Advertisement

ಪತಿ ಜತೆಗಿದ್ದ ಅಪ್ರಾಪ್ತೆ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ

12:45 AM May 01, 2019 | Lakshmi GovindaRaj |

ಬೆಂಗಳೂರು: ಉತ್ತರ ಪ್ರದೇಶಕ್ಕೆ ತೆರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಪ್ರಿಯಕರನನ್ನು ಮದುವೆಯಾಗಿದ್ದ ನಗರದ ಮುಸ್ಲಿಂ ಅಪ್ರಾಪ್ತೆಯಳನ್ನು ಹೈಕೋರ್ಟ್‌ ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿ ಎಂದು ಆದೇಶಿಸಿತು.

Advertisement

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ತನ್ನ ಪತಿಯೊಂದಿಗೆ ವಾಸವಾಗಿದ್ದ ಅಪ್ರಾಪ್ತೆಯಳನ್ನು ನಗರದ ಕಾಡುಗೋಡಿ ಠಾಣಾ ಪೊಲೀಸರು ಏ.29ರಂದು ಹೈಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಆರ್‌. ದೇವದಾಸ್‌ ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠ, ಅಪ್ರಾಪ್ತೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಅರ್ಜಿ ಇತ್ಯರ್ಥಪಡಿಸಿತು.

ನ್ಯಾಯಾಲಯದ ಮುಂದೆ ಹಾಜರಾದ ಅಪ್ರಾಪ್ತೆ, ತಾನು ಪೋಷಕರೊಂದಿಗೆ ತೆರಳಲು ಸಿದ್ಧಳಿದ್ದೇನೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಮಧ್ಯೆ ಸಂತ್ರಸ್ತೆಗೆ ಇನ್ನೂ 15 ವರ್ಷ ವಯಸ್ಸು ಆದ್ದರಿಂದ ಈ ಪ್ರಕರಣದಲ್ಲಿ ಬಾಲ ನ್ಯಾಯ ಕಾಯ್ದೆ (ಮಕ್ಕಳ ಪೋಷಣೆ ಮತ್ತು ರಕ್ಷಣೆ) 2015ರ ನಿಯಮಗಳನ್ನು ಪಾಲಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಬಾಲ ನ್ಯಾಯ ಕಾಯ್ದೆಯ ನಿಯಮಗಳು ಪಾಲನೆಯಾದ ಬಳಿಕ ಪ್ರಕರಣದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂತ್ರಸ್ತೆಯನ್ನು ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿತು. ಇದೇ ವೇಳೆ ಅಪ್ರಾಪ್ತೆ ಗರ್ಭೀಣಿಯಾಗಿರುವುದರಿಂದ ಆಕೆ ಮತ್ತು ಆಕೆಯ ಗರ್ಭದಲ್ಲಿರುವ ಭ್ರೂಣದ ರಕ್ಷಣೆ ಅತ್ಯಂತ ಮುಖ್ಯ. ಅಲ್ಲದೇ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ನಗರದಲ್ಲಿ ನೆಲೆಸಿದ್ದ ಮುಸ್ಲಿಂ ಅಪ್ರಾಪ್ತೆ, 2019ರ ಫೆಬ್ರವರಿಯಲ್ಲಿ ತಾನು ಪ್ರೀತಿಸುತ್ತಿದ್ದ ಹಿಂದು ಯುವಕನನ್ನು ಹುಡುಕಿಕೊಂಡು ಒಬ್ಬಂಟಿಯಾಗಿ ಉತ್ತರ ಪ್ರದೇಶದ ಬರೇಲಿಗೆ ತೆರಳಿದ್ದಳು. ಅಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಪ್ರಿಯಕರನನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಳು.

Advertisement

ಈ ಮಧ್ಯೆ ಆಕೆಯ ತಂದೆ ರಾಜ್ಯ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿ, ತನ್ನ ಮಗಳು ಅಪ್ರಾಪ್ತಳು. ಆಕೆಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಡಲಾಗಿದೆ. ಈ ಸಂಬಂಧ ಕಾಡುಗೋಡಿ ಠಾಣೆಗೆ ದೂರು ನೀಡಲಾಗಿದ್ದು, ತನ್ನ ಮಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಈ ಮಧ್ಯೆ ಅರ್ಜಿದಾರನ ಪುತ್ರಿ ಶಾಂತಿಯುತವಾಗಿ ದಾಂಪತ್ಯ ಜೀವನ ಸಾಗಿಸುವುದಕ್ಕೆ ಯಾರೂ ಭಂಗ ಉಂಟು ಮಾಡಬಾರದು ಎಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಹೀಗಾಗಿ ಬಳಿಕ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಸಂತ್ರಸ್ತೆಯ ತಂದೆಗೆ ರಾಜ್ಯ ಹೈಕೋರ್ಟ್‌ ಸೂಚಿಸಿತ್ತು.

ಬರೇಲಿಗೆ ತೆರಳಿದ್ದ ಪೊಲೀಸರು: ಸಂತ್ರಸ್ತೆ ಪತ್ತೆಗೆ ಆಕೆಯ ಪ್ರಿಯಕರನ ಮೊಬೈಲ್‌ ಕರೆ ಆಧರಿಸಿ ಕಾಡುಗೋಡಿ ಪೊಲೀಸರು ಉತ್ತರ ಪ್ರದೇಶ ಬರೇಲಿ ಜಿಲ್ಲೆಗೆ ಹೋಗಿದ್ದರು. ಆದರೆ, ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಸಂತ್ರಸ್ಥಳ ಪತ್ತೆಗೆ ಸಹಕರಿಸುತ್ತಿಲ್ಲ ಎಂದು ಇಲ್ಲಿನ ಪೊಲೀಸರು ಹೈಕೋರ್ಟ್‌ ಗಮನಕ್ಕೆ ತಂದಿದ್ದರು.

ಏ.24ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸಂತ್ರಸ್ತೆಯನ್ನು ಪತ್ತೆ ಹಚ್ಚಲು ಬೆಂಗಳೂರು ಪೊಲೀಸರಿಗೆ ಅಗತ್ಯ ನೆರವು ನೀಡುವಂತೆ ಬರೇಲಿ ಜಿಲ್ಲಾ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸಿತ್ತು. ಹೀಗಾಗಿ, ಕಾಡುಗೋಡಿ ಪೊಲೀಸರು, ಬರೇಲಿ ಪೊಲೀಸರ ನೆರವೊಂದಿಗೆ ಕಾರ್ಯಚರಣೆ ನಡೆಸಿ ಸಂತ್ರಸ್ತೆಯನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದು ಹೈಕೋರ್ಟ್‌ ಮುಂದೆ ಹಾಜರುಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next