ಬೆಂಗಳೂರು: ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡು ವಿಧಾನಸೌಧ ಆವರಣದಲ್ಲಿರುವ ಕಂದಾಯ ಇಲಾಖೆಯ ಮಹಿಳಾ ಅಧಿಕಾರಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪಿ ಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ವಿಕ್ರಂ ಗೋಪಾಲಸ್ವಾಮಿ ( 4 0 ) ಬಂಧಿತ.
ಕಂದಾಯ ಇಲಾಖೆಯಲ್ಲಿ ಅಕೌಂಟೆಂಟ್ ಆಗಿರುವ ಮಹಿಳೆ ಬಗ್ಗೆ ಆರೋಪಿ ನಿತ್ಯ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯ ವಿಚಾರಣೆಯಲ್ಲಿ ದೂರುದಾರ ಮಹಿಳಾ ಅಧಿಕಾರಿ ಈ ಹಿಂದೆ ನಾಗರಬಾವಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಆಕೆ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ. ಈ ಹಿನ್ನೆಲೆಯಲ್ಲಿ ಆಕೆಯನ್ನು ವಿಧಾನಸೌಧ ಆವರಣದಲ್ಲಿರುವ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಆರಂಭದಲ್ಲಿ ಒಂದೆರಡು ದಿನಗಳ ಕಾಲ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆರೋಪಿ, ಸಿಎಂ, ಕಂದಾಯ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಮಹಿಳೆ ಕರ್ತವ್ಯಕ್ಕೆ ಹಾಜರಾದರೆ? ಇಲ್ಲವೇ? ಯಾವಾಗ ಬಂದರು? ಎಂದೆಲ್ಲ ಪ್ರಶ್ನಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಆದರೆ, ದೂರಿನಲ್ಲಿ ಆರೋಪಿಸಿದಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಹೆಸರು ಹೇಳಿದ್ದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ. ವೈಯಕ್ತಿಕ ಕಾರಣಗಳಿಗೆ ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಹೇಳಲಾಗಿದೆ. ಇನ್ನು ಆರೋಪಿ ಹಲವು ದಿನಗಳಿಂದ ವಿಧಾನಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ ಸುತ್ತಾಟ ನಡೆಸಿದ್ದಾನೆ. ಹೀಗಾಗಿ ಕಂದಾಯ ಇಲಾಖೆ ಸ್ಥಿರ ದೂರವಾಣಿ ಮಾಹಿತಿ ಸಂಗ್ರಹಿಸಿದ್ದ. ಅಲ್ಲದೆ, ಈತ ನಿವೃತ್ತ ಅಧಿಕಾರಿ ಗೋಪಾಲಸ್ವಾಮಿ ಎಂಬವರ ಪುತ್ರ ಎಂದು ತಿಳಿದು ಬಂದಿದ್ದು, ತಂದೆ ಹೆಸರು ಬಳಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದರು.