Advertisement

ಅಮಾಯಕನ ಹೊಡೆದು ಕೊಂದ 14 ಆರೋಪಿಗಳ ಬಂಧನ

11:53 AM May 25, 2018 | Team Udayavani |

ಬೆಂಗಳೂರು: ಚಾಮರಾಜಪೇಟೆಯ ಪೆನ್‌ಷನ್‌ ಮೊಹಲ್ಲಾದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ರಾಜಸ್ಥಾನ ಮೂಲದ ಕಾಲುರಾಮ್‌ನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಥಳಿಸಿ ಹತ್ಯೆಗೈದ ನಾಲ್ವರು ಮಹಿಳೆಯರು, ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ 14 ಮಂದಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಗೋಪಿ (18), ಅನ್‌ಬೂ (26), ವಸಂತ್‌ ಕುಮಾರ್‌ (32), ಬಾಲನ್‌ (30), ನಂದ (20), ತಿರುಮಲೇಶ್‌ (28), ರಾಜೇಶ್‌ (18), ಅನುಷಾ (30), ಸುಶೀಲಾ (37), ಇಂದಿರಾ (38) ವಾಣಿ (31) ಹಾಗೂ ಇಬ್ಬರು ಕಾನೂನು ಸಂಘರ್ಘ‌ಕ್ಕೊಳಗಾದರನ್ನು ಬಂಧಿಸಲಾಗಿದೆ. ಬ್ಯಾಟ್‌ನಿಂದ ಹಲ್ಲೆ ನಡೆಸಿದ ಕಿರಣ್‌ ಮತ್ತು ಅಪ್ಪು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.

ಹಾಗೇ ಪ್ರಕರಣ ಸಂಬಂಧ ಇನ್ನಷ್ಟು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಆರೋಪಿಗಳೆಲ್ಲರೂ ಫ್ಲವರ್‌ ಗಾರ್ಡ್‌ನ್‌, ಗಿರಿಪುರ, ಆನಂದಪುರ ನಿವಾಸಿಗಳು. ಆರೋಪಿಗಳ ವಿರುದ್ಧ ಇದುವರೆಗೂ ಯಾವುದೇ ಪ್ರಕರಣಗಳಿಲ್ಲ. ಕೃತ್ಯದ ವಿಡಿಯೋ ತುಣುಕುಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ಹೇಳಿದ್ದಾರೆ.

ಸತ್ತವ ಅಮಾಯಕ: ಹತ್ಯೆಯಾದ ರಾಜಸ್ಥಾನ ಮೂಲದ ಕಾಲುರಾಮ್‌ (26) ಈ ಮೊದಲು ಪುಣೆಯಲ್ಲಿ ಟೈಲ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದಷ್ಟೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾನೆ. ಗಡ್ಡ ಮೀಸೆ ಬಿಟ್ಟಿದ್ದ ಆತ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೆನ್‌ಷನ್‌ ಮೊಹಲ್ಲಾದ ಟೀ ಅಂಗಡಿ ಬಳಿ ಅತ್ತಿಂದಿತ್ತ ಓಡಾಡುತ್ತಿದ್ದ.

ಇದೇ ವೇಳೆ ಟೀ ಅಂಗಡಿಯಲ್ಲಿದ್ದ ಕೆಲವರು ಈತ ಮಕ್ಕಳ ಕಳ್ಳನಂತಿದ್ದಾನೆ ಎನ್ನುತ್ತಾ, ವಾಟ್ಸ್‌ಆ್ಯಪ್‌ನಲ್ಲಿ ಬಂದ ಫೋಟೋ ಜತೆ ಆತನ ಮುಖ ಹೋಲಿಕೆ ಮಾಡಲು ಮುಂದಾಗಿದ್ದಾರೆ. ಗಾಬರಿಗೊಂಡ ಕಾಲುರಾಮ್‌ ಓಡಿದ್ದಾನೆ. ಹಿಂಬಾಲಿಸಿದ ಸಾರ್ವಜನಿಕರು ಮಕ್ಕಳ ಕಳ್ಳ, ಹಿಡಿಯಿರಿ ಎಂದು ಕೂಗಿದ್ದಾರೆ. ನಂತರ ಚಿತ್ರಮಂದಿರ ಬಳಿ ಕಾಲುರಾಮ್‌ನನ್ನು ಸುತ್ತುವರಿದ ನೂರಾರು ಮಂದಿ, ಬ್ಯಾಟ್‌, ಕಬ್ಬಿಣ ರಾಡ್‌ನಿಂದ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದರು.

Advertisement

ನಾನು ಕಳ್ಳನಲ್ಲ: ಕನ್ನಡ ಭಾಷೆ ಬಾರದ  ಆತ “ಮೇ ಚೋರ್‌ ನಹೀ ಹೂ’ (ನಾನು ಕಳ್ಳನಲ್ಲ) ಎಂದು ಕೈ ಮುಗಿದು ಅಂಗಲಾಚಿದ್ದಾನೆ. ಆದರೆ, ಸಹನೆ ಕಳೆದುಕೊಂಡಿದ್ದ ಸಾರ್ವಜನಿಕರು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ ನಂತರವೂ, ಗುಂಪಿನಲ್ಲಿದ್ದ ಕೆಲವರು ಕಾಲುರಾಮ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೈಗೆ ಹಗ್ಗ ಕಟ್ಟಿ ಅಮಾನವೀಯವಾಗಿ ರಸ್ತೆಯಲ್ಲಿ ಎಳೆದಾಡಿದ್ದಾರೆ. ಕಾಲುರಾಮ್‌ ಮೇಲಿನ ಹಲ್ಲೆ ತಡೆಯಲು ಗುಂಪಿನಲ್ಲಿದ್ದ ಯಾರೊಬ್ಬರೂ ಪ್ರಯತ್ನಿಸಿಲ್ಲ.

ಅಪ್ಪ, ಅಮ್ಮನಿಲ್ಲದ ಕಾಲುರಾಮ್‌: ಕಾಲುರಾಮ್‌ ಬಳಿಯಿದ್ದ ಆಧಾರ್‌ ಕಾರ್ಡ್‌ನಿಂದ ಆತನ ಕುಟುಂಬ ಸದಸ್ಯರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಕೆಲಸ ಅರಸಿ ಬಂದ ಆತನಿಗೆ ಅಪ್ಪ, ಅಮ್ಮ ಬ್ಬರೂ ಇಲ್ಲ. ಈತನ ಸಹೋದರ ರಾಜಸ್ಥಾನದಲ್ಲಿರುವ ಚಿಕ್ಕಪ್ಪನ ಜತೆ ವಾಸವಿದ್ದಾನೆ. ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಬೆಂಗಳೂರಿಗೆ ಬರಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆ ಮುಂದೆ ಪ್ರತಿಭಟನೆ: ಇದೇ ವೇಳೆ 14 ಮಂದಿಯ ಬಂಧನ ಪ್ರಶ್ನಿಸಿ ನೂರಾರು ಮಂದಿ ಚಾಮರಾಜಪೇಟೆ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಂಧನಕ್ಕೊಳಗಾದ ವ್ಯಕ್ತಿಗಳು ಅಮಾಯಕರು. ಕಾಲುರಾಮ್‌ ಮೇಲೆ ಹಲ್ಲೆ ನಡೆಸಿಲ್ಲ. ಅಲ್ಲದೆ ಕೆಲವರನ್ನು ವಶಕ್ಕೆ ಪಡೆದು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರಿಗೆ ವಿಡಿಯೋ ತೋರಿಸಿ, ಈ ಆಧಾರದ ಮೇಲೆ ಬಂಧಿಸಲಾಗಿದೆ. ಅನಗತ್ಯವಾಗಿ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಗುಂಪು ಚದುರಿಸಿದರು.

ಕೆ.ಜಿ.ಹಳ್ಳಿಯಲ್ಲೂ ಘಟನೆ: ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ರಂಜಾನ್‌ ಪ್ರಯುಕ್ತ ದಾನ ಪಡೆಯಲು ಬಂದಿದ್ದ ಜಮ್ಮು-ಕಾಶ್ಮೀರದ ಯುವಕನ ಮೇಲೆ ಉದ್ರಿಕ್ತರ ಗುಂಪೊಂದು ಹಲ್ಲೆ ನಡಸಿತ್ತು. ಘಟನೆಯಲ್ಲಿ ನೂರ್‌ ಅಹ್ಮದ್‌ (26) ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಬಾಗಲೂರು ಲೇಔಟ್‌ನಲ್ಲಿ ಶ್ರೀಮಂತರ ಮನೆಗಳಿಗೆ ಹೋಗಿ ದಾನ ಪಡೆಯುತ್ತಿದ್ದ ನೂರ್‌ ಅಹ್ಮದ್‌ನನ್ನು ಕಂಡ ಕೆಲವರು ಮಕ್ಕಳ ಕಳ್ಳ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳೀಯರು ನೂರ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next