Advertisement

ಸ್ಥಳೀಯಾಡಳಿತ: ಅಧಿಕಾರದ ಚುಕ್ಕಾಣಿ ಯಾರ ಕೈಗೆ ?

11:10 PM Mar 12, 2020 | Sriram |

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಆಡಳಿತ ತಣ್ಣಗಾಗಿದ್ದು, ಈಗ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಹುದ್ದೆಗೇರುವವರ ಬಗ್ಗೆ ಲೆಕ್ಕಾಚಾರಗಳು, ಕುತೂಹಲ ಜೋರಾಗಿವೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ, ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಯಾರು ಗದ್ದುಗೆಯೇರಬಹುದು? ಪರಿಸ್ಥಿತಿ ಯಾರಿಗೆ ಅನುಕೂಲಕರ ಎಂಬ ಕುರಿತ ಸ್ಥೂಲ ನೋಟ ಇಲ್ಲಿದೆ.

Advertisement

ಲಲನೆಯರ ಕೈಗೆ ಬರಲಿದೆ ಉಡುಪಿ ನಗರಾಡಳಿತ
ಉಡುಪಿ: ಇಲ್ಲಿನ ನಗರಸಭೆಯಲ್ಲಿ ಮೀಸಲಾತಿ ಪ್ರಕಾರ ಹಿಂದುಳಿದ ವರ್ಗ “ಎ’ ಮಹಿಳೆ ಅಧ್ಯಕ್ಷರಾಗಿ, ಸಾಮಾನ್ಯ ಮಹಿಳೆ ಉಪಾಧ್ಯಕ್ಷರಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.

ನಗರಸಭೆಯ ಒಟ್ಟು 35 ವಾರ್ಡುಗಳಲ್ಲಿ 31 ವಾರ್ಡುಗಳಲ್ಲಿ ಬಿಜೆಪಿ, ನಾಲ್ಕು ವಾರ್ಡುಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಬಿಜೆಪಿ ಸದಸ್ಯರಲ್ಲಿ ಒಂಬತ್ತು ಸದಸ್ಯರು ಹಿಂದುಳಿದ ವರ್ಗ “ಎ’ ಮಹಿಳೆ ಗುಂಪಿಗೆ ಸೇರಿದವರು. ಸಾಮಾನ್ಯ ಮಹಿಳೆಯರು ಉಪಾಧ್ಯಕ್ಷರಾಗ ಬೇಕಾಗಿರುವುದರಿಂದ ಬಿಜೆಪಿಯ ಒಟ್ಟು 15 ಮಹಿಳಾ ಸದಸ್ಯರಿಗೂ ಅವಕಾಶವಿದೆ.

ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದವರಲ್ಲಿ ಸುಮಿತ್ರಾ ನಾಯಕ್‌ ಮೂರನೆಯ ಬಾರಿ ಗೆಲುವು ಸಾಧಿಸಿದ ಅತಿ ಹಿರಿಯ ಸದಸ್ಯೆ. ಇವರ ಅನಂತರದ ಸ್ಥಾನದಲ್ಲಿರುವ ಹಿರಿಯ ಸದಸ್ಯೆ ಗೀತಾ ದೇವರಾಯ ಶೇಟ್‌. ಇವರು ಎರಡನೆಯ ಬಾರಿ ಗೆಲುವು ಸಾಧಿಸಿದವರು. ಹಿಂದಿನ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು ಬಳಿಕ ಬಿಜೆಪಿ ಸೇರಿದವರು. ಗೋಪಾಲಪುರ ವಾರ್ಡ್‌ ಸದಸ್ಯೆ ಮಂಜುಳಾ ವಿ. ನಾಯಕ್‌ ಹಿಂದೊಮ್ಮೆ ನಾಮನಿರ್ದೇಶನ ಸದಸ್ಯರಾಗಿದ್ದರು. ಹೀಗಾಗಿ ಇವರು ಎರಡನೆಯ ಬಾರಿಯ ಅನುಭವವಿರುವವರಾದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ದೊರಕುವುದಿಲ್ಲ. ಇವರು ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಸದಸ್ಯರಾಗಿ ಆಯ್ಕೆಯಾದವರು. ಆರ್ಯ ವೈಶ್ಯವಾಣಿ ಸಮಾಜದವರಾದ ಕಾರಣ ಬಿಸಿಎ ವರ್ಗದಲ್ಲಿ ಬರುವುದಿಲ್ಲ.

ಸುಮಿತ್ರಾ ನಾಯಕ್‌ ಜ್ಯೇಷ್ಠ ಸದಸ್ಯೆ
ಪಕ್ಷದಲ್ಲಿ ಜ್ಯೇಷ್ಠ ಸದಸ್ಯರಾಗಿ ಹಿರಿತನವನ್ನು ಪರಿಗಣಿಸುವುದಿದ್ದರೆ ಸುಮಿತ್ರಾ ನಾಯಕ್‌ ಅವರಿಗೆ ಅಧ್ಯಕ್ಷ ಸ್ಥಾನ ದೊರಕುವ ಸಾಧ್ಯತೆ ಇದೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನ ಮಂಜುಳಾ ನಾಯಕ್‌ ಅವರಿಗೆ ದೊರಕಲೂಬಹುದು. ಈ ಹಿಂದೆ ಪ್ರಕಟವಾಗಿದ್ದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗಿದ್ದರೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಇತ್ತು. ಈಗ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಪಾಲಾಗಿದೆ. 2018ರ ಆಗಸ್ಟ್‌ 31ರಂದು ನಗರಸಭಾ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು.

Advertisement

ಬಿಸಿಎ ಮೀಸಲಾತಿಯಲ್ಲಿ ಯಾರು ಅರ್ಹರು?
ಬಿಲ್ಲವರು, ಮೊಗವೀರರು, ಸ್ಥಾನಿಕ ಬ್ರಾಹ್ಮಣರು, ರಾಜಾಪುರ ಸಾರಸ್ವತ ಬ್ರಾಹ್ಮಣರು, ಶೆಟ್ಟಿಗಾರ್‌, ಶೇರಿಗಾರ್‌ ಮೊದಲಾದ ವರ್ಗದವರು ಹಿಂದುಳಿದ ವರ್ಗ ಎ ಗುಂಪಿನಲ್ಲಿ ಬರುತ್ತಾರೆ. ಕೊಳ ವಾರ್ಡಿನ ಲಕ್ಷ್ಮೀ ಮಂಜುನಾಥ ಸಾಲಿಯಾನ್‌, ಸುಬ್ರಹ್ಮಣ್ಯನಗರದ ಜಯಂತಿ ಕೆ. ಪೂಜಾರಿ, ಸರಳೇಬೆಟ್ಟಿನ ವಿಜಯಲಕ್ಷ್ಮೀ, ಶೆಟ್ಟಿಬೆಟ್ಟಿನ ಅಶ್ವಿ‌ನಿ ಅರುಣ್‌ ಪೂಜಾರಿ, ಪರ್ಕಳದ ಸುಮಿತ್ರಾ ನಾಯಕ್‌, ಮಣಿಪಾಲದ ಕಲ್ಪನಾ ಸುದಾಮ, ಕಡಿಯಾಳಿಯ ಗೀತಾ ದೇವರಾಯ ಶೇಟ್‌, ಬನ್ನಂಜೆಯ ಸವಿತಾ ಹರೀಶ ರಾಮ್‌ ಭಂಡಾರಿಯವರು ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರು. ಒಳಕಾಡು ವಾರ್ಡಿನಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿಯಿಂದ ಗೆದ್ದ ರಜನಿ ಹೆಬ್ಟಾರ್‌ ಅವರೂ ಅಧ್ಯಕ್ಷ ಸ್ಥಾನಕ್ಕೆ ಅರ್ಹರು.

ಕಾಂಗ್ರೆಸ್‌ನಿಂದ ನಾಲ್ವರು ಸದಸ್ಯರಿದ್ದು ಕಿನ್ನಿಮೂಲ್ಕಿ ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿಯಿಂದ ಗೆದ್ದ ಅಮೃತಾ ಕೃಷ್ಣಮೂರ್ತಿಯವರೂ ಅಧ್ಯಕ್ಷ ಸ್ಥಾನಕ್ಕೆ ಅರ್ಹರು. ಹೀಗಾಗಿ ಒಟ್ಟಾರೆ ಹತ್ತು ಮಂದಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರು. ಕಾಂಗ್ರೆಸ್‌ ಸೇರಿದಂತೆ ಒಟ್ಟು 17 ಮಂದಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರು.

ಶೀಘ್ರ ನಿರ್ಣಯ
ನಾವಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಇನ್ನು 2-3 ದಿನಗಳಲ್ಲಿ ಸಭೆ ಸೇರಿ ಸಂಸದ, ಶಾಸಕರ ಅಭಿಪ್ರಾಯ ಪಡೆದು ನಿರ್ಣಯ ತಳೆಯುತ್ತೇವೆ.
– ಕೆ. ಸುರೇಶ ನಾಯಕ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ,
-ಮಹೇಶ್‌ ಠಾಕೂರ್‌, ನಗರ ಬಿಜೆಪಿ ಅಧ್ಯಕ್ಷ, ಉಡುಪಿ.

ಕಾಪು: ಅಧ್ಯಕ್ಷ ಹುದ್ದೆಗೆ ಭಾರೀ ಪೈಪೋಟಿ ಸಾಧ್ಯತೆ
ಕಾಪು: ಇಲ್ಲಿನ ಪುರಸಭೆ ಯಲ್ಲಿ ಘೋಷಿತ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆಯು ಹಿಂದುಳಿದ ವರ್ಗ “ಎ’ಗೆ ಮೀಸಲಾಗಿದ್ದು, ಇದಕ್ಕಾಗಿ ಕಾಂಗ್ರೆಸ್‌, ಬಿಜೆಪಿಯ 14 ಮಂದಿ ಸದಸ್ಯರಲ್ಲಿ ಆಕಾಂಕ್ಷೆಗಳು ಗರಿಗೆದರಿವೆ. ಆದ್ದರಿಂದ ಭಾರೀ ಪೈಪೋಟಿ ನಿಚ್ಚಳವಾಗಿದೆ.

ಪುರಸಭೆಯ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ “ಎ’ ಮತ್ತು ಉಪಾಧ್ಯಕ್ಷ ಹುದ್ದೆಯು ಪರಿಶಿಷ್ಟ ಜಾತಿ ಮಹಿಳೆಗೆ ಅಧಿಕಾರ ಚಲಾವಣೆಗೆ ಅವಕಾಶ ದೊರಕಿದೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಬಿಜೆಪಿಯಿಂದ 6 ಮಂದಿ ಕೌನ್ಸಿಲರ್‌ಗಳು, ಕಾಂಗ್ರೆಸ್‌ ಪಕ್ಷದಿಂದ 8 ಮಂದಿ ಕೌನ್ಸಿಲರ್‌ಗಳಿಗೆ ಅವಕಾಶವಿದೆ.

ಬಿಜೆಪಿಗೆ ಅಧಿಕಾರದ ಅವಕಾಶ
23 ಸದಸ್ಯರ ಬಲವಿರುವ ಕಾಪು ಪುರಸಭೆಯಲ್ಲಿ ಕಾಂಗ್ರೆಸ್‌ 12, ಬಿಜೆಪಿ 11 ಮಂದಿ ಕೌನ್ಸಿಲರ್‌ಗಳನ್ನು ಹೊಂದಿವೆ. ಪ್ರಸ್ತುತ ಶಾಸಕ ಮತ್ತು ಸಂಸದರ ಮತ ಸೇರಿ ಬಿಜೆಪಿ 13 ಮತಗಳ ಬಲದೊಂದಿಗೆ ಗದ್ದುಗೆಗೇರುವ ವಿಶ್ವಾಸವನ್ನು ಹೊಂದಿದೆ.

ಉಪಾಧ್ಯಕ್ಷ ಹುದ್ದೆಗೆ ಮಾಜಿ ಅಧ್ಯಕ್ಷರ ಮಧ್ಯೆ ಪೈಪೋಟಿ
ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್‌ ಪಕ್ಷದ ಇಬ್ಬರು ಕೌನ್ಸಿಲರ್‌ಗಳ ನಡುವೆ ಸ್ಪರ್ಧೆ ನಡೆಯಲಿದೆ. ಪರಿಶಿಷ್ಟ ಜಾತಿ ಮಹಿಳೆಯ ಪರ ಬಂದಿರುವ ಮೀಸಲಾತಿಯಂತೆ ಸೌಮ್ಯಾ ಎಸ್‌. ಮತ್ತು ಮಾಲಿನಿ ಇವರ ಪೈಪೋಟಿ ನಡೆಯುವ ಸಾಧ್ಯತೆಗಳಿವೆ. ಇವರಿಬ್ಬರೂ ಕೂಡಾ ಈಗಾಗಲೇ ಅಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದಾರೆ.

ಯಾರ್ಯಾರಿಗಿದೆ ಅವಕಾಶ
ಪುರಸಭೆ ಅಧ್ಯಕ್ಷ ಹುದ್ದೆಗೆ ಬಿಜೆಪಿಯಿಂದ ಅನಿಲ್‌ ಕುಮಾರ್‌, ವಿಜಯ ಕರ್ಕೇರ, ಶಾಂಭವಿ ಕುಲಾಲ್‌, ಮಮತಾ ಸಾಲ್ಯಾನ್‌, ಸುಧಾ ರಮೇಶ್‌, ಗುಲಾಬಿ ಪಾಲನ್‌ ಅರ್ಹತೆ ಗಳಿಸಿದ್ದರೆ, ಕಾಂಗ್ರೆಸ್‌ನಿಂದ ಎಚ್‌. ಎಸ್ಮಾನ್‌, ಅಬ್ದುಲ್‌ ಹಮೀದ್‌, ಮಹಮ್ಮದ್‌ ಇಮ್ರಾನ್‌, ಶಾಬು ಸಾಹೇಬ್‌, ಸುರೇಶ್‌ ದೇವಾಡಿಗ, ಸುಲೋಚನಾ ಬಂಗೇರ, ವಿಜಯಲಕ್ಷ್ಮೀ ಕೋಟ್ಯಾನ್‌, ಅಶ್ವಿ‌ನಿ ಅರ್ಹರಾಗಿದ್ದಾರೆ.

ಸಾಲಿಗ್ರಾಮ: ಸಾಮಾನ್ಯ ವರ್ಗದ ಸದಸ್ಯರ ಮೇಲಾಟ
ಕೋಟ: ಸಾಲಿಗ್ರಾಮ ಪ.ಪಂ. ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಹಾಗೂ ಉಪಾಧ್ಯಕ್ಷ ಹಿಂದುಳಿದ ವರ್ಗ ಎ. ಗೆ ಮೀಸಲಾಗಿದ್ದು ಬಹುಮತ ಹೊಂದಿದ ಬಿಜೆಪಿ ಪಾಳಯದಿಂದ ಅಧ್ಯಕ್ಷ, ಉಪಾಧ್ಯಕ್ಷರು ಯಾರಾ ಗಲಿದ್ದಾರೆ ಎನ್ನುವ ಚರ್ಚೆ ಆರಂಭಗೊಂಡಿದೆ.

16 ಸ್ಥಾನಗಳಿಗೆ 2018 ಸೆಪ್ಟಂಬರ್‌ನಲ್ಲಿ ಚುನಾವಣೆ ನಡೆದಿದ್ದಾಗ ಬಿಜೆಪಿ 10 ಸ್ಥಾನ, ಕಾಂಗ್ರೆಸ್‌ 5 ಹಾಗೂ 1 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.

ಉಪಾಧ್ಯಕ್ಷರ ಹುದ್ದೆಗೆ ಯಾರು?
ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ “ಎ’ಗೆ ಮೀಸಲಾಗಿರುವುದರಿಂದ ಬಿಜೆಪಿಯ ಶ್ಯಾಮ್‌ ಸುಂದರ್‌ ನಾೖರಿ, ಭಾಸ್ಕರ್‌ ಬಂಗೇರ, ಸಂಜೀವ ದೇವಾಡಿಗ, ಕಾರ್ಕಡ ರಾಜು ಪೂಜಾರಿ, ರೇಖಾ ಕೇಶವ, ಗಿರಿಜಾ ಪೂಜಾರಿಯವರಿಗೆ ಅವಕಾಶಗಳಿದೆ.

ಅಧ್ಯಕ್ಷ ಸ್ಥಾನಕ್ಕೆ ಯಾರು?
ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನವಿರುವುದರಿಂದ ಬಿಜೆಪಿಯ 10 ಮಂದಿ ಸದಸ್ಯರಿಗೂ ಅರ್ಹತೆ ಇದೆ. ಹಿಂದೊಮ್ಮೆ ಅಧ್ಯಕ್ಷರಾಗಿದ್ದ, ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಪಡುಹೋಳಿ ವಾರ್ಡ್‌ನ ಕಾರ್ಕಡ ರಾಜು ಪೂಜಾರಿ, 3ನೇ ಬಾರಿ ಸದಸ್ಯರಾಗಿರುವ ಮೂಡುಹೋಳಿ ವಾರ್ಡ್‌ನ ಸಂಜೀವ ದೇವಾಡಿಗ, 2ನೇ ಬಾರಿ ಸದಸ್ಯರಾಗಿರುವ ಕಾರ್ತಟ್ಟು ವಾರ್ಡ್‌ನ ಶ್ಯಾಮಸಂದರ್‌ ನಾೖರಿಯವರ ಹೆಸರು ಮುಂಚೂಣಿಯಲ್ಲಿದೆ. ಇದರ ಜತೆಗೆ ಹಿಂದೆ ಉಪಾಧ್ಯಕ್ಷರಾಗಿದ್ದು, 2ನೇ ಅವಧಿಗೆ ಆಯ್ಕೆಯಾದ ದೊಡ್ಮನೆಬೆಟ್ಟು ವಾರ್ಡ್‌ನ ಸುಲತಾ ಹೆಗ್ಡೆ, ಯಕ್ಷಿಮಠ ವಾರ್ಡ್‌ನ ಭಾಸ್ಕರ್‌ ಬಂಗೇರ, ಭಗವತಿ ವಾರ್ಡ್‌ನ ಆನಂದ, ತೆಂಕುಹೋಳಿ ವಾರ್ಡ್‌ನ ಗಿರಿಜಾ ಪೂಜಾರಿ, ಮಾರಿಗುಡಿ ವಾರ್ಡ್‌ನ ಸುಕನ್ಯಾ ಶೆಟ್ಟಿ, ವಿಷ್ಣುಮೂರ್ತಿ ವಾರ್ಡ್‌ನ ಅನಸೂಯಾ ಹೇಳೆì, ಪಡುಕರೆಯ ರೇಖಾ ಕೇಶವ ಅವರಿಗೆ ಕೂಡ ಮೀಸಲಾತಿ ಆಧಾರದಲ್ಲಿ ಅಧ್ಯಕ್ಷರಾಗುವ ಅರ್ಹತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next