ಉಡುಪಿ: ಚುನಾವಣೆಯ ಪ್ರಚಾರದ ಅಂತಿಮ ದಿನವಾದ ಮಂಗಳ ವಾರ ಅಭ್ಯರ್ಥಿಗಳು ಯಾವುದೇ ಅಬ್ಬರವಿಲ್ಲದೆ ಮನೆ ಮನೆಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಕೊನೆಯ ಪ್ರಯತ್ನವನ್ನು ಮಾಡಿದರು.
ಹಲವು ದಿನಗಳಿಂದ ಅಬ್ಬರಿಸುತ್ತಿದ್ದ ಚುನಾವಣೆ ಪ್ರಚಾರದ ಸದ್ದು ಮೇ 9ಕ್ಕೆ ಕಡಿಮೆಯಾಗಿದ್ದು, ಮತ ದಾನದ ಸದ್ದು ಜೋರಾ ಗಿದೆ. ಮತದಾನ ಪ್ರಮಾಣದಲ್ಲಿ ಎಷ್ಟು ಏರಿಕೆಯಾಗಲಿದೆ ಎಂಬುದನ್ನು ಕಾದು ನೋಡ ಬೇಕಿದೆ.
ಸೋಮವಾರ ಸಂಜೆ 6 ರ ಬಳಿಕ ಬಹಿರಂಗ ಪ್ರಚಾರ ಅಂತ್ಯವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆ ಭೇಟಿ, ಪಕ್ಷದ ಹಿರಿಯರು, ವಿವಿಧ ಸಮುದಾಯದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.
ಮಂಗಳವಾರ ಬೆಳಗ್ಗೆಯಿಂದಲೇ ಕ್ಷೇತ್ರದ ವಿವಿಧ ಬೂತ್‌ಗಳಿಗೆ ತೆರಳಿ ಸ್ಥಳೀಯ ಕಾರ್ಯ ಕರ್ತರೊಂದಿಗೆ ಕೆಲವು ಮನೆಗಳಿಗೆ ಭೇಟಿ ನೀಡಿದರು.
ಜಿಲ್ಲೆಯ ಬೈಂದೂರಿನಲ್ಲಿ 9, ಕುಂದಾಪುರದಲ್ಲಿ 5, ಉಡುಪಿಯಲ್ಲಿ 7, ಕಾಪುವಿನಲ್ಲಿ 5 ಹಾಗೂ ಕಾರ್ಕಳದಲ್ಲಿ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲರ ಭವಿಷ್ಯವೂ ಮೇ 10ರಂದು ಮತದ ಯಂತ್ರದಲ್ಲಿ ದಾಖಲಾಗಲಿದೆ. ನಾಮಪತ್ರ ಸಲ್ಲಿಸಿದ ದಿನದಿಂದ ಪ್ರಚಾರ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದ ಅಭ್ಯರ್ಥಿಗಳು ಮೇ 10ರ ಸಂಜೆ 6 ಗಂಟೆ ಅನಂತರ ವಿರಾಮ.
Related Articles
ಆದರೆ, ಮೇ 13ರಂದು ಫಲಿ ತಾಂಶ ಇರುವುದರಿಂದ ಅಲ್ಲಿಯ ವರೆಗೂ ಒಂದು ರೀತಿಯ ಆತಂಕ, ದುಗುಡ ಇದ್ದದ್ದೇ.
ಬಿಜೆಪಿ ಮತ್ತು ಕಾಂಗ್ರೆಸ್ ನ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಪ್ರಕ್ರಿಯೆಯಲ್ಲಿ ಅಬ್ಬರಿಸಿದ್ದರು. ಜೆಡಿಎಸ್ ಸಹ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ ರಾಜ್ಯ ನಾಯಕರು ಪ್ರಚಾರಕ್ಕೆ ಬಂದಿರಲಿಲ್ಲ. ಅಭ್ಯರ್ಥಿಗಳು ತಮ್ಮ ನೆಲೆಯಲ್ಲೇ ಪ್ರಚಾರ ಪ್ರಕ್ರಿಯೆ ಪೂರೈಸಿದ್ದಾರೆ. ಎಸ್‌ಡಿಪಿಐ, ಎಎಪಿ ಸಹಿತವಾಗಿ ವಿವಿಧ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳೂ ತಣ್ಣಗೆ ಪ್ರಚಾರ ಪೂರ್ಣಗೊಳಿಸಿದ್ದಾರೆ.
ಅಭ್ಯರ್ಥಿಗಳ ಸಂಚಾರ
ಅಭ್ಯರ್ಥಿಗಳು ಮತದಾನದ ದಿನ ದಂದು ಕೆಲವು ಬೂತ್‌ಗಳಿಗೆ ಭೇಟಿ ನೀಡುವ ಪರಿಪಾಠವಿದೆ. ಆದರೆ, ಮತಗಟ್ಟೆಗೆ ಅಭ್ಯರ್ಥಿಗಳಿಗೆ ಪ್ರವೇಶ ಇರದು. ಈ ವೇಳೆ ಕೆಲವೊಮ್ಮೆ ಪಕ್ಷದ ಕಾರ್ಯಕರ್ತರು ನಡುವೆ ವಾಗ್ವಾದಗಳು ಘಟಿಸುವುದೂ ಉಂಟು. ಇವುಗಳನ್ನೆಲ್ಲ ತಪ್ಪಿಸಲು ಜಿಲ್ಲಾ ಡಳಿತವು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ.
ಕೊಡಗು: 24 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ 24 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಭರ್ಜರಿ ಪ್ರಚಾರ, ರೋಡ್ ಶೋ, ಮನೆ ಮನೆಗಲ್ಲಿ ಮತಯಾಚನೆ ಮಾಡಿರುವ ಮಡಿಕೇರಿಯ 15 ಹಾಗೂ ವೀರಾಜಪೇಟೆ ಕ್ಷೇತ್ರದ 9 ಅಭ್ಯರ್ಥಿಗಳು ಮತದಾರರ ಒಲವಿನ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಂ.ಪಿ. ಅಪ್ಪಚ್ಚು ರಂಜನ್, ಕಾಂಗ್ರೆಸ್‌ನಿಂದ ಡಾ| ಮಂತರ್ ಗೌಡ, ಜೆಡಿಎಸ್‌ನ ನಾಪಂಡ ಮುತ್ತಪ್ಪ ಸ್ಪರ್ಧೆಯಲ್ಲಿದ್ದಾರೆ. ಇವರಲ್ಲದೇ ಇತರೆ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ 12 ಮಂದಿ ಕಣದಲ್ಲಿದ್ದಾರೆ.
ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಯ ಕೆ.ಜಿ. ಬೋಪಯ್ಯ, ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ, ಜೆಡಿಎಸ್‌ನಮನ್ಸೂರ್ ಆಲಿ ಎಂ.ಎ ಅವರೊಂದಿಗೆ 6 ಮಂಇ ಇತರೆ ಪಕ್ಷಗಳು ಹಾಗೂ ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಇನ್ನಿತರ ಪಕ್ಷಗಳು, ಪಕ್ಷೇತರರು ತಮ್ಮ ಇತಿ ಮಿತಿಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿ ಗಮನ ಸೆಳೆೆದಿದ್ದಾರೆ. ಇದರ ಜತೆ ಯಲ್ಲೇ ಆರೋಪ ಪ್ರತ್ಯಾರೋಪಗಳ ಕಿಡಿ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಚುನಾವಣ ಬಹಿರಂಗ ಪ್ರಚಾರದ ಅಂತ್ಯದವರೆಗೂ ನಡೆದುದನ್ನು ಎಲ್ಲರೂ ಗಮನಿಸಿದ್ದಾರೆ. ಮತ ದಾರನ ಮನ ಗೆಲ್ಲುವ ಎಲ್ಲ ಪ್ರಯತ್ನಗಳು ಎಲ್ಲ ಪಕ್ಷಗಳು, ಪಕ್ಷೇತರರಿಂದ ನಡೆದಿದೆ. ಇದೀಗ ಮತದಾರ ಪ್ರಭು ಮೇ 10ರಂದು ಮತದಾನದ ಮೂಲಕ ತನ್ನ ಅಂತಿಮ ಅಂಕಿತ ಹಾಕಲಿದ್ದು, ಗೆಲುವು ಸೋಲಿನ ಚಿತ್ರಣ ಮೇ 13ರಂದು ಮಧ್ಯಾಹ್ನದ ಒಳಗಾಗಿ ಸ್ಪಷ್ಟಗೊಳ್ಳುವ ಸಾಧ್ಯತೆಗಳಿವೆ.
ಕೊಡಗು: ಮತದಾನ ಮಾಡಿದವರಿಗೆ
ಮಾತ್ರ ಪ್ರವಾಸಿ ತಾಣಗಳಿಗೆ ಪ್ರವೇಶ
ಮಡಿಕೇರಿ: ವಿಧಾನಸಭೆಗೆ ಬುಧವಾರ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಮಾತ್ರ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ಪ್ರವೇಶ ನೀಡಲಾಗುವುದು. ನಗರದ ರಾಜಾಸೀಟು, ಸನ್ನಿ ಸೈಡ್ ಮ್ಯೂಸಿಯಂ, ಅಬ್ಬಿ ಫಾಲ್ಸ್, ಮಲ್ಲಳ್ಳಿ ಫಾಲ್ಸ್ ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಮಕ್ಕಳು ಹಾಗೂ ಹೊರ ರಾಜ್ಯದ ಪ್ರವಾಸಿಗರನ್ನು ಹೊರತು ಪಡಿಸಿ, ಮತದಾನ ಮಾಡಿರುವವರಿಗೆ ಮಾತ್ರ ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಕೊಡಗು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.