ವಿಧಾನಪರಿಷತ್ತು: ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ ವೈದ್ಯರಿಗೆ ಕಂದಾಯ ವಿಭಾಗವಾರು ಪ್ರಾತಿನಿಧ್ಯ ದೊರಕಿಸುವ ಹಾಗೂ ವೃತ್ತಿನಿರತ ವೈದ್ಯರು ಪ್ರತಿ ಐದು ವರ್ಷಕ್ಕೊಮ್ಮೆ ನೋಂದಣಿ ನವೀಕರಿಸಿಕೊಳ್ಳುವುದು ಕಡ್ಡಾಯಗೊಳಿಸುವ “ಕರ್ನಾಟಕ ವೈದ್ಯಕೀಯ ನೋಂದಣಿ (ತಿದ್ದುಪಡಿ) ವಿಧೇಯಕ-2017ಕ್ಕೆ ಮೇಲ್ಮನೆಯಲ್ಲಿ ಧ್ವನಿಮತದ ಅನುಮೋದನೆ ದೊರಕಿತು.
ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಂಡಿಸಿದರು. ಸುದೀರ್ಘ ಚರ್ಚೆ ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಸದನದ ಒಪ್ಪಿಗೆ ನೀಡಲಾಯಿತು.
ತಿದ್ದುಪಡಿ ವಿಧೇಯಕದ ಪ್ರಕಾರ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ಚುನಾವಣೆ ಮತ್ತು ನಾಮನಿರ್ದೇಶದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ತಲಾ ಒಬ್ಬರಂತೆ ಚುನಾಯಿಸುವುದು ಹಾಗೂ ಪ್ರತಿ ಕಂದಾಯ ವಿಭಾಗಕ್ಕೆ ಒಬ್ಬರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವುದು ಕಡ್ಡಾಯವಾಗಲಿದೆ.
ಅಲ್ಲದೇ, ವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿ ಮಾಡಿಸಿಕೊಂಡ ಪ್ರತಿಯೊಬ್ಬ ವೃತ್ತಿನಿರತ ವೈದ್ಯ ಪ್ರತಿ ಐದು ವರ್ಷಕ್ಕೊಮ್ಮೆ ನೋಂದಣಿಯನ್ನು ನವೀಕರಿಸಿಕೊಳ್ಳಬೇಕು. ಅದಕ್ಕಾಗಿ ಎಂಬಿಬಿಎಸ್ ವೈದ್ಯರು ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಆರು “ಪ್ರಶಂಸಾರ್ಹ ಗಂಟೆಗಳಂತೆ’ (ಕ್ರೆಡಿಟ್ ಅವರ್ಸ್) ಐದು ವರ್ಷಗಳಲ್ಲಿ 30 ಕ್ರೆಡಿಟ್ ಅವರ್ಸ್‌ಗಳ ಕಾಲ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ನಡೆಯುವ ಕರ್ನಾಟಕ ವೈದ್ಯಕೀಯ ಪರಿಷತ್ತು ಅನುಮೋದಿಸಿದ ಯಾವುದೇ ವೈದ್ಯಕೀಯ ಸಮ್ಮೇಳನ, ವಿಚಾರಸಂಕಿರಣ, ಕಾರ್ಯಾಗಾರ ಅಥವಾ ಮುಂದುವರಿಕೆ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿರಬೇಕು. ವೈದ್ಯರು ಭಾಗವಹಿಸಿದ್ದರ ಬಗ್ಗೆ ಸಾಕ್ಷಿ-ಪುರಾವೆ ಸಮೇತ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದರೆ, ನೋಂದಣಿ ನವೀಕರಿಸಲಾಗುತ್ತದೆ. ಇಲ್ಲದಿದ್ದರೆ ನೋಂದಣಿ ರದ್ದುಗೊಳಿಸಲಾಗುತ್ತದೆ. ಕಾರ್ಯಕ್ರಮಗಳಲ್ಲಿ ಹಾಜರಾಗಿದ್ದಕ್ಕೆ ಒಳಪಟ್ಟು, ನೋಂದಣಿ ನವೀಕರಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿವರಣೆ ನೀಡಿದರು.
ಈ ಹಿಂದೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಚುನಾವಣೆ ಅಥವಾ ರಾಜ್ಯ ಸರ್ಕಾರದ ನಾಮನಿರ್ದೇಶನಗಳಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ ಸಿಗುತ್ತಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಪ್ರಾತಿನಿಧ್ಯ ದೊರಕಿಸಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ಈಗಿನ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದೆ. ಚಿಕಿತ್ಸಾ ವಿಧಾನಗಳಲ್ಲಿ ಬಹಳಷ್ಟು ಬದಲಾವಣೆಗಳು ಬಂದಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಎಂಬಿಬಿಎಸ್ ವೈದ್ಯರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ಅವಶಕ್ಯತೆ ಇದೆ. ಅದಕ್ಕಾಗಿ ನೋಂದಣಿ ನವೀಕರಣಕ್ಕೆ ವೈದ್ಯಕೀಯ ಸಮ್ಮೇಳನ, ವಿಚಾರಸಂಕಿರಣ, ಕಾರ್ಯಾಗಾರ ಮತ್ತು ಸಿಎಂಇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಶರತ್ತು ಇಡಲಾಗಿದೆ. 65 ವರ್ಷ ಮಿರೀದ ವೈದ್ಯರು, ಆಡಳಿತಾತ್ಮಕ ಜವಾಬ್ದಾರಿ ನಿರ್ವಹಿಸುವವರು ಅಥವಾ ಸಾರ್ವಜನಿಕ (ರಾಜಕೀಯ) ಜೀವನ ಪ್ರವೇಶಿಸುವ ವೈದ್ಯರನ್ನು ಇದರಲ್ಲಿ ವಿನಾಯ್ತಿ ಕೊಡಲಾಗಿದೆ ಎಂದು ಸಚಿವರು ವಿಧೇಯಕವನ್ನು ಸಮರ್ಥಿಸಿಕೊಂಡರು.