಿಂದ ಸುಡಲು (ಅಗೆ ಕಟ್ಟುವುದು) ಸರಿ ಸುಮಾರು 24 ಗಂಟೆಗಳ ಕಾಲ ರಾತ್ರಿ ಹಗಲೆನ್ನದೆ ಶ್ರಮಿಸುತ್ತಾರೆ.

Advertisement

ಹೆಚ್ಚಿದ ಬೇಡಿಕೆ
ಗಂಗೆ ಕುಲಾಲ್ತಿ ಅವರ ಆವೆಮಣ್ಣಿ ನಿಂದ ರಚಿಸಿದ ವಿವಿಧ ವಿನ್ಯಾಸದ ಮಡಿಕೆ, ಅಳಿಗೆ, ಕೇಲ್‌, ಸುಣ್ಣದ ಕೊಡ, ಓಡ್‌ ದೋಸೆ ಹೆಂಚು, ಗುಂಡು ಅಳಿಗೆ, ಹೂವಿನ ಬಾಣೆ, ದೂಪದ ಗಡಿಗೆಗೂ ಬಹಳಷ್ಟು ಬೇಡಿಕೆ ಇದೆ.

ಸ್ಟೀಲ್‌ ಯುಗದಲ್ಲಿದ್ದೇವೆ ಈಗ. ಮತ್ತೆ ಮಣ್ಣಿನ ಯುಗಕ್ಕೆ ಬರಬೇಕಾದ ಕಾಲ ಸನ್ನಿಹಿತವಾಗುತ್ತಿದೆ. ಆರೋಗ್ಯದ ವಿಷ ಯದಲ್ಲಿ ಬನ್ನಿ, ವಾಪಸು ಹೋಗೋಣ ಎನ್ನುತ್ತಿದ್ದಾರೆ ಹಲವರು. ಸಾವಯವ ಆಹಾರ ಜನಪ್ರಿಯವಾಗುತ್ತಿದೆ. ದೇಸಿ ಬದುಕಿನ ಪದ್ಧತಿಯೂ ಜನಪ್ರಿಯವಾಗು ತ್ತಿದೆ. ಇದೇ ಪರಂಪರೆಗೆ ಹೊಂದಿಕೊಳ್ಳುವ ಮಡಕೆಯನ್ನೂ ನಾವು ಬೆಂಬಲಿಸಬೇಕು. ಅದೇ ನಮ್ಮ ಆರೋಗ್ಯದ ಗುಟ್ಟೂ ಸಹ.

ಈ ಮಡಿಕೆಗೆ ಭಾರೀ ಬೇಡಿಕೆ ಇದೆ. ಆದರೆ ಇದಕ್ಕೆ ಬೇಕಾಗುವ ಮೂಲ ವಸ್ತುಗಳಾದ ಆವೆಮಣ್ಣನ್ನು ವಕ್ವಾಡಿ ಗ್ರಾಮದಿಂದ ತರಬೇಕಿದ್ದು , ಮಣ್ಣಿನ ಬೆಲೆ ಕೂಡಾ ಗಗನಕ್ಕೆ ಏರಿದೆ . ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕವಾಗಿ ಗುಡಿಕೈಗಾರಿಕೆಯನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದ ಅದೆಷ್ಟೋ ಕುಂಬಾರ ಸಮುದಾಯದವರ ಕಲೆ ಆಧುನಿಕತೆಯ ಭರಾಟೆಗೆ ನಲುಗಿದೆ . ಇಂತಹ ನಶಿಸುತ್ತಿರುವ ಗ್ರಾಮೀಣ ಗುಡಿಕೈಗಾರಿಕೆಯ ಉಳಿವಿಗಾಗಿ ಯುವ ಸಮುದಾಯಗಳು ಮುಂದೆ ಬರಬೇಕು.
-ಗಂಗೆ ಕುಲಾಲ್ತಿ, ಮಣ್ಣಿನ ಮಡಿಕೆ ತಯಾರಕರು

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ.

Advertisement

Udayavani is now on Telegram. Click here to join our channel and stay updated with the latest news.

Next