Advertisement

ಚಿನ್ನ ಕದಿಯಲು ವಿಮಾನದಲ್ಲಿ ಬರುತ್ತಿದ್ದವನ ಬಂಧನ

12:23 PM Sep 17, 2018 | |

ಬೆಂಗಳೂರು: ವಿಮಾನದ ಮೂಲಕ ನಗರಕ್ಕೆ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ, ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳಿಗೂ ಚಳ್ಳೇಹಣ್ಣು ತಿನ್ನಿಸಿ ದೆಹಲಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಜೀವನ್‌ ಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಹರ್ಮಾನ್‌ ಖಾನ್‌ ಅಲಿಯಾಸ್‌ ಸೋನು (26) ಬಂಧಿತ ಆರೋಪಿ. ನಗರದ  ವಿವಿಧ ಭಾಗಗಳ ಫ್ಲ್ಯಾಟ್‌ಗಳಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಸೋನು ಬಂಧನದಿಂದ 20ಕ್ಕೂ ಹೆಚ್ಚು  ಪ್ರಕರಣಗಳು ಬೆಳಕಿಗೆ ಬಂದಿದ್ದು, 45 ಲಕ್ಷ ರೂ.ಗಳಿಗೂ ಅಧಿಕ  ಮೌಲ್ಯದ 2 ಕೆ.ಜಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ದೆಹಲಿಯ ಮೀನಾ ಬಜಾರ್‌ ನಿವಾಸಿಯಾದ ಸೋನು ಕಳೆದ ಐದು ವರ್ಷಗಳಿಂದ ನಗರದಲ್ಲಿ ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾನೆ. ವಿಮಾನ ಪ್ರಯಾಣದಲ್ಲಿ ನಗರಕ್ಕೆ ಆಗಮಿಸುತ್ತಿದ್ದ ಸೋನು ಪ್ರತಿಷ್ಠಿತ ಬಡವಾಣೆಗಳಲ್ಲಿರುವ ಬಾಡಿಗೆ ಮನೆಗಳಲ್ಲಿ  ಉಳಿದುಕೊಳ್ಳುತ್ತಿದ್ದ.

ಬಳಿಕ ಹಗಲಿನ ವೇಳೆ ನೋಟ್‌ಬುಕ್‌ವೊಂದನ್ನು ಕೈಯಲ್ಲಿಟ್ಟುಕೊಂಡು ಅಪಾರ್ಟ್‌ಮೆಂಟ್‌ಗಳ ಬೀಗ ಹಾಕಿದ ಫ್ಲ್ಯಾಟ್‌ಗಳ ಬಳಿ ತೆರಳಿ ಕಾಲಿಂಗ್‌ ಬೆಲ್‌ ಒತ್ತುತ್ತಿದ್ದ. ಮೂರ್‍ನಾಲ್ಕು ಬಾರಿ ಬೆಲ್‌ ಮಾಡಿದರೂ ಬಾಗಿಲು ತೆಗೆಯದಿದ್ದರೆ, ಮನೆಯ ಒಳಗಡೆ ಯಾರು ಇಲ್ಲ ಎಂದು ಖಚಿಪಡಿಸಿಕೊಂಡು ತನ್ನ ಸಹಚರರಿಗೆ ಮಾಹಿತಿ ನೀಡಿ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು.

ಒಂದು ವೇಳೆ ಯಾರಾದರೂ ಬಾಗಿಲು ತೆಗೆದರೆ ನೋಟ್‌ಬುಕ್‌ ಹಿಡಿದುಕೊಂಡು ವಿದ್ಯಾರ್ಥಿಯಂತೆ ನಟಿಸಿ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಆತ, ನೋಟ್‌ಬುಕ್‌ ಹಿಡಿದು ಒಡಾಡುತ್ತಿದ್ದರಿಂದ ಯಾರಿಗೂ ಅಷ್ಟಾಗಿ ಅನುಮಾನ ಬರುತ್ತಿರಲಿಲ್ಲ. 

Advertisement

ಚೋರ್‌ ಬಜಾರ್‌ನಲ್ಲಿ ಮಾರಾಟ!: ಕಳವು ಮಾಡಿದ ಆಭರಣಗಳಿಗೆಲ್ಲ ತಾನೇ ಖರೀದಿಸಿದ ಹಾಗೆ ನಕಲಿ ಬಿಲ್‌ಗ‌ಳನ್ನು ಸೃಷ್ಟಿಸುತ್ತಿದ್ದ ಆರೋಪಿ ಸೋನು, ಇದೇ ಬಿಲ್‌ಗ‌ಳನ್ನು ವಿಮಾನನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳಿಗೆ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದ.

ದೆಹಲಿ ತಲುಪಿದ ಕೂಡಲೇ ಅಲ್ಲಿ ತನ್ನ ಸಹಚರರ ಮೂಲಕ ಚೋರ್‌ ಬಜಾರ್‌ನಲ್ಲಿ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಿಂದ ಐಶಾರಾಮಿ ಜೀವನ ಸಾಗಿಸುತ್ತಿದ್ದ. ಒಮ್ಮೆ ಕಳವು ಮಾಡಿಕೊಂಡು ಹೋದ ಬಳಿಕ ಮತ್ತೆ ಕನಿಷ್ಠ ಎರಡು ತಿಂಗಳು ಬೆಂಗಳೂರಿನತ್ತ ಸುಳಿಯುತ್ತಿರಲಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಆರೋಪಿ ನಗರದಲ್ಲಿ ಉಳಿದುಕೊಳ್ಳುವಾಗ ನಕಲಿ ದಾಖಲೆಗಳನ್ನು ನೀಡಿ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿ ಬಳಕೆ ಮಾಡುತ್ತಿದ್ದ. ಇತ್ತೀಚೆಗೆ ಜೀವನ್‌ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಆತ ಬಳಸುತ್ತಿದ್ದ ಮೊಬೈಲ್‌ ನಂಬರ್‌ ಟವರ್‌ ಲೊಕೇಶನ್‌ ಆಧರಿಸಿ ದೆಹಲಿಗೆ ತೆರಳಿದ್ದ ತಂಡ, ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. 2014ರಲ್ಲಿ ಅಶೋಕ್‌ ನಗರ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಸೋನು, ಬಳಿಕ ಜಾಮೀನು ಪಡೆದು ಹೊರಗಡೆ ಬಂದು ಹಳೇ ಕಸುಬು ಮುಂದುವರಿಸಿದ್ದ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next