Advertisement

ಜನ ವಿರೋಧಿ ನೀತಿಯೇ ಕೇಂದ್ರ ಸರಕಾರದ ಸಾಧನೆ

05:26 PM Mar 29, 2019 | Team Udayavani |

ಶಹಾಪುರ: ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ತನ್ನ ಐದು ವರ್ಷದ ಆಡಳಿತದಲ್ಲಿ ಜನ ವಿರೋಧಿ ನೀತಿಯನ್ನೇ ಸಾಧನೆಗಳನ್ನಾಗಿ ಮಾಡಿಕೊಂಡಿದೆ. ಇದರಿಂದ ದೇಶದ ಜನ ಬೇಸತ್ತಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ನಗರ ಸಮೀಪದ ದಿಗ್ಗಿ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಯಲ್ಲಿ ಅವರು ಮಾತನಾಡಿದರು. ರಾಜ್ಯಕ್ಕೆ ಒದಗಿಸಬೇಕಿದ್ದ ಹಣಕಾಸು ಯೋಜನಾ ಸವಲತ್ತು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಲ್ಲದೆ ನೋಟ್‌ ಬ್ಯಾನ್‌ ಮಾಡುವ ಮೂಲಕ ದೇಶದ ಬಂಡವಾಳಶಾಹಿ ವರ್ಗಕ್ಕೆ ಮಣೆ ಹಾಕಿದೆ. ದೇಶದ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿಯೇ ಕಾಲಹರಣ ಮಾಡಿದ್ದಾರೆ. ಅಲ್ಲದೆ ಕೋಟ್ಯಂತರ ರೂಪಾಯಿ ರಾಷ್ಟ್ರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಅಬ್ಬರದ ಪ್ರಚಾರಕ್ಕೆ ಕಿವಿಕೊಡದೆ ರಾಯಚೂರು ಲೋಕಾಸಭೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರಿಗೆ ಮತ ನೀಡುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ನಾನು ಪಡೆದ 30 ಸಾವಿರ ಲೀಡ್‌ನ್ನು ಲೋಕಾಸಭೆ ಚುನಾವಣೆಯಲ್ಲಿಯೂ ಕಾಯ್ದುಕೊಂಡು ಬರಬೇಕು. ಇಲ್ಲವಾದಲ್ಲಿ ನನ್ನ ಮೇಲೆ ಕಾಂಗ್ರೆಸ್‌ ನಾಯಕರು ಸಂಶಯ ಪಡುವಂತಾಗುತ್ತದೆ. ಕಾರಣ ಕಾರ್ಯಕರ್ತರು ನನ್ನ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಈ ಚುನಾವಣೆಯಲ್ಲಿಯೂ ಶ್ರಮವಹಿಸುವ ಮೂಲಕ ಹೆಚ್ಚಿನ ಮತಗಳ ಅಂತರದಿಂದ ಬಿ.ವಿ. ನಾಯಕ ಅವರನ್ನು ಗೆಲ್ಲಿಸಬೇಕು ಮನವಿ ಮಾಡಿದರು.

ರಾಯಚೂರು ಲೋಕಾಸಭೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ಪ್ರಧಾನಿ ಮೋದಿ ಹವಾದಿಂದ ರಾಷ್ಟ್ರ ನಿರ್ಮಾಣವಾಗದು. ದೇಶದಲ್ಲಿ ಸುಭದ್ರ ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಕಾರಣ ಯುವಕರು ಬಿಜೆಪಿ ನಾಟಕೀಯ ದೇಶಪ್ರೇಮಕ್ಕೆ ಮನಸೋಲದೆ ಕಾಳಜಿ ಪೂರ್ವಕವಾಗಿ ದೇಶದ ಭದ್ರತಗೆ ದುಡಿಯುತ್ತಿರುವ ಕಾಂಗ್ರೆಸ್‌ ಪರ ಮತನೀಡಬೇಕೆಂದು ಮನವಿ ಮಾಡಿದರು.

ಎಂಎಲ್‌ಸಿ ಶರಣಪ್ಪ ಮಟ್ಟೂರ ಮಾತನಾಡಿ, ದೇಶದಲ್ಲಿ ಅಶಾಂತಿ ತಾಂಡಾವಾಡುತ್ತಿದೆ. ಧರ್ಮ-ಧರ್ಮಗಳ ಮಧ್ಯ ಬೆಂಕಿ ಹೊತ್ತಿ ಉರಿಯುತ್ತಿದೆ. ಕಾಂಗ್ರೆಸ್‌ನ ಮೂಲ ಮಂತ್ರ ಸೌಹಾರ್ಧತೆಯಾಗಿದೆ. ಅದನ್ನು ಕಾಪಾಡಿಕೊಂಡು ಬಂದಿದೆ. ದೇಶದಲ್ಲಿ ಧರ್ಮ ಧರ್ಮಗಳ ಮಧ್ಯ ಹೊತ್ತಿ ಉರಿಯುವ ಬೆಂಕಿಯನ್ನು ನಂದಿಸಲು ಕಾಂಗ್ರೆಸ್‌ ಮತ್ತೇ ದೇಶದ ಚುಕ್ಕಾಣಿ ಹಿಡಯಬೇಕು. ಕಾಂಗ್ರೆಸ್‌ ಐತಿಹಾಸಿಕ ಚರಿತ್ರೆ ಹೊಂದಿದೆ. ಇದನ್ನು ಮನಗಂಡು ಜನರ ಮನವೊಲಿಸಬೇಕು ಎಂದು
ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ವಿಧಾನ ಪರಿಷತ್‌ ಸದಸ್ಯ ಬಸವರಾಜಪ್ಪಗೌಡ ಇಟಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರ ಸೇವೆ ಅನನ್ಯ. ಕಾಂಗ್ರೆಸ್‌ ದುರ್ಬಲ ರೈತರು, ಕೂಲಿ ಕಾರ್ಮಿಕ ಏಳ್ಗೆ ಬಯಸಿ ಶತಮಾನದಿಂದ ದುಡಿಯುತ್ತ ಬಂದಿದೆ. ಪ್ರತಿಶತ 80ರಷ್ಟು ಜನ ಸಾಮಾನ್ಯರಿಗಾಗಿ ಕಾಂಗ್ರೆಸ್‌ ಶ್ರಮಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಹುಲಕಲ್‌, ಶಹಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ಸಿದ್ದಲಿಂಗಣ್ಣ ಆನೇಗುಂದಿ, ವೈ.ಪಿ. ಚಿಪ್ಪಾರ, ಹಣಮಂತ್ರಾಯ ದೊರಿ, ತಾಪಂ ಅಧ್ಯಕ್ಷ ಬಸವಂತ್ರಡ್ಡಿ ಸಾಹು, ಬಸನಗೌಡ ಪಾಟೀಲ, ಶಂಕ್ರಣ್ಣ ವಣಿಕ್ಯಾಳ, ಶರಣಗೌಡ ಗುಂಡಗುರ್ತಿ, ನೀಲಕಂಠ ಬಡಿಗೇರ, ಸಲಿಂ ಸಂಗ್ರಾಮ, ಗಿರೆಪ್ಪಗೌಡ ಬಾಣತಿಹಾಳ, ಮಾನಸಿಂಗ್‌ ಚವ್ಹಾಣ ಸೇರಿದಂತೆ ಯೂತ್‌ ಅಧ್ಯಕ್ಷ ಮೌನೇಶ ನಾಟೇಕಾರ, ಉಪಾಧ್ಯಕ್ಷ ಲಕ್ಷ್ಮಣ ದೇವಿ ನಗರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next