Advertisement

ನೆರೆ ವಾಹನಗಳ ಕಿರಿಕಿರಿ ದೊಡ್ಡದು!

10:55 AM Dec 07, 2019 | Team Udayavani |

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಸ್ಥಳೀಯ ನೋಂದಣಿ ವಾಹನಗಳ ಕೊಡುಗೆ ಮಾತ್ರವಲ್ಲ; ನಿತ್ಯ ಬಂದುಹೋಗುವ ನೆರೆ ರಾಜ್ಯ ಹಾಗೂ ಜಿಲ್ಲೆ ವಾಹನಗಳ ಕೊಡುಗೆ ಕೂಡ ದೊಡ್ಡದಿದೆ.

Advertisement

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ಅಂತಹ ವಾಹನಗಳ ಸಂಖ್ಯೆ ಶೇ. 20-22ರಷ್ಟಿದೆ. ಅಂದರೆ ಸ್ಥಳೀಯ ನೋಂದಣಿ ವಾಹನಗಳಿಗೆ ಹೋಲಿಸಿದರೆ, ಅವುಗಳ ಸಂಖ್ಯೆ 18-20 ಲಕ್ಷ. ಆ ಪೈಕಿ ಬಹುತೇಕ ನಾಲ್ಕು ಹಾಗೂ ಆರು ಚಕ್ರದ ವಾಹನಗಳದ್ದು ಸಿಂಹಪಾಲು. ಆದರೆ, ಇವುಗಳ ಸಂಚಾರ, ನಿಲುಗಡೆ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ– “ಇಲ್ಲ‘. ಇಲ್ಲಿರುವ ವಾಹನಗಳ ನಿಲುಗಡೆಗೇ ಸಮರ್ಪಕ ವ್ಯವಸ್ಥೆ ಇಲ್ಲ. ಸಂಚಾರಕ್ಕೂ ಯೋಗ್ಯ ರಸ್ತೆಗಳಿಲ್ಲ. ಈ ಹೆಚ್ಚುವರಿ ವಾಹನಗಳ ಓಡಾಟದಿಂದ ಮತ್ತಷ್ಟು ಸಂಚಾರದಟ್ಟಣೆ ಎದುರಾಗುತ್ತಿದೆ.

ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ರಸ್ತೆಗಳಿದ್ದು, ಆ ರಸ್ತೆಗಳು ಪ್ರತಿ ಗಂಟೆಗೆ 20-25 ಲಕ್ಷ ವಾಹನಗಳು ಸಂಚರಿಸುವ ಸಾಮಾರ್ಥ್ಯ ಹೊಂದಿವೆ. ಆದರೆ, ನೆರೆ ರಾಜ್ಯ ಮತ್ತು ಜಿಲ್ಲೆ ನೋಂದಣಿ ವಾಹನಗಳು ಹೆಚ್ಚುವರಿಯಾಗಿ ಸಂಚರಿಸುವುದರಿಂದ ವಾಹನಗಳ ವೇಗದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇನ್ನು ಕೆಲ ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಸುಗಮ ಸಂಚಾರಕ್ಕೆ ತೊಡಕಾಗಿದೆ ಎನ್ನುತ್ತಾರೆ ಸಂಚಾರ ತಜ್ಞರು.

ಕೈಗಾರಿಕಾ, ಐಟಿಬಿಟಿ ಪ್ರದೇಶಗಳಲ್ಲಿಯೇ ಹೆಚ್ಚು: ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಜಾಲಹಳ್ಳಿ ಹಾಗೂ ಐಟಿಬಿಟಿ ಪ್ರದೇಶಗಳಾದ ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ ಈ ಭಾಗಗಳಲ್ಲಿಯೇ ನಾಲ್ಕು ಹಾಗೂ ಆರು ಚಕ್ರದ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಸರಕು ಸಾಗಣೆ ಲಾರಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಹಾಜರಾಗುವುದಲ್ಲದೆ, ಪ್ರಯಾಣಿಕರನ್ನು ಹೊತ್ತುತರುವ ವಾಹನಗಳೂ ಜತೆಯಾಗುತ್ತವೆ. ಆದರೆ, ಇವುಗಳಿಗೆ ಬೇಕಾದ ಪಾರ್ಕಿಂಗ್‌ ವ್ಯವಸ್ಥೆ, ಗುಣಮಟ್ಯದ ರಸ್ತೆಗಳಿಲ್ಲ. ಇದರಿಂದ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಒಮ್ಮೆ ಬಂದ ಲಾರಿಗಳು ಕನಿಷ್ಠ 2-3 ದಿನಗಳ ಕಾಲ ನಗರದಲ್ಲೇ ಇರುತ್ತವೆ.

ಇನ್ನು ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಕೆಲ ಪೆಟ್ರೋಲ್‌ ಬಂಕ್‌, ಡಾಬಾಗಳ ಮುಂಭಾಗವೇ ಪಾರ್ಕಿಂಗ್‌ ತಾಣಗಳಾಗಿದ್ದು, ಹೆಚ್ಚುವರಿ ವಾಹನಗಳನ್ನು ರಸ್ತೆಗಳಲ್ಲೇ ನಿಲ್ಲಿಸುತ್ತಾರೆ. ಇತ್ತೀಚೆಗಷ್ಟೇ ನಗರ ಸಂಚಾರ ಪೊಲೀಸರು ಗುರುತಿಸಿರುವ ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿಯೂ ಈ ವಾಹನಗಳ ಹಾವಳಿ ಹೆಚ್ಚಿದೆ. ಉದಾಹರಣೆಗೆ ಬನ್ನೇರುಘಟ್ಟ, ಮೈಸೂರು ರಸ್ತೆ, ಹಳೇ ಮದ್ರಾಸ್‌ ರಸ್ತೆ, ಏರ್‌ಪೋರ್ಟ್‌ ರಸ್ತೆಗಳು. ಈ ಭಾಗಗಳಲ್ಲಿ ಪ್ರವಾಸಿಗಳೇ ಅಧಿಕವಾಗಿ ಓಡಾಡುತ್ತಾರೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

Advertisement

ನೆರೆ ರಾಜ್ಯದಲ್ಲಿ ನೊಂದಣಿ ನಗರದಲ್ಲಿ ಸಂಚಾರ!: ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಒರಿಸ್ಸಾ ಮತ್ತಿತರ ರಾಜ್ಯಗಳಿಂದ ನಗರಕ್ಕೆ ಸಾವಿರಾರು ಮಂದಿ ವಲಸಿಗರು ಜೀವನೋಪಾಯಕ್ಕಾಗಿ ಬಂದು ನಗರದಲ್ಲಿ ಬಹಳಷ್ಟು ವರ್ಷಗಳಿಂದ ವಾಸವಾಗಿದ್ದು, ಬಹುತೇಕ ಮಂದಿ ಅಲ್ಲಿ ನೋಂದಣಿ ಮಾಡಿಸಿದ್ದ ದ್ವಿಚಕ್ರ, ಕಾರುಗಳನ್ನು ಇಲ್ಲಿ ಬಳಸುತ್ತಾರೆ. ನಿಯಮದ ಪ್ರಕಾರ ಯಾವುದೇ ರಾಜ್ಯದಲ್ಲಿ ವಾಹನ ಖರೀದಿಸಿದರೆ, ದೇಶದ ಎಲ್ಲೆಡೆ ಸಂಚಾರ ಮಾಡಬಹುದು. ಆದರೆ, ಒಂದು ವೇಳೆ ವರ್ಷಗಟ್ಟಲೇ ವಾಸಿಸುವ ಅಗತ್ಯವಿದ್ದರೆ, ವಾಹನ ಮಾಲೀಕರು ಸ್ಥಳೀಯ ವಿಳಾಸ ಬದಲಾವಣೆ ಮಾಡಿಕೊಂಡು, ತೆರಿಗೆ ಪಾವತಿಸಿ, ಶಾಶ್ವತ ನೋಂದಣಿ ಪಡೆದು ಹೊಸ ನಂಬರ್‌ ಪ್ಲೇಟ್‌ ಪಡೆಯಬೇಕು. ಆದರೆ, ವಾಹನ ಸವಾರರು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಇನ್ನು ಕೆಲವರು ಪ್ರಾಜೆಕ್ಟ್ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ವರ್ಷಗಟ್ಟಲೇ ಇಲ್ಲೇ ಇರುತ್ತಾರೆ. ಅಂತಹ ವಾಹನಗಳ ವಿರುದ್ಧ ಕ್ರಮಕೈಗೊಳ್ಳುವುದು ಕಷ್ಟ. ಈ ಮಧ್ಯೆ ಗೋವಾ ಮತ್ತು ಪುದುಚೇರಿಯಲ್ಲಿ ವಾಹನ ನೋಂದಣಿ ಶುಲ್ಕ ರಾಜ್ಯಕ್ಕಿಂತ ಕಡಿಮೆಯಿದೆ. ಹೀಗಾಗಿ ನಗರದ ಸಾಕಷ್ಟು ಮಂದಿ ಆ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿ, ಇಲ್ಲಿ ಸಂಚರಿಸುತ್ತಾರೆ. ಈ ಪೈಕಿ ಕೆಲವರು ಸ್ಥಳೀಯ ತೆರಿಗೆ ಪಾವತಿಸಿದರೆ, ಇನ್ನು ಕೆಲವರು ಅಕ್ರಮವಾಗಿ ಸಂಚರಿಸುತ್ತಿದ್ದಾರೆ.

ವಿಶೇಷ ಕಾರ್ಯಾಚರಣೆ ವೇಳೆ ಪತ್ತೆಯಾದಾಗ ಎಚ್ಚರಿಕೆ ನೀಡಿದರೆ, ಕೆಲವೇ ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಸದ್ಯದಲ್ಲೇ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ತಾಂತ್ರಿಕ ನೆರವು ಇಲ್ಲದಿರುವುದರಿಂದ ಅಂತಹ ವಾಹನಗಳನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲು ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

 

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next